ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಂಆರ್‌ಎಂಸಿ ಕಲ್ಯಾಣ ಕರ್ನಾಟಕದ ಹೆಮ್ಮೆ’

ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನ ಹಳೆ ವಿದ್ಯಾರ್ಥಿಗಳ ಕಟ್ಟಡಕ್ಕೆ ಶಿಲಾನ್ಯಾಸ
Last Updated 13 ಮೇ 2022, 2:49 IST
ಅಕ್ಷರ ಗಾತ್ರ

ಕಲಬುರಗಿ: ‘ವಿಶ್ವಮಟ್ಟದಲ್ಲಿ ಗುರುತಿಸಿಕೊಂಡ ಹಲವು ವೈದ್ಯರನ್ನು ನೀಡಿದ್ದು ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನ ಹಿರಿಮೆ. ಈವರೆಗೆ ಅಂದಾಜು 15 ಸಾವಿರಕ್ಕೂ ಹೆಚ್ಚು ವೈದ್ಯರು ನಾನಾ ಕಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ ಹೇಳಿದರು.

ಇಲ್ಲಿನ ಬಸವೇಶ್ವರ ಆಸ್ಪತ್ರೆ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ, ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನ (ಎಂಆರ್‌ಎಂಸಿ) ಹಳೆ ವಿದ್ಯಾರ್ಥಿಗಳ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಇಲ್ಲಿಗೆ 59 ವರ್ಷಗಳ ಹಿಂದೆ ಎಂಆರ್‌ಎಂಸಿ ಕಾಲೇಜು ಆರಂಭವಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಆರೋಗ್ಯ ಹಾಗೂ ವೈದ್ಯಶಿಕ್ಷಣ ಕ್ಷೇತ್ರದಲ್ಲಿ ಈ ಕಾಲೇಜು ನೀಡಿದ ಕಾಣಿಕೆ ದೊಡ್ಡದು. ಹಳೆಯ ವಿದ್ಯಾರ್ಥಿಗಳೆಲ್ಲ ಸಮಾವೇಶಗೊಂಡಿದ್ದು ಕಾಲೇಜಿನ ಅಭಿವೃದ್ಧಿಗೆ ಪೂರಕವಾಗಲಿದೆ. ಅಲ್ಯುಮ್ನಿ ಕಟ್ಟಡದ ಮೂಲಕ ಇದು ಮೊದಲಾಗಲಿದೆ. ದೇಶ ಹಾಗೂ ವಿದೇಶಗಳಲ್ಲಿರುವ ಎಲ್ಲ ಹಳೆಯ ವಿದ್ಯಾರ್ಥಿಗಳನ್ನೂ ಸಂಪರ್ಕಿಸಿ, ಒಂದೇ ನೆರಳಿನಡಿ ತರಬೇಕು. ಅವರ ಸಲಹೆ, ಸೂಚನೆಗಳನ್ನು ಕಲೆಹಾಕಿ ವೈದ್ಯಕೀಯ ಕಾಲೇಜನ್ನು ವಿಶ್ವಮಟ್ಟದ ಅತ್ಯುತ್ತಮ ಕಾಲೇಜುಗಳಲ್ಲಿ ಒಂದು ಎಂಬಂತೆ ಬೆಳೆಸಬೇಕು’ ಎಂದರು.

ಸಾನ್ನಿಧ್ಯ ವಹಿಸಿದ್ದಸಮಾದಾನ ಕೇಂದ್ರದ ಜಡೇ ಶಾಂತಲಿಂಗೇಶ್ವರ ಸ್ವಾಮೀಜಿ ಅವರು ನೀಡಿದ ಸಂದೇಶ ಓದಲಾಯಿತು. ‘ಕೃಷಿ ಕಾರ್ಯದಲ್ಲಿ ಯಶಸ್ವಿಯಾಗಬೇಕೆಂದರೆ ಹಳೆಯ ಹಾಗೂ ಹೊಸ ಎತ್ತುಗಳನ್ನು ಕೂಡಿಸಿ ಗಳೆ ಹೊಡೆಯುವುದು ರೈತರ ರೂಢಿ. ಹೊಸ ಎತ್ತಿನ ಹುಮ್ಮಸ್ಸು ಹಳೆಯ ಎತ್ತಿಗೆ, ಹಳೆಯ ಎತ್ತಿನ ಅನುಭವ ಹೊಸ ಎತ್ತಿಗೆ ಬರುತ್ತದೆ. ಇದೇ ರೀತಿ ಎಂಆರ್‌ಎಂಸಿ ಕಾಲೇಜಿನ ಹಳೆಯ ಹಾಗೂ ಹೊಸ ವಿದ್ಯಾರ್ಥಿಗಳ ಸಮಾಗಮವಾಗಲಿ. ಇಲ್ಲಿ ಹಳೇ ಬೇರು ಹೊಸ ಚಿಗುರು ಕೂಡಿಕೊಂಡ ಅಭಿವೃದ್ಧಿ ಮುಂದಾಗಲಿ’ ಎಂದು ಶ್ರೀಗಳು ಹೇಳಿದರು.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಮಾತನಾಡಿ, ‘ಎಂಆರ್‌ಎಂಸಿ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳೆಲ್ಲ ಒಂದಾಗಿ ಸೇರುತ್ತಿರುವುದು ಸಂತಸದ ಸಂಗತಿ. ನಿಮ್ಮನ್ನು ಇಷ್ಟು ಎತ್ತರಕ್ಕೆ ಬೆಳೆಸಿದ ಕಾಲೇಜಿನ ಅಭಿವೃದ್ಧಿಗೆ ಕೈ ಜೋಡಿಸುವ ಅವಕಾಶ ಸಿಕ್ಕಿದ್ದು ಅದೃಷ್ಟ. ಈ ಕಟ್ಟಡ ನಿರ್ಮಾಣಕ್ಕೆ ಎಲ್ಲರೂ ನೆರವು ನೀಡಬೇಕಿದೆ’ ಎಂದರು.

ಸಂಸ್ಥೆಯ ಉಪಾಧ್ಯಕ್ಷ ಡಾ.ಶರಣಬಸಪ್ಪ ಹರವಾಳ, ಕಾರ್ಯದರ್ಶಿ ಡಾ.ಜಗನ್ನಾಥ ಬಿಜಾಪುರೆ, ಜಂಟಿ ಕಾರ್ಯದರ್ಶಿ ಡಾ.ಮಹಾದೇವಪ್ಪ ರಾಂಪೂರೆ, ಆಡಳಿತ ಮಂಡಳಿ ಸದಸ್ಯರಾದಡಾ.ಬಸವರಾಜ ಖಂಡೇರಾವ್, ಡಾ.ಕೈಲಾಸ ಪಾಟೀಲ, ವಿನಯ ಪಾಟೀಲ, ಡಾ.ಎಸ್.ಬಿ.ಕಾಮರೆಡ್ಡಿ, ಡಾ.ನಾಗೇಂದ್ರ ಮಂಠಾಳೆ, ಸೋಮನಾಥ ನಿಗ್ಗುಡಗಿ, ಅನೀಲ ಪಟ್ಟಣ, ಸಾಯಿನಾಥ ಪಾಟೀಲ, ಡಾ.ರಾಜಶೇಖರ ಪಾಟೀಲ, ಡೀನ್ ಎಸ್.ಎಂ.ಪಾಟೀಲ ಇದ್ದರು. ಡಾ.ಸುಮಾ ಹಾಗೂ ಡಾ.ಪಾರ್ವತಿ ಪ್ರಾಥಿಸಿದರು. ಡಾ.ಕೂಡ್ಲಪ್ಪ ಅಂಗಡಿ ನಿರೂಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT