ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಂತ್ಯುತ್ಸವದ ಹಣ ನೆರೆ ಸಂತ್ರಸ್ತರಿಗೆ

ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತ್ಯುತ್ಸವ ಸರಳವಾಗಿ ಆಚರಿಸಲು ನಿರ್ಧಾರ
Last Updated 11 ಸೆಪ್ಟೆಂಬರ್ 2019, 9:23 IST
ಅಕ್ಷರ ಗಾತ್ರ

ಕಲಬುರ್ಗಿ: ಇದೇ 13ರಂದು ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿರುವ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿಗಾಗಿ ಸರ್ಕಾರ ಬಿಡುಗಡೆ ಮಾಡುವ ಹಣವನ್ನು ನೆರೆ ಸಂತ್ರಸ್ತರಿಗೆ ನೀಡಲಿದ್ದೇವೆ ಎಂದು ಆರ್ಯ ಈಡಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಶ ಗುತ್ತೇದಾರ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾ ಮಟ್ಟದಲ್ಲಿ ನಡೆಯುವ ಜಯಂತ್ಯುತ್ಸವಕ್ಕೆ ಸರ್ಕಾರ ₹ 50 ಸಾವಿರ ಹಾಗೂ ತಾಲ್ಲೂಕು ಮಟ್ಟದ ಕಾರ್ಯಕ್ರಮಗಳಿಗೆ ₹ 25 ಸಾವಿರ ಅನುದಾನ ನೀಡುತ್ತದೆ. ಇದರ ಒಟ್ಟು ಮೊತ್ತ ₹ 2.75 ಲಕ್ಷ ಆಗಲಿದ್ದು, ಅದನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಸಲಾಗುವುದು’ ಎಂದರು.

‘ಅಂದು ಬೆಳಿಗ್ಗೆ ಕಲಬುರ್ಗಿಯ ಎಸ್‌ವಿಪಿ ವೃತ್ತದಿಂದ ಎಸ್‌.ಎಂ.ಪಂಡಿತ ರಂಗಮಂದಿರದವರೆಗೆ ಮೆರವಣಿಗೆ ನಡೆಯಲಿದ್ದು, ಈಡಿಗ ಸಮುದಾಯದ ಮೂಲ ಕಸುಬಾದ ಸೇಂದಿ ಮರದಿಂದ ನೀರಾ ಇಳಿಸುವ ಪ್ರಕ್ರಿಯೆಯನ್ನು ತೋರಿಸುವುದಕ್ಕಾಗಿ ಸೇಂದಿ ಮರವನ್ನು ಮೆರವಣಿಗೆಯಲ್ಲಿ ತರಲಾಗುವುದು.ವಿವಿಧ ಬಗೆಯ ಒಂದು ಸಾವಿರ ಸಸಿಗಳನ್ನು ಸುತ್ತಮುತ್ತಲಿನ ಅಂಗಡಿಗಳಿಗೆ ಕೊಡಲಾಗುವುದು’ ಎಂದು ಹೇಳಿದರು.

‘ನೀರಾ ಇಳಿಸಲು ಅನುಮತಿ ನೀಡುವಂತೆ ಮನವಿ ಸಲ್ಲಿಸಲು ಮುಖ್ಯಮಂತ್ರಿಗಳ ಸಮಯವನ್ನು ಕೇಳಲಾಗಿದೆ. ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನದ ಬಳಿಕ ಸಮಯ ಸಿಗುವ ನಿರೀಕ್ಷೆ ಇದೆ. ನಮ್ಮ ಕುಲ ಕಸುಬನ್ನು ಮುಂದುವರಿಸಿಕೊಂಡು ಹೋಗಲು ಸರ್ಕಾರ ಅನುಮತಿ ನೀಡುವ ನಿರೀಕ್ಷೆ ಇದೆ. ಇದಕ್ಕೆ ನಮ್ಮ ಸಮುದಾಯದ ಮುಖಂಡರಾದ ಮಾಲೀಕಯ್ಯ ಗುತ್ತೇದಾರ, ಸುಭಾಷ್‌ ಗುತ್ತೇದಾರ ಅವರೂ ಬೆಂಬಲ ನೀಡಿದ್ದಾರೆ’ ಎಂದರು.

ಸಂಘದ ಉಪಾಧ್ಯಕ್ಷ ರುಕ್ಮಯ್ಯಾ ರಾವೂರ ಮಾತನಾಡಿ, ‘ಕೇರಳದವರಾದ ನಾರಾಯಣಗುರುಗಳು ಸಮಸ್ತ ಈಡಿಗ ಕುಲದ ಪ್ರತಿನಿಧಿ ಇದ್ದಂತೆ. ಅವರ ಹೆಸರಿನಲ್ಲಿ ಜಿಲ್ಲಾ ಮಟ್ಟದಲ್ಲಿ ಒಂದು ಭವನ ಕಟ್ಟಿಸಲು ಜಾಗದ ಅವಶ್ಯಕತೆ. ಭವನ ಕಟ್ಟಡಕ್ಕೆ ಜಿಲ್ಲಾಡಳಿತ ಜಾಗ ಗುರುತಿಸಬೇಕು’ ಎಂದು ಮನವಿ ಮಾಡಿದರು.

ನಾರಾಯಣ ಗುರು ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಬಾಲರಾಜ ಗುತ್ತೇದಾರ ಮಾತನಾಡಿ, ‘ಈಡಿಗ ಸಮಾಜದ ಅಂಗವಿಕಲರಿಗೆ ಜಯಂತ್ಯುತ್ಸವದ ಸಂದರ್ಭದಲ್ಲಿ ತ್ರಿಚಕ್ರ ವಾಹನ ವಿತರಿಸಲಾಗುವುದು. ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT