ಆಳಂದ: ‘ದೇಶವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲು ತ್ಯಾಗ, ಬಲಿದಾನ ಹಾಗೂ ದೇಶಕ್ಕಾಗಿ ಸಮರ್ಪಣಾಭಾವದಿಂದ ಹೋರಾಡಿದ ರಾಷ್ಟ್ರನಾಯಕರು ಇಂದಿನ ಯುವಕರಿಗೆ ಸ್ಪೂರ್ತಿಯಾಗಬೇಕು’ ಎಂದು ಶಾಸಕ ಬಿ.ಆರ್.ಪಾಟೀಲ ನುಡಿದರು.
ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಮಂಗಳವಾರ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡ 77ನೇ ಸ್ವತಂತ್ರ ದಿನಾಚರಣೆ ನಿಮಿತ್ತ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ಮಹಾತ್ಮಗಾಂಧೀಜಿ, ನೆಹರು, ನೇತಾಜಿ, ಭಗತ್‌ಸಿಂಗ್, ಡಾ.ಅಂಬೇಡ್ಕರ್, ಜೆಪಿ ಮುಂತಾದ ರಾಷ್ಟ್ರನಾಯಕರ ಹೋರಾಟದ ಫಲದಿಂದ ದೇಶವು ಪ್ರಗತಿ ಕಂಡಿದೆ. ಗಾಂಧೀಜಿ ಹತ್ಯೆಗೈದ ಗೋಡ್ಸೆಯಂತಹವರನ್ನು ಆರಾಧಿಸುವ ಸಂಸ್ಕೃತಿಯು ದೇಶದ ಅಖಂಡತೆಗೆ ಧಕ್ಕೆ ತರಬಲ್ಲದು, ಶಾಂತಿ, ಸೌಹಾರ್ದತೆ ಹಾಗೂ ಏಕತೆಯು ದೇಶದ ವೈಶಿಷ್ಟ್ಯವಾಗಿವೆ’ ಎಂದರು.
‘ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಹಾಗೂ ಅಮರ್ಜಾ ಅಣೆಕಟ್ಟೆಗೆ ನೀರು ಭರ್ತಿ ಹಾಗೂ ಶಿರಪುರ ಮಾದರಿ ಜಲಸಂಗ್ರಹ ಕಾಮಗಾರಿಗಳು ಆರಂಭಗೊಳ್ಳಲಿವೆ. ಶೈಕ್ಷಣಿಕ ಕ್ಷೇತ್ರ ಹಾಗೂ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ತಾಲ್ಲೂಕಿನ ಅಭಿವೃದ್ಧಿ ಹೆಚ್ಚಲಿದೆ’ ಎಂದರು.
ಕಮಲಾನಗರದ ಉಪನ್ಯಾಸಕ ಚಂದ್ರಶೇಖರ ಕಟ್ಟಿಮನಿ ವಿಶೇಷ ಉಪನ್ಯಾಸ ನೀಡಿದರು. ಪ್ರಭಾರ ತಹಶೀಲ್ದಾರ್ ಭೀಮಣ್ಣಾ ಕುದುರಿ, ಡಿವೈಎಸ್‌ಪಿ ಗೋಪಿ ಎ.ಆರ್. ತಾಲ್ಲೂಕು ಪಂಚಾಯಿತಿ ಇಒ ಮಾನಪ್ಪ ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ಕಣ್ಣಿ, ಡಾ.ಸಂಜಯ ರೆಡ್ಡಿ, ಸಿಪಿಐ ಬಾಸು ಚವ್ಹಾಣ, ಸೋಮಶೇಖರ ಹಂಚನಾಳ, ಶರಣಗೌಡ ಪಾಟೀಲ, ಶಂಕರಗೌಡ , ಮೊನಮ್ಮ ಸುತಾರ, ಜೆ.ಕೆ.ಅನ್ಸಾರಿ ಇದ್ದರು.
ಇದೇ ಸಂದರ್ಭದಲ್ಲಿ ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ 6 ಜನ ವಿದ್ಯಾರ್ಥಿಗಳನ್ನು ಶಿಕ್ಷಣ ಇಲಾಖೆಯಿಂದ ಸನ್ಮಾನಿಸಲಾಯಿತು.
ನಂತರ ಆಳಂದ ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಮಕ್ಕಳ ನೃತ್ಯ, ಭಾಷಣ ಹಾಗೂ ಗಾಯನವು ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಮೆರಗು ತಂದವು. ಈ ಮೊದಲು ಶ್ರೀರಾಮ ಮಾರುಕಟ್ಟೆಯಲ್ಲಿನ ಸಾರ್ವಜನಿಕ ಧ್ವಜಾರೋಹಣವನ್ನು ಶಾಸಕ ಬಿ.ಆರ್.ಪಾಟೀಲ ನೆರವೇರಿಸಿದರು.
ಆಡಳಿತ ಭವನ: ತಾಲ್ಲೂಕು ಆಡಳಿತ ಭವನದಲ್ಲಿ ಬೆಳಿಗ್ಗೆ ಪ್ರಭಾರ ತಹಶೀಲ್ದಾರ್ ಭೀಮಣ್ಣಾ ಕುದುರಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ತಾ.ಪಂ ಕಚೇರಿಯಲ್ಲಿ ಇಒ ಮಾನಪ್ಪ ಕಟ್ಟಿಮನಿ ರಾಷ್ಟ್ರಧ್ವಜಾರೋಹಣ ಮಾಡಿದರು.
ಸಮತಾ ಲೋಕ ಶಿಕ್ಷಣ ಸಂಸ್ಥೆ: ಆಳಂದ ಪಟ್ಟಣದ ಸಮತಾ ಲೋಕ ಶಿಕ್ಷಣ ಸಂಸ್ಥೆ ವಿವಿಧ ಶಾಲಾ ಕಾಲೇಜುಗಳ ಆವರಣದಲ್ಲಿ 77ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಸೂರ್ಯಕಾಂತ ಗುಡ್ಡೋಡಗಿ,ಜೈನೋದ್ದಿನ್ ಮುಜಾವರ್, ಕಲ್ಲಪ್ಪ ಮಂಠಾಳೆ, ಸಂಜಯ ಪಾಟೀಲ, ನಾಗಣ್ಣಾ ಸಲಗರೆ, ಎಲ್.ಎಸ್.ಬೀದಿ, ಶಿವಪುತ್ರಪ್ಪ ಅಲ್ದಿ, ಧರ್ಮಣ್ಣಾ ಜಮದಾರ, ಗಂಗಾಂಬಿಕಾ ಮಂಟಗಿ ಇದ್ದರು.
ಜೀವನಜ್ಯೋತಿ ಶಿಕ್ಷಣ ಸಂಸ್ಥೆ: ಪಟ್ಟಣದ ಜೀವನಜ್ಯೋತಿ ಶಿಕ್ಷಣ ಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳ ಆವರಣದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.
ಮಾಜಿ ಶಾಸಕ ಸುಭಾಷ ಗುತ್ತೇದಾರ ರಾಷ್ಟ್ರ ಧ್ವಜಾರೋಹಣ ಮಾಡಿದರು. ಆಡಳಿತಾಧಿಕಾರಿ ರಾಘವೇಂದ್ರ ಚಿಂಚನಸೂರು, ಹಣಮಂತ ಶೇರಿ, ಅಶೋಕ ರೆಡ್ಡಿ, ಕಲ್ಯಾಣಿ ಸಾವಳಗಿ, ಮಲ್ಲಿನಾಥ ಬುಕ್ಕೆ, ಮಲ್ಲಿಕಾರ್ಜುನ ತುಕಾಣೆ ಇದ್ದರು.
ಬ್ರೀಡ್ಜ್ ಶಾಲೆ: ಪಟ್ಟಣದ ಬ್ರೀಡ್ಜ್ ಪಬ್ಲಿಕ್ ಶಾಲೆಯಲ್ಲಿ ಸಂಸ್ಥೆ ಅಧ್ಯಕ್ಷ ರಫಿಕ್ ಇನಾಂದಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಜಗದೀಶ ಕೋರೆ, ದತ್ತಾತ್ರೇಯ ಬಿರಾದಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.