ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಸಹೋದರರ ಜೋಡಿ ಕೊಲೆ, 12 ಮಂದಿ ವಶಕ್ಕೆ

Last Updated 10 ಮೇ 2020, 9:24 IST
ಅಕ್ಷರ ಗಾತ್ರ

ಕಲಬುರ್ಗಿ: ಜೇವರ್ಗಿ ತಾಲ್ಲೂಕಿನ ಅಂಕಲಗಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದ ಸಹೋದರರ ಜೋಡಿ ಕೊಲೆಗೆ ಸಂಬಂಧಿಸಿದಂತೆ ಭಾನುವಾರ ಬೆಳಿಗ್ಗೆ 12 ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಕೊಲೆಯಾದ ಯಲ್ಲಾಲಿಂಗ ಶರಣಪ್ಪ ಕರಗೊಂಡ (38), ಇವರ ತಮ್ಮ ಗಂಗಪ್ಪ ಶರಣಪ್ಪ ಕರಗೊಂಡ ಹಾಗೂ ಪ್ರಮುಖ ಆರೋಪಿಗಳು ಸಂಬಂಧಿಗಳೇ ಆಗಿದ್ದಾರೆ. ತಮ್ಮ ಸಮಾಜದಲ್ಲಿ ನಾಯಕತ್ವ ವಹಿಸಲು ಬೆಳೆದ ವೈಮನಸ್ಸು ಹಾಗೂ ಆಸ್ತಿ ಕಲಹ ಕೊಲೆಗೆ ಕಾರಣವೆಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ.

ಯಲ್ಲಾಲಿಂಗ ಅವರ ಪತ್ನಿ ಮೀನಾಕ್ಷಿ ನೀಡಿದ ದೂರಿನ ಮೇರೆಗೆ, ಅಂಕಲಗಿ ಗ್ರಾಮದವರೇ ಆದ ಭೂತಾಳಿ ಹವಾನ್ ಕರಗೊಂಡ, ಗಂಗಪ್ಪ ಕರಗೊಂಡ, ಮಾಳಪ್ಪ ಕರಗೊಂಡ, ದೇವಪ್ಪ ಕರಗೊಂಡ, ಕರಿಯಪ್ಪ ಬಾಗ್ಲೂರ್, ಭಾಗಪ್ಪ ಕರಗೊಂಡ, ಮಲ್ಲಿಕಾರ್ಜುನ ಕರಗೊಂಡ, ಭೀರಪ್ಪ ಕರಗೊಂಡ, ಕಾಮಣ್ಣ ಕರಗೊಂಡ, ಖಾಜಪ್ಪ ದುಧನಿ, ಗಂಗಪ್ಪ ಭೀರಪ್ಪ, ನಿಂಗಪ್ಪ ಗಂಗಪ್ಪ ಹಟ್ಟಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಯಲ್ಲಾಲಿಂಗ ಹಾಗೂ ಭಾಗಪ್ಪನ ಮಧ್ಯೆ ಜಮೀನಿನ ವಿಚಾರವಾಗಿ ಪದೇ ಪದೆ ತಂಟೆ ತಕಲಾರು ನಡಯುತ್ತಿತ್ತು. ತಮ್ಮ ಸಮಾಜದಲ್ಲಿ ಮುಖಂಡತ್ವ ವಹಿಸುವ ಸಂಬಂಧ ಭೂತಾಳಿ ಜತೆಗೂ ಯಲ್ಲಾಲಿಂಗ ಜಗಳ ಮಾಡಿಕೊಂಡಿದ್ದ. ಈ ಬಗ್ಗೆ ಗ್ರಾಮದ ಮುಖಂಡರು ಇಬ್ಬರ ತಂಡಗಳನ್ನೂ ಕರೆದು ಬುದ್ಧಿವಾದ ಹೇಳಿ ಸಂಧಾನ ಮಾಡಿಸಿದ್ದರು.

ಮೂರು ದಿನಗಳ ಹಿಂದೆ ಭೂತಾಳಿ ತನ್ನ ಜನ್ಮದಿನ ಆಚರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಾಕಿದ್ದ. ಇದರ ಬಗ್ಗೆ ಯಲ್ಲಾಲಿಂಗ ಕೆಟ್ಟದ್ದಾಗಿ ಕಮೆಂಟ್ ಹಾಕಿದ್ದ. ಇದು ಮತ್ತೆ ಇಬ್ಬರ ನಡುವಿನ ಕಲಹ ವಿಕೋಪಕ್ಕೆ ಹೋಗಲು ಕಾರಣವಾಯಿತು ಎಂದು ಎಸ್ಪಿ ತಿಳಿಸಿದ್ದಾರೆ.

ಶನಿವಾರ ರಾತ್ರಿ 8ರ ಸುಮಾರಿಗೆ ಕೊಲೆ ವಿಷಯ ಕಾಳ್ಗಿಚ್ಚಿನಂತೆ ಹರಡಿತು.

ಹೊಲದಲ್ಲಿ ಯಲ್ಲಾಲಿಂಗನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಆರೋಪಿಗಳು ತಲೆ, ಕೈ, ಕಾಲು, ಎದೆಗೆ ಹೊಡೆದರು. ಅಣ್ಣನ ರಕ್ಷಣೆಗೆ ಗಂಗಪ್ಪ ಓಡಿಬಂದ. ಯಲ್ಲಾಲಿಂಗ ಸತ್ತ ಮೇಲೆ ಗಂಗಪ್ಪನನ್ನೂ ಬೆನ್ನುಬಿಡದ ಆರೋಪಿಗಳು ಕುಡುಗೋಲಿನಿಂದ ಹೊಡೆದು ರುಂಡ ಕತ್ತರಿಸಿದರು. ಮುಂಡವನ್ನು ದೂರದಲ್ಲೇ ಬಿಟ್ಟು ರುಂಡವನ್ನು ತಂದ ಯಲ್ಲಾಲಿಂಗನ ತಲೆಯ ಪಕ್ಕದಲ್ಲೇ ಇಟ್ಟರು.

ಕೊಲೆ ನಡೆದ ಜಾಗದಲ್ಲಿ ಜೆಸಿಬಿ ಕೂಡ ಇದ್ದು, ಅದಕ್ಕೂ ರಕ್ತ ಅಂಟಿಕೊಂಡಿದೆ.

ನೆಲೋಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT