ಶುಕ್ರವಾರ, ಸೆಪ್ಟೆಂಬರ್ 20, 2019
21 °C

ಉನ್ನತ ಶಿಕ್ಷಣದ ಖಾಸಗೀಕರಣಕ್ಕೆ ಕೇಂದ್ರ ಯತ್ನ: ಪ್ರೊ. ಸುರ್ಜಿತ್ ಮಜುಂದಾರ್ ಕಳವಳ

Published:
Updated:
Prajavani

ಕಲಬುರ್ಗಿ: ಕೇಂದ್ರ ಸರ್ಕಾರವು ಜಾರಿಗೊಳಿಸಲು ಮುಂದಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ ಅಂಶಗಳು ಮೇಲ್ನೋಟಕ್ಕೆ ಸರ್ಕಾರಿ ಸ್ವಾಮ್ಯದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚು ಅನುದಾನ ಕೊಡುವ ಸದಾಶಯ ಹೊಂದಿದ್ದರೂ ಪರೋಕ್ಷವಾಗಿ ಖಾಸಗಿಯವರಿಗೆ ಅನುಕೂಲ ಮಾಡಿಕೊಡುವ ಅಂಶಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ದೆಹಲಿಯ ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಆರ್ಥಿಕ ಅಧ್ಯಯನ ಹಾಗೂ ಯೋಜನಾ ವಿಭಾಗದ ಪ್ರಾಧ್ಯಾಪಕ ಪ್ರೊ.ಸುರ್ಜಿತ್ ಮಜುಂದಾರ್ ಕಳವಳ ವ್ಯಕ್ತಪಡಿಸಿದರು.

ಭಾರತ ವಿದ್ಯಾರ್ಥಿ ಫೆಡರೇಶನ್‌ (ಎಸ್‌ಎಫ್‌ಐ) ನಗರದಲ್ಲಿ ಭಾನುವಾರ ಆಯೋಜಿಸಿದ್ದ ಅಧ್ಯಯನ ಶಿಬಿರದಲ್ಲಿ ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅಪಾಯಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ‘ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿಯವರಿಗೆ ಲಾಭ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ ಎನ್ನುತ್ತಲೇ ಲಾಭ ರಹಿತ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡುವ ಪ್ರಸ್ತಾವವನ್ನು ನೀತಿಯನ್ನು ಹೇಳಲಾಗಿದೆ. ಅಲ್ಲದೇ, ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಬದಲು ಇನ್ನು ಮುಂದೆ ಪ್ರಧಾನಮಂತ್ರಿ ಅಧ್ಯಕ್ಷರಾಗಿರುವ, ಮಾನವ ಸಂಪನ್ಮೂಲ ಸಚಿವರು ಕಾರ್ಯದರ್ಶಿಯಾಗಿರುವ ರಾಷ್ಟ್ರೀಯ ಶಿಕ್ಷಣ ಆಯೋಗವು ವಿಶ್ವವಿದ್ಯಾಲಯಗಳಿಗೆ ನೀಡಲಾಗುವ ಹಣಕಾಸು, ಪ್ರಾಧ್ಯಾಪಕರ ನೇಮಕಾತಿ, ಹೊಸ ವಿಶ್ವವಿದ್ಯಾಲಯಗಳಿಗೆ ಅನುಮತಿ ನೀಡುವ ಅಧಿಕಾರವನ್ನು ಪಡೆಯಲಿದೆ. ಸೇವಾ ಜ್ಯೇಷ್ಠತೆಯನ್ನು ಬದಿಗಿಟ್ಟು ಮೆರಿಟ್‌ ಆಧಾರದ ಮೇಲೆ ಬಡ್ತಿ ಮಾಡುವುದಾಗಿ ತಿಳಿಸಿದೆ. ಹಾಗಿದ್ದರೆ ಮೆರಿಟ್‌ ನಿರ್ಧರಿಸಲು ಅನುಸರಿಸುವ ಮಾನದಂಡಗಳೇನು’ ಎಂದು ಪ್ರಶ್ನಿಸಿದರು.

‘ಖಾಸಗಿಯವರಿಗೆ ಲಾಭ ಮಾಡಿಕೊಳ್ಳಲು ಬಿಡುವುದಿಲ್ಲ ಎನ್ನುತ್ತಲೇ ಡೀಮ್ಸ್‌ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಖಾಸಗಿಯವರಿಗೆ ಅನುಮತಿ ನೀಡಲಾಗುತ್ತದೆ. ಪಠ್ಯಕ್ರಮ ರಚನೆ, ಶುಲ್ಕ, ನೇಮಕಾತಿ ಪ್ರಕ್ರಿಯೆಗಳಿಗೆ ಸರ್ಕಾರ ಹೊಣೆಯಾಗುವುದಿಲ್ಲ. ಹೀಗೇ ಮುಂದುವರಿದರೆ ಖಾಸಗಿಯವರು ವಿದ್ಯಾರ್ಥಿಗಳಿಂದ ಶುಲ್ಕ ಹಾಗೂ ಡೊನೇಶನ್ ನೆಪದಲ್ಲಿ ಸಾಕಷ್ಟು ಹಣ ಸುಲಿಗೆ ಮಾಡಲು ಅವಕಾಶ ಕೊಟ್ಟಂತಾಗುತ್ತದೆ. ಇದು ಶಿಕ್ಷಣದ ಖಾಸಗೀಕರಣವಲ್ಲವೇ’ ಎಂದು ಕೇಂದ್ರದ ಪ್ರಸ್ತಾವಗಳನ್ನು ಟೀಕಿಸಿದರು.

ಕೊಠಾರಿ ಆಯೋಗವು 1960ರಲ್ಲಿಯೇ ಶಿಕ್ಷಣ ಕ್ಷೇತ್ರಕ್ಕೆ ಒಟ್ಟು ಜಿಡಿಪಿಯ ಶೇ 6ರಷ್ಟು ಹಣವನ್ನು ಖರ್ಚು ಮಾಡಬೇಕು ಎಂದು ಶಿಫಾರಸು ಮಾಡಿತ್ತು. ಅವರು ಹೇಳಿದಷ್ಟು ಮೊತ್ತವನ್ನು ಖರ್ಚು ಮಾಡಲು ಇಲ್ಲಿಯವರೆಗೆ ಆಳ್ವಿಕೆ ನಡೆಸಿದ ಯಾವ ಸರ್ಕಾರಗಳಿಗೂ ಆಗಿಲ್ಲ. ಈಗೀಗ ಶಿಕ್ಷಣ ಸರ್ಕಾರದ ಆದ್ಯತೆಯ ವಿಷಯವೇ ಅಲ್ಲ ಎಂಬಂತಾಗಿದೆ ಎಂದರು.

Post Comments (+)