ಶನಿವಾರ, ಅಕ್ಟೋಬರ್ 16, 2021
29 °C

ಮುಲ್ಲಾಮಾರಿ ಯೋಜನೆ: ತಪ್ಪಿತಸ್ಥರ ವಿರುದ್ಧ ಕ್ರಮ- ಗೋವಿಂದ ಕಾರಜೋಳ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಚಿಂಚೋಳಿ ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆ ಕಾಮಗಾರಿಯಲ್ಲಿಯ ಭ್ರಷ್ಟಾಚಾರ ಆರೋಪದ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯ ಎಂಜಿನಿಯರ್‌ಗೆ ಸೂಚಿಸಲಾಗಿದೆ. ಅವರ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಕಮಲಾಪುರ ತಾಲ್ಲೂಕಿನ ಗಂಡೋರಿ ನಾಲಾ ಅಣೆಕಟ್ಟೆಗೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯ ಕಾಲುವೆ ಹಾಗೂ ವಿತರಣಾ ನಾಲೆಗಳ ದುರಸ್ತಿಗೆ ಬಿಡುಗಡೆಯಾದ ಹಣದಲ್ಲಿ ಕಳಪೆ ಕಾಮಗಾರಿ ನಿರ್ವಹಿಸಲಾಗಿದೆ ಎಂಬ ದೂರು ಬಂದಿದ್ದವು. ಆ ದೂರನ್ನು ಆಧರಿಸಿ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ’ ಎಂದರು.

‘ಗಂಡೋರಿ ನಾಲಾ ಅಣೆಕಟ್ಟೆಯನ್ನು ಸರಿಯಾಗಿ ಇಟ್ಟುಕೊಂಡಿಲ್ಲ ಎಂಬುದನ್ನು ಪರಿಶೀಲನೆ ಸಂದರ್ಭದಲ್ಲಿ ಗಮನಿಸಿದ್ದೇನೆ. ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಲು ಕರ್ನಾಟಕ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಸೂಚಿಸಿರುವೆ’ ಎಂದರು.

‘ಅಣೆಕಟ್ಟೆ ಸಂಪರ್ಕಿಸುವ 4 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆ ದುರಸ್ತಿ ಮಾಡುವಂತೆ ತಿಳಿಸಿದ್ದೇನೆ. ಅಲ್ಲದೇ, ಕಾಲುವೆಯ ಕೊನೆ ಹಂತದವರೆಗೂ ನೀರು ಹರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ. ಇನ್ನೂ ನಾಲೆ ನಿರ್ಮಾಣ ಗುತ್ತಿಗೆ ಪಡೆದವರ ನಿರ್ವಹಣೆಯಲ್ಲೇ ಇದ್ದು, ಗುತ್ತಿಗೆದಾರರೇ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಬೇಕಿದೆ. ಅವಧಿ ಮುಗಿದಿದ್ದರೆ ಜಲಸಂಪನ್ಮೂಲ ಇಲಾಖೆಗೆ ಪ್ರಸ್ತಾವ ಸಲ್ಲಿಸಿದರೆ ಹಣ ಬಿಡುಗಡೆ ಮಾಡಲಿದ್ದೇವೆ’ ಎಂದರು.

ಗಂಡೋರಿ ನಾಲಾ ನೀರಾವರಿ ಯೋಜನೆಯಿಂದ 7,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಬೇಕಿತ್ತು. ಆದರೆ, 5000 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ನೀರು ಟೇಲ್‌ ಎಂಡ್‌ವರೆಗೂ ಹೋಗಬೇಕು. ಕೊನೆಯ ರೈತನಿಗೂ ನೀರು ತಲುಪದಿದ್ದರೆ ಯೋಜನೆ ಯಶಸ್ವಿಯಾಗುವುದಿಲ್ಲ. ರಾಜ್ಯದ ಎಲ್ಲ ಜಲಾಶಯಗಳಲ್ಲಿ ಕೈಗೆತ್ತಿಕೊಂಡ ನೀರಾವರಿ ಯೋಜನೆಗಳ ಪೈಕಿ ಶೇ 20ರಷ್ಟು ನೀರು ಕೊನೆ ಹಂತದವರೆಗೆ ಹೋಗಿಲ್ಲ. ನಾಲೆಗಳ ದುರಸ್ತಿಗೆ ಅಗತ್ಯ ಹಣಕಾಸನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಚಿವರನ್ನು ಭೇಟಿ ಮಾಡಿದ ಅಣೆಕಟ್ಟೆ ಸುತ್ತಮುತ್ತಲಿನ ಗ್ರಾಮಸ್ಥರು, ‘ಈ ಯೋಜನೆಯಿಂದ ನಮಗೆ ಯಾವ ಉಪಯೋಗವೂ ಆಗಿಲ್ಲ. ಅಣೆಕಟ್ಟೆಯ ನಿರಂತರ ನಿರ್ವಹಣೆ ಇಲ್ಲದ್ದರಿಂದಾಗಿ ಯೋಜನೆ ವಿಫಲಗೊಂಡಿದೆ. ಅಧಿಕಾರಿಗಳು ಸಚಿವರು, ಶಾಸಕರು ಬಂದಾಗಲಷ್ಟೇ ಇಲ್ಲಿಗೆ ಬರುತ್ತಾರೆ. ಇಲ್ಲದಿದ್ದರೆ ಇತ್ತ ಸುಳಿಯುವುದೇ ಇಲ್ಲ’ ಎಂದು ದೂರಿದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ಕಾರಜೋಳ ಅವರು, ‘ನಿಯಮಿತವಾಗಿ ಜಲಾಶಯಕ್ಕೆ ಭೇಟಿ ನೀಡಬೇಕು.  ಲಭ್ಯತೆಯನ್ನು ಆಧರಿಸಿ ನೀರು ಹರಿಸಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದು ಅನಿವಾರ್ಯ’ ಎಂದು ಎಚ್ಚರಿಸಿದರು.

ಸ್ವತಃ ಶಾಸಕ ಬಸವರಾಜ ಮತ್ತಿಮೂಡ ಅಧಿಕಾರಿಗಳ ವಿರುದ್ಧ ಸಚಿವರಿಗೆ ದೂರು ಹೇಳಿದರು.

ಕಮಲಾಪುರ ತಹಶೀಲ್ದಾರ್ ಅಂಜುಮ್ ತಬಸುಮ್ ಹಾಗೂ ನೀರಾವರಿ ನಿಗಮದ ಎಂಜಿನಿಯರ್‌ಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.