ಶಹಾಬಾದ್: ರಾಜ್ಯ ಸರ್ಕಾರ ನಗರ ಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದ ನಂತರ, ಜಿಲ್ಲೆಯ ಏಕೈಕ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಗದ್ದುಗೆ ಹಿಡಯಲು ಗುದ್ದಾಟ ಶುರುವಾಗಿದೆ. ಚುನಾವಣೆ ದಿನಾಂಕ ನಿಗದಿ ಆಗುವ ಮುನ್ನವೇ ಆಡಳಿತ ಚುಕ್ಕಾಣಿಗಾಗಿ ಒಳಗೊಳಗೆ ಪೈಪೋಟಿ ಜೋರಾಗಿದೆ.
ನಗರದ ಪ್ರಥಮ ಪ್ರಜೆಯಾಗಲು ಕಾಂಗ್ರೆಸ್ ಪಕ್ಷದ ಸದಸ್ಯರು ಶತಪಥ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಈ ಬಾರಿ ಮತ್ತೆ ಅಧ್ಯಕ್ಷ ಸ್ಥಾನ ಪ.ಜಾ(ಎಸ್ಸಿ) ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ (ಮಹಿಳೆಗೆ)ಮೀಸಲಾತಿ ಬಂದ ಹಿನ್ನೆಲೆಯಲ್ಲಿ ತೀವ್ರತರ ಪೈಪೋಟಿ ಆರಂಭವಾಗಿದೆ.
ನಗರಸಭೆಯ ಗದ್ದುಗೆ ಏರಲು ಒಟ್ಟು14 ಸದಸ್ಯರ ಬೆಂಬಲ ಬೇಕಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಇದ್ದು, ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳು ತೆರೆಮರೆಯಲ್ಲಿ ಭಾರಿ ಲಾಬಿ ನಡೆಸುತ್ತಿದ್ದಾರೆ. ಒಟ್ಟು 27 ಸ್ಥಾನಗಳಲ್ಲಿ ಕಾಂಗ್ರೆಸ್ 18, ಬಿಜೆಪಿ 5, ಜೆಡಿಎಸ್ 1 ಮತ್ತು ಸ್ವತಂತ್ರವಾಗಿ 3 ಅಭ್ಯರ್ಥಿಗಳು ಗೆದ್ದಿದ್ದಾರೆ ಹಾಗಾಗಿ ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತದಲ್ಲಿದೆ.
ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ವಾರ್ಡ್ ನಂ. 3ರ ಸದಸ್ಯರಾದ ಇನಾಯತ್ ಖಾನ್ ಜಮಾದಾರ ಅನಾರೋಗ್ಯದಿಂದ ನಿಧನರಾಗಿದ್ದು, ಈಗ ಕಾಂಗ್ರೆಸ್ ಪಕ್ಷ 17 ಜನ ಸದಸ್ಯರಿದ್ದಾರೆ. 3 ಜನ ಸ್ವತಂತ್ರ ಸದಸ್ಯರು ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ, ಹೀಗಾಗಿ 20 ಜನ ಸದಸ್ಯರ ಸಂಪೂರ್ಣ ಬಹುಮತದಿಂದ ಅಧಿಕಾರದ ಗದ್ದುಗೆ ಏರುವ ಸಾಧ್ಯತೆ ಇದೆ.
ಕೆಲ ಆಕಾಂಕ್ಷಿಗಳು ಈಗಾಗಲೇ ಉಸ್ತುವಾರಿ ಸಚಿವರು ಮತ್ತು ಬ್ಲಾಕ್ ಅಧ್ಯಕ್ಷರ ಬಳಿ ತಮ್ಮ ಇಚ್ಛೆ ವ್ಯಕ್ತಪಡಿಸಿದ್ದಾರೆ. ಆದರೆ ಯಾರಿಗೂ ಭರವಸೆ ನೀಡಿಲ್ಲ ಎಂದು ತಿಳಿದುಬಂದಿದೆ.
ವಾರ್ಡ್ ನಂ.10ರ ಪೀರಮ್ಮ ಪಗಲಾಪೂರ ಮತ್ತು ವಾರ್ಡ್ ನಂ. 19ರ ನಾಗರಾಜ ಕರಣಿಕ ಇವರು 2ನೇ ಬಾರಿಗೆ ಸದಸ್ಯರಾಗಿ ಆಯ್ಕೆ ಆಗಿದ್ದು, ಇವರು ಮುಂಚೂಣಿಯಲ್ಲಿದ್ದಾರೆ. ಹಾಗೆಯೇ ಚಂಪಾಬಾಯಿ ರಾಜು ಮೇಸ್ತ್ರಿ ಮತ್ತು ರವಿ ಮೇಸ್ತ್ರಿ ಇವರ ಹೆಸರು ಕೂಡ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದೆ. ಇವರಲ್ಲಿ ಅಧ್ಯಕ್ಷ ಪಟ್ಟ ಯಾರಿಗೆ ಒಲಿಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂ.17ರಿಂದ ಗೆದ್ದಿರುವ ಸಾಬೇರಾ ಬೇಗಂ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಇದಲ್ಲದೇ ವಾರ್ಡ್ ನಂ.15ರಿಂದ ಫಾತಿಮಾ ಬಾಕ್ರೋದ್ದೀನ್, ವಾರ್ಡ್ ನಂ. 21ರಿಂದ ಆಯ್ಕೆಯಾಗಿರುವ ಚಾಂದ್ ಸುಲ್ತಾನ್ ಫಜಲ್ ಪಟೇಲ್ ಮತ್ತು ವಾರ್ಡ್ ನಂ. 27ರ ಸದಸ್ಯೆ ಹನೀಫ್ ಮಹ್ಮದ ಉಸ್ಮಾನ ಅವರ ಹೆಸರು ಸಹ ಚಾಲ್ತಿಯಲ್ಲಿದೆ.
ಬಿಜೆಪಿ ಪಕ್ಷದ ನಡೆ: 5 ಸದಸ್ಯರನ್ನು ಹೊಂದಿದ ಬಿಜೆಪಿಯು ಕಾಂಗ್ರೆಸ್ ಪಕ್ಷದ ರಾಜಕೀಯ ಬೆಳವಣಿಗೆ ಮೇಲೆ ಕಣ್ಣು ಇಟ್ಟಿದ್ದು, ನಿಗೂಢ ರೀತಿಯಲ್ಲಿ ಸರ್ಕಸ್ ನಡೆಸುತ್ತಿದೆ. ಅಧಿಕಾರ ಹಿಡಿಯಲು ಬೇಕಾಗುವ ಸಂಖ್ಯಾಬಲ ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷದ ಸದಸ್ಯರ ಆಂತರಿಕ ಬೆಳವಣಿಗೆಯ ಮೇಲೆ ನಿಗಾ ವಹಿಸಿದ್ದಾರೆ. ಮೇಲ್ನೋಟಕ್ಕೆ ಕೆಲ ಬಿಜೆಪಿ ಮುಖಂಡರು ನಮಗೆ ಅಧಿಕಾರಕ್ಕಿಂತ ನಗರದ ಅಭಿವೃದ್ಧಿ ಮುಖ್ಯ, ಈ ನಿಟ್ಟಿನಲ್ಲಿ ಬಿಜೆಪಿ ವಿರೋಧ ಪಕ್ಷವಾಗಿ ನಗರ ಸಭೆಯಲ್ಲಿ ಜವಾಬ್ದಾರಿ ಸ್ಥಾನ ನಿರ್ವಹಿಸಲಿದೆ ಎಂದು ಹೇಳುತ್ತಿದ್ದರೂ ಒಳಗೊಳಗೆ ಜಾಣತನದಿಂದ ಕಾಂಗ್ರೆಸ್ ವಿರುದ್ಧ ಸಂಚು ರೂಪಿಸುತ್ತಿದೆ.
ಅಧ್ಯಕ್ಷರ ಸ್ಥಾನಕ್ಕೆ ಯಾರು ಎಷ್ಟೇ ಪ್ರಯತ್ನ ನಡೆಸಿದ್ದರೂ ಕೂಡ ಅಂತಿಮವಾಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎ.ರಶೀದ್ ಅವರು ನಿರ್ಣಯಿಸಲಿದ್ದಾರೆ ಎಂಬುದ ಜನರ ಅಭಿಪ್ರಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.