ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಪಾಲರ ನಡೆಗೆ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಖಂಡನೆ

Published 18 ಆಗಸ್ಟ್ 2024, 20:03 IST
Last Updated 18 ಆಗಸ್ಟ್ 2024, 20:03 IST
ಅಕ್ಷರ ಗಾತ್ರ

ಕಲಬುರಗಿ: ನಗರದಲ್ಲಿ ಕಸಾಪ ಜಿಲ್ಲಾ ಘಟಕ ಆಯೋಜಿಸಿದ್ದ ಜಿಲ್ಲಾ ಪ್ರಥಮ ದಲಿತ ಚಳವಳಿ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದಕ್ಕೆ ಭಾನುವಾರ ಖಂಡನೆ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ‘ಸಮಾಜದಲ್ಲಿ ಜಾತೀಯತೆ ಇನ್ನೂ ಹೋಗಿಲ್ಲ. ಹುದ್ದೆಯಿಂದ ರಾಜ್ಯಪಾಲರ ಬಗ್ಗೆ ಗೌರವವಿದೆ. ಆದರೆ, ಆ ಸ್ಥಾನದಲ್ಲಿರುವ ವ್ಯಕ್ತಿ ಮೂರ್ಖರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗದವರು. ಅದನ್ನು ಸಹಿಸದೇ ರಾಜ್ಯಪಾಲರು ನರೇಂದ್ರ ಮೋದಿ ಅವರ ಕೈಗೊಂಬೆಯಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುತ್ತಾರೆ ಎಂದರೆ ಏನರ್ಥ’ ಎಂದು ಪ್ರಶ್ನಿಸಿದರು.

‘ಹಿಂದುಳಿದ ವರ್ಗದವರು ಮುಖ್ಯಮಂತ್ರಿ ಆಗಬಾರದು. ಬ್ರಾಹ್ಮಣರು, ಇಲ್ಲವೇ ಲಿಂಗಾಯತರು ಇಲ್ಲವೇ ಒಕ್ಕಲಿಗರು ಆಗಬೇಕು. ಅಂದರೆ ಮಾತ್ರ, ಕರ್ನಾಟಕದವರಿಗೆ ಆನಂದ. ರಾಜ್ಯಕ್ಕೆ ಈತನಕ ಒಬ್ಬರೂ ದಲಿತ ಮುಖ್ಯಮಂತ್ರಿ ಆಗದಿರುವುದು ನಮ್ಮ ದುರ್ದೈವ’ ಎಂದು ವಿಷಾದಿಸಿದರು.

ಸಮ್ಮೇಳನದ ಅಧ್ಯಕ್ಷ ಡಿ.ಜಿ.ಸಾಗರ್ ಮಾತನಾಡಿ, ‘ಸಿದ್ದರಾಮಯ್ಯ ವಿರುದ್ಧದ ತಪ್ಪನ್ನು ಜೆಡಿಎಸ್‌–ಬಿಜೆಪಿ ಭೂತಗನ್ನಡಿ ಬಳಸಿ ತೋರಿಸಿ, ಕೇಂದ್ರದ ಬೆಂಬಲ ಪಡೆದು ರಾಜ್ಯಪಾಲರ ಮೂಲಕ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿಸಿವೆ. ಸುಳ್ಳು ಆರೋಪ ಇದಾಗಿರುವ ಕಾರಣ ನೈತಿಕತೆಯ ಪ್ರಶ್ನೆಯೇ ಬರಲ್ಲ. ಮುಖ್ಯಮಂತ್ರಿ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬಾರದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT