ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಸಂಗೀತಾಭ್ಯಾಸಕ್ಕೆ ಸಮಯದ ಹಂಗಿಲ್ಲ –ಗಾಯಕ ಮಹೇಶ ಕಾಳೆ

ಸಂಗೀತ ಕಾರ್ಯಾಗಾರದಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕ ಮಹೇಶ ಕಾಳೆ ಅಭಿಮತ
Last Updated 25 ಡಿಸೆಂಬರ್ 2021, 13:16 IST
ಅಕ್ಷರ ಗಾತ್ರ

ಕಲಬುರಗಿ: ‘ಸಂಗೀತದಲ್ಲಿ ಎಷ್ಟೇ ದೊಡ್ಡ ಕಲಾವಿದರಾದರೂ ಸಂತೃಪ್ತಿ ಇರಬಾರದು. ಎಲ್ಲಿಯವರೆಗೆ ನಾವು ಅತೃಪ್ತರಾಗಿ ಇರುತ್ತೇವೆಯೋ ಅಲ್ಲಿಯವರೆಗೂ ತೃಪ್ತಿಯನ್ನು ಹುಡುಕುತ್ತಲೇ ಇರುತ್ತೇವೆ. ತೃಪ್ತಿ ಹುಡುಕುತ್ತ ಹೋದಷ್ಟೂ ಕಲಾವಿದ ಆಳಕ್ಕೆ ಇಳಿಯುತ್ತಾನೆ’ ಎಂದು ಖ್ಯಾತ ಹಿಂದೂಸ್ತಾನಿ ಗಾಯಕ ಮಹೇಶ ಕಾಳೆ ಅಭಿಪ್ರಾಯಪಟ್ಟರು.

ಇಲ್ಲಿನನೂತನ ವಿದ್ಯಾಲಯ ಸಂಸ್ಥೆಯ ನೂತನ ವಿದ್ಯಾಲಯ ಕಲಾ, ಕನ್ಹಯ್ಯಲಾಲ್ ಮಾಲು ವಿಜ್ಞಾನ ಹಾಗೂ ಡಾ.ಪಾಂಡುರಂಗರಾವ ಪತ್ಕಿ ವಾಣಿಜ್ಯ ಪದವಿ ಮಹಾವಿದ್ಯಾಲಯ, ಪದವಿ ಮತ್ತು ಸ್ನಾತಕೋತ್ತರ ಸಂಗೀತ ವಿಭಾಗಗಳ ಆಶ್ರಯದಲ್ಲಿ ಶನಿವಾರ ನಡೆದ ಸಂಗೀತ ಕಾರ್ಯಾಗಾರದಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

‘ಸಂಗೀತವನ್ನು ನೀವು ಹಿಮಾಲಯ ಎಂದುಕೊಂಡರೆ ಅದರ ಅಂತಿಮ ಘಟ್ಟ ಏರುವುದೇ ನಿಮ್ಮ ಗುರಿಯಾಗಿರಲಿ. ಈ ಗಾನಪರ್ವತ ಏರುವಾಗ ಅತ್ತಿತ್ತ ಎತ್ತ ನೋಡಿದರೂ ನಿಮಗೆ ಹಿಮಚ್ಛಾದಿತ ಪರ್ವತವೇ ಕಾಣಿಸುತ್ತದೆ. ಹಾಗೆಯೇ ಸಂಗೀತಗಾರನಾಗಬೇಕು ಎಂದು ಹೊರಟವರಿಗೆ ಸುತ್ತಲೂ ಆ ಕ್ಷೇತ್ರವೇ ಕಾಣಿಸಬೇಕು’ ಎಂದರು.

ಸಂಗೀತಾಭ್ಯಾಸಕ್ಕೆ ಯಾವ ಸಮಯ ಸೂಕ್ತ ಎಂದು ಕೇಳಿದ ವಿದ್ಯಾರ್ಥಿನಿಯೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಬ್ರಾಹ್ಮೀ ಮಹೂರ್ತದಲ್ಲಿ ಅಭ್ಯಾಸ ಮಾಡಿದರೆ ಮಾತ್ರ ಗಾಯನ ಒಲಿಯುತ್ತದೆ ಎಂದೇನಿಲ್ಲ. ನಸುಕಿನಲ್ಲಿ ಗಾನಸರಸ್ವತಿ ವಿಹರಿಸುತ್ತಾಳೆ, ಆ ಸಂದರ್ಭದಲ್ಲಿ ಕ್ರಿಯಾಶೀಲವಾದವರಿಗೆ ಒಲಿಯುತ್ತಾಳೆ ಎಂದು ನಮ್ಮ ಅಮ್ಮ ಕೂಡ ಹೇಳುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ದಿನದ ಯಾವ ಸಮಯದಲ್ಲಾದರೂ ಗಾನ– ವಾದನಗಳ ಜತೆ ಕಾಲ ಕಳೆಯಲು ಸಾಧ್ಯವಾಗುತ್ತಿದೆ. ಸಾಧನೆಯ ಸಮುದ್ರಕ್ಕೆ ಇಳಿದವರು ದಿನಕ್ಕೆ ಎಂಟು ತಾಸು ಕಠಿಣ ಅಭ್ಯಾಸ ಮಾಡಬೇಕು. ಈ ಸಮುದ್ರದಲ್ಲಿ ಸಾಕಷ್ಟು ದೊಡ್ಡ ಅಲೆಗಳು ಬರಬಹುದು. ಅವುಗಳ ಜೊತೆಗೇ ನಾವು ಸಾಗಬೇಕು’ ಎಂದೂ ಕಿವಿಮಾತು ಹೇಳಿದರು.

‘ಹಾಡುವುದಕ್ಕೆ ವ್ಯಾಸಪೀಠದ ಮೇಲೆ ಕುಳಿತಾಗ ಪೂರ್ಣ ಮೈಮರೆಯಬೇಕು. ನಿಮ್ಮನ್ನು ಆಲಿಸಲು ಯಾರುಯಾರು ಬಂದಿದ್ದಾರೆ ಎಂಬ ಯೋಚನೆ ಬೇಡ. ನೀವೇನು ಅಲ್ಲಿ ಪರೀಕ್ಷೆ ಪಾಸಾಗಲು ಕುಳತಿಲ್ಲ. ಹಾಗಾಗಿ, ಯಾರನ್ನೂ ಮೆಚ್ಚಿಸಬೇಕಾಗಿಲ್ಲ. ನಿಮ್ಮ ಆನಂದಕ್ಕಾಗಿ ನೀವು ಹಾಡುತ್ತ ಹೋಗಿ. ಮೆಚ್ಚುಗೆ ತಾನಾಗೇ ಬರುತ್ತದೆ’ ಎಂದುಮಹೇಶ ಕಾಳೆ ಅವರು ವಿದ್ಯಾರ್ಥಿಯ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಧ್ವನಿ ಏರಿಳಿತಗಳ ವಿಚಾರದಲ್ಲಿ ಬಹಳಷ್ಟು ಕಲಿಕಾರ್ಥಿಗಳು ಗೊಂದಲಕ್ಕೆ ಬೀಳುತ್ತಾರೆ. ಅವರಂತೆ ನನಗೆ ಏರಿಳಿತ ಬರುತ್ತಿಲ್ಲ, ಅಷ್ಟು ಉತ್ತುಂಗ ತಲುಪಲು ಆಗುತ್ತಿಲ್ಲ ಎಂಬ ವಿಚಾರಕ್ಕೆ ಬೀಳುತ್ತಾರೆ. ನಮ್ಮ ಕಂಠ ಸಾಮರ್ಥ್ಯ ಎಷ್ಟಿದೆ ಎಂಬುದನ್ನೇ ನಾವೇ ಖಚಿತ ಮಾಡಿಕೊಳ್ಳಬೇಕು. ನನ್ನಿಂದ ಎಷ್ಟು ಉತ್ತುಂಗದಲ್ಲಿ ಗಾಯನ ಸಾಧ್ಯ ಎಂದು ಗೊತ್ತಾದ ಬಳಿಕ ಅದೇ ಹಂತದಲ್ಲಿ ಅಭ್ಯಾಸ ಶುರು ಮಾಡಬೇಕು’ ಎಂದು ಸಲಹೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಗೌತಮ ಆರ್. ಜಹಗೀರದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಕಾರ್ಯದರ್ಶಿ ಅಭಿಜಿತ್ ಎ. ದೇಶಮುಖ, ಭೀಮ ಮಾಧವ ಗಂಧರ್ವ ಸಂದೋಹ ಸದಸ್ಯ ಅಜಯ ಸಾಂಭ್ರಾಣಿ,ಸಂಚಾಲಕ ಮಾಧವ ಜೋಶಿ, ಸಂಸ್ಥೆಯ ಕ್ರೀಡಾ ಮಿತಿ ಅಧ್ಯಕ್ಷ ಡಾ.ಸುರೇಂದ್ರ ಸಿದ್ಧಾಪೂರಕರ್, ಮಧುಸೂದನ ಚಾರಿ ವೇದಿಕೆ ಮೇಲಿದ್ದರು. ಗುರುರಾಜ ದಂಡಾಪುರ, ನಿಖಿಲ್‌ ಕೊಲ್ಹಾರಕರ್, ರವೀಂದ್ರ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ ಇದ್ದರು.

ಕಲಬುರಗಿಯ ಎನ್‌.ವಿ. ಕಾಲೇಜಿನಲ್ಲಿ ಶನಿವಾರ ನಡೆದ ಸಂಗೀತ ಕಾರ್ಯಾಗಾರದಲ್ಲಿ ಹಿಂದೂಸ್ತಾನಿ ಗಾಯಕ ಮಹೇಶ ಕಾಳೆ ಸರಸ್ವತಿ ಫೋಟೊಗೆ ಪುಷ್ಪಾರ್ಚನೆ ಮಾಡಿದರು. ಮಧುಸೂದನ ಚಾರಿ, ಅಭಿಜಿತ್ ಎ. ದೇಶಮುಖ, ಅಜಯ ಸಾಂಭ್ರಾಣಿ, ಗೌತಮ ಆರ್. ಜಹಗೀರದಾರ, ಮಾಧವ ಜೋಶಿ, ಡಾ.ಸುರೇಂದ್ರ ಸಿದ್ಧಾಪೂರಕರ್ ಇದ್ದರು
ಕಲಬುರಗಿಯ ಎನ್‌.ವಿ. ಕಾಲೇಜಿನಲ್ಲಿ ಶನಿವಾರ ನಡೆದ ಸಂಗೀತ ಕಾರ್ಯಾಗಾರದಲ್ಲಿ ಹಿಂದೂಸ್ತಾನಿ ಗಾಯಕ ಮಹೇಶ ಕಾಳೆ ಸರಸ್ವತಿ ಫೋಟೊಗೆ ಪುಷ್ಪಾರ್ಚನೆ ಮಾಡಿದರು. ಮಧುಸೂದನ ಚಾರಿ, ಅಭಿಜಿತ್ ಎ. ದೇಶಮುಖ, ಅಜಯ ಸಾಂಭ್ರಾಣಿ, ಗೌತಮ ಆರ್. ಜಹಗೀರದಾರ, ಮಾಧವ ಜೋಶಿ, ಡಾ.ಸುರೇಂದ್ರ ಸಿದ್ಧಾಪೂರಕರ್ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT