ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹರೂ ಯುವ ಕೇಂದ್ರದಿಂದ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ: ಎಂ.ಎನ್‌. ನಟರಾಜ್

ಸ್ವಚ್ಛ ಭಾರತ ಅಭಿಯಾನದಡಿ ಅ 1ರಿಂದ 31ರವರೆಗೆ ಅಭಿಯಾನ
Last Updated 27 ಅಕ್ಟೋಬರ್ 2021, 14:18 IST
ಅಕ್ಷರ ಗಾತ್ರ

ಕಲಬುರಗಿ: ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ನೆಹರೂ ಯುವ ಕೇಂದ್ರ ಸಂಘಟನೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ಸಹಯೋಗದಲ್ಲಿ ಅಕ್ಟೋಬರ್ 1ರಿಂದ 31ರವರೆಗೆ ಪ್ಲಾಸ್ಟಿಕ್ ವಿಲೇವಾರಿ ಮಾಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ನೆಹರೂ ಯುವ ಕೇಂದ್ರ ಸಂಘಟನೆಯ ರಾಜ್ಯ ನಿರ್ದೇಶಕ ಎಂ.ಎನ್‌. ನಟರಾಜ್ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ಕಲಬುರಗಿ ಜಿಲ್ಲೆಯ ಪ್ರಮುಖ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳಲ್ಲಿ ಸ್ವಯಂ ಸೇವಕರಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಭಾರತೀಯ ಸರ್ವೇಕ್ಷಣಾ ಇಲಾಖೆಯಿಂದ ನಿರ್ವಹಿಸುತ್ತಿರುವ ಸ್ಮಾರಕಗಳ ಸುತ್ತಲೂ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲಾಗುವುದು. ಮೈಸೂರು, ಅರಮನೆ, ಬೆಂಗಳೂರು ಅರಮನೆ, ಶ್ರೀರಂಗಪಟ್ಟಣದ ಐತಿಹಾಸಿಕ ಸ್ಮಾರಕಗಳು, ವಿಜಯಪುರದ ಗೋಲಗುಂಬಜ್‌ಗಳನ್ನು ಸ್ವಚ್ಛಗೊಳಿಸಲಾಗುವುದು‘ ಎಂದರು.

ಇದರಲ್ಲಿ ಕ್ರೀಡಾಪಟುಗಳು, ರೈಲ್ವೆ ಸಿಬ್ಬಂದಿ, ಪೊಲೀಸ್‌ ಸಿಬ್ಬಂದಿ, ಸಿಆರ್‌ಪಿಎಫ್‌, ರಾಜಕೀಯ ಮುಖಂಡರು, ಚುನಾಯಿತ ಪ್ರತಿನಿಧಿಗಳು ಹಾಗೂ ಸರ್ಕಾರೇತರ ಸಂಘಟನೆಗಳು ಭಾಗವಹಿಸಿದ್ದು, ಇದಕ್ಕಾಗಿ ಯಾವುದೇ ಪ್ರತ್ಯೇಕ ಅನುದಾನವನ್ನು ಖರ್ಚು ಮಾಡುತ್ತಿಲ್ಲ ಎಂದು ಹೇಳಿದರು.

’ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ, ತೂಕ ಮತ್ತು ವಿಲೇವಾರಿ, ಹಳ್ಳಿಗಳ ಸೌಂದರೀಕರಣ, ಕೆರೆ, ಬಾವಿ, ಧಾರ್ಮಿಕ ಸ್ಥಳಗಳು, ಯುವಕ ಸಂಘಗಳ ಕಟ್ಟಡ, ಶಾಲೆ, ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿ ಕಟ್ಟಡಗಳ ಸ್ವಚ್ಛತೆ, ಸಾಂಪ್ರದಾಯಿಕ ನೀರಿನ ಮೂಲಗಳ ಸ್ವಚ್ಛತೆ, ಕೆರೆ ಬಾವಿಗಳ ಸ್ವಚ್ಛತೆ ಮಾಡಲಾಗುವುದು‘ ಎಂದರು.

ಜಿಲ್ಲಾ ಯುವಜನ ಕೇಂದ್ರದ ಹರ್ಷಲ್ ಎಸ್‌. ತಲಸ್ಕರ್ ಮಾತನಾಡಿ, ’ಕಲಬುರಗಿ ಜಿಲ್ಲೆಯಲ್ಲಿ 8,225 ಕೆ.ಜಿ. ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುವ ಗುರಿಯನ್ನು ನೀಡಲಾಗಿದ್ದು, ದಿನಕ್ಕೆ 275 ಕೆ.ಜಿ. ಸಂಗ್ರಹ ಮಾಡಲಾಗುತ್ತಿದೆ. ಶೇ 91ರಷ್ಟು ಗುರಿ ಸಾಧನೆ ಮಾಡಲಾಗಿದೆ. 27 ರಾಷ್ಟ್ರೀಯ ಯುವ ಸ್ವಯಂ ಸೇವಕರು, ಎನ್‌ಎಸ್‌ಎಸ್‌, ಎನ್‌ಸಿಸಿಯ ಸುಮಾರು 60 ಸ್ವಯಂ ಸೇವಕರು ನಿತ್ಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ‘ ಎಂದು ಹೇಳಿದರು.

ಬೀದರ್ ಜಿಲ್ಲೆಯ ಯುವಜನ ಅಧಿಕಾರಿ ಮಯೂರ್‌ ಕುಮಾರ್, ಕಲಬುರಗಿ ಎನ್‌ಎಸ್‌ಎಸ್‌ ಘಟಕದ ಅಧಿಕಾರಿ ಚಂದ್ರಶೇಖರ ದೊಡ್ಡಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT