ಬುಧವಾರ, ಮಾರ್ಚ್ 3, 2021
19 °C
ಮಧ್ಯಾಹ್ನವೇ ಬರ್ಖಾಸ್ತು; ವಿವಿಧ ಜಿಲ್ಲೆಗಳಿಂದ ಬಂದಿದ್ದ ಮಕ್ಕಳಿಗೆ ನಿರಾಸೆ

ಗೊಂದಲದ ಗೂಡಾದ ಆಯೋಗದ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಲು ಶುಕ್ರವಾರ ನಗರಕ್ಕೆ ಬಂದಿದ್ದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಪೀಠದ ಎದುರು ಮಕ್ಕಳು ಹಾಗೂ ಅವರ ಪೋಷಕರು ಸಮಸ್ಯೆ ಹೇಳಿಕೊಳ್ಳುವಾಗ ಸಭಾಂಗಣದಲ್ಲಿದ್ದ ಅಧಿಕಾರಿಗಳು ತಮ್ಮಷ್ಟಕ್ಕೆ ಮಾತುಕತೆಯಲ್ಲಿ ತೊಡಗಿದ್ದರು. ಇದರಿಂದ ಇಡೀ ಪ್ರಕ್ರಿಯೆ ಗೊಂದಲದ ಗೂಡಾಗಿ ಪರಿಣಮಿಸಿತು.

ಈ ಬಗ್ಗೆ ಆಯೋಗದ ಅಧಿಕಾರಿ ಸೈಸ್ತಾ ಶಾ ಹಲವು ಬಾರಿ ಮನವಿ ಮಾಡಿಕೊಳ್ಳಬೇಕಾಯಿತು. ಆದರೆ, ಸಭೆ ತಹಬಂದಿಗೆ ಬರಲಿಲ್ಲ. ಇದರ ಮಧ್ಯೆಯೇ ಟೋಕನ್‌ ಸಂಖ್ಯೆಯ ಪ್ರಕಾರ ಆಯೋಗದ ಸದಸ್ಯರಾದ ಡಾ.ಜಿ.ಆರ್‌.ಆನಂದ ಹಾಗೂ ಪ್ರಜ್ಞಾ ಪರಾಂಡೆ ಅವರು ವಿಚಾರಣೆಯನ್ನು ಕೈಗೆತ್ತಿಕೊಂಡರು.

ದೂರು ಹೇಳಲು ನಾಲ್ಕೈದು ಜನ ಬಂದರೆ, ಅದಕ್ಕೆ ಸಮಜಾಯಿಷಿ ನೀಡಲು ಪೊಲೀಸ್‌, ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಒಟ್ಟಿಗೇ ಪೀಠದ ಬಳಿ ಬಂದಿದ್ದರಿಂದ ಏನು ನಡೆಯುತ್ತದೆ ಎಂಬುದೇ ಗೊತ್ತಾಗಲಿಲ್ಲ. ಉದ್ಘಾಟನೆ ಬಳಿಕ ಬೆಳಿಗ್ಗೆ 11.30ಕ್ಕೆ ದೂರುಗಳ ವಿಚಾರಣೆ ಆರಂಭವಾಯಿತು. ಮಧ್ಯಾಹ್ನ 2.15ಕ್ಕೆ ಮುಕ್ತಾಯವಾಯಿತು.

ಮಧ್ಯಾಹ್ನದ ಬಳಿಕ ಮತ್ತೆ ವಿಚಾರಣೆ ಆರಂಭಿಸುತ್ತಾರೆ ಎಂದೇ ದೂರುದಾರರು, ಸ್ವಯಂ ಸೇವಾ ಸಂಘಟನೆಗಳು ಹಾಗೂ ಬಳ್ಳಾರಿ, ಕೊಪ್ಪಳ, ರಾಯಚೂರು, ಬೀದರ್‌, ಯಾದಗಿರಿ ಹಾಗೂ ಕಲಬುರ್ಗಿ ಜಿಲ್ಲೆಗಳಿಂದ ಬಂದಿದ್ದ ಅಧಿಕಾರಿಗಳು ನಿರೀಕ್ಷಿಸಿದ್ದರು. ಆದರೆ, ಏಕಾಏಕಿ ಆಯೋಗದ ಸಮಾಲೋಚಕರು, ‘ಸದಸ್ಯರು ಹೈದರಾಬಾದ್‌ಗೆ ತೆರಳುತ್ತಿದ್ದು, ವಿಚಾರಣೆ ಇರುವುದಿಲ್ಲ. ನಿಮ್ಮ ಅರ್ಜಿಗಳನ್ನು ಕೊಡಿ. ಅವುಗಳನ್ನು ದೆಹಲಿಗೆ ತೆಗೆದುಕೊಂಡು ಹೋಗುತ್ತೇವೆ. ಸದಸ್ಯರು ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಗಳಿಂದ ನ್ಯಾಯ ಕೊಡಿಸುತ್ತಾರೆ’ ಎಂದು ಪ್ರಕಟಿಸಿದರು. ಈ ಮಾತು ಕೇಳಿ ಮಕ್ಕಳು ನಿರಾಶೆಗೆ ಒಳಗಾದರು.

ಜಿಲ್ಲಾಡಳಿತ ನೀಡಿದ ಮಾಹಿತಿಯಂತೆ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿಚಾರಣೆ ನಡೆಯಬೇಕಿತ್ತು. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದ ಆಯೋಗದ ಸದಸ್ಯ ಜಿ.ಆರ್‌.ಆನಂದ ಅವರು ಬಂದ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಿ ಹೋಗುವುದಾಗಿ ಭರವಸೆ ನೀಡಿದ್ದರು. ಆದರೆ, ಏಕಾಏಕಿ ಈ ನಿರ್ಧಾರ ಹೊರಬಿದ್ದಿದ್ದರಿಂದ ದೂರು ನೀಡಲು ನೂರಾರು ಕಿ.ಮೀ. ದೂರದಿಂದ ಬಂದವರು ಬರಿಗೈಲಿ ವಾಪಸ್‌ ತೆರಳಬೇಕಾಯಿತು. 

ವಾರದ ಹಿಂದೆಯೇ ಸದಸ್ಯರ ಪ್ರವಾಸ ಪಟ್ಟಿ ಜಿಲ್ಲಾಡಳಿತವನ್ನು ತಲುಪಿತ್ತು. ಅದರಂತೆ ಶುಕ್ರವಾರ ಸಂಜೆ 4ಕ್ಕೆ ಅವರು ಹೈದರಾಬಾದ್‌ನತ್ತ ಹೊರಡಬೇಕಿತ್ತು. ಇದು ಗೊತ್ತಿದ್ದರೂ ಸಂಜೆ 5ರವರೆಗೆ ವಿಚಾರಣೆಗೆ ಸಮಯ ನಿಗದಿಪಡಿಸಿದ್ದೇಕೆ ಎಂಬ ಪ್ರಶ್ನೆ ಎದುರಾಯಿತು.

‌‘ಸಂಜೆಯವರೆಗೂ ಇದ್ದು ವಿಚಾರಣೆ ಮಾಡಿಯೇ ಹೋಗುತ್ತಾರೆ ಎಂದು ನಿರೀಕ್ಷಿಸಿದ್ದೆವು. ಆದರೆ, ಯಾವ ಮಾಹಿತಿಯನ್ನೂ ಕೊಡದೇ ಹೋಗಿರುವುದಕ್ಕೆ ಬೇಸರವಾಗಿದೆ. ಮೂರು ಗಂಟೆ ವಿಚಾರಣೆ ಮಾಡುವುದಕ್ಕೆ ಅಷ್ಟು ದೂರದಿಂದ ಮಕ್ಕಳು ಬರಬೇಕಿತ್ತೇ’ ಎಂದು ಸಾಮಾಜಿಕ ಪರಿವರ್ತನಾ ಜನಾಂದೋಲನದ ಪ್ರಾದೇಶಿಕ ಸಂಯೋಜಕ ವಿಠ್ಠಲ ಚಿಕಣಿ ಮಾಧ್ಯಮ ಪ್ರತಿನಿಧಿಗಳ ಬಳಿ ಪ್ರಶ್ನಿಸಿದರು.

‘ಸದಸ್ಯರು ಎಲ್ಲ ಅರ್ಜಿಗಳ ವಿಚಾರಣೆ ನಡೆಸುತ್ತಾರೆ ಎಂದೇ ನಾವು ಭಾವಿಸಿದ್ದೆವು. ಅದಕ್ಕಾಗಿ ವಾರದಿಂದಲೇ ಸಿದ್ಧತೆ ಮಾಡಿಕೊಂಡಿದ್ದೆವು’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.