ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಜಿಲ್ಲಾ ಪಂಚಾಯಿತಿಗೆ ಹೊಸ ಕಟ್ಟಡ ಭಾಗ್ಯ!

ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ 2 ಎಕರೆ ಜಾಗ; ಸಿಂಡಿಕೇಟ್ ಒಪ್ಪಿಗೆ
Last Updated 19 ಮಾರ್ಚ್ 2023, 5:41 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಗ್ರಾಮೀಣ ಆಡಳಿತದ ಶಕ್ತಿ ಕೇಂದ್ರವಾದ ‘ಜಿಲ್ಲಾ ಪಂಚಾಯಿತಿ’ಯ ನೂತನ ಕಚೇರಿ ನಿರ್ಮಾಣಕ್ಕೆ ಜಾಗ ಕೊಡಲು ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಒಪ್ಪಿಗೆ ನೀಡಿದೆ.

ಪ್ರಸ್ತುತ ಜಿಲ್ಲಾ ಪಂಚಾಯಿತಿ ಕಚೇ ರಿಯು 1881ರಲ್ಲಿ ಆರನೇ ನಿಜಾಮ್ ಮೀರ್ ಮೆಹಬೂಬ್ ಅಲಿ ಖಾನ್ ಬಹದ್ದೂರ್ ನಿರ್ಮಿಸಿದ್ದ ಅರಮನೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಾರ್ವಜನಿಕರ ಹಾಗೂ ಆಡಳಿತದ ಹಿತದೃಷ್ಟಿ ಇರಿಸಿಕೊಂಡ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು, ವಿಶಾಲ ಕಟ್ಟಡ ಹೊಂದುವ ಉದ್ದೇಶದಿಂದ ಹೊಸ ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ.

ನಗರ ವ್ಯಾಪ್ತಿಯ ಸಮೀಪದಲ್ಲೇ ಜಿಲ್ಲಾ ಪಂಚಾಯಿತಿಯ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಜಾಗವಿಲ್ಲ. ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಸಾಕಷ್ಟು ಸ್ಥಳಾವಕಾಶವಿದೆ. ಹೀಗಾಗಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಡಾ.ಗಿರೀಶ್ ಡಿ.ಬದೋಲೆ ಅವರು 5 ಎಕರೆ ಜಾಗ ನೀಡುವಂತೆ ಕೋರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ ಅವರಿಗೆ ಪತ್ರ ಬರೆದಿದ್ದರು. ಸಿಇಒ ಅವರ ಪತ್ರದ ವಿಷಯವನ್ನು ಕುಲಪತಿಯವರು ಶನಿವಾರ ನಡೆದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಪ್ರಸ್ತಾಪಿಸಿದರು.

ಜಿಪಂ ನೂತನ ಕಚೇರಿ ನಿರ್ಮಾಣಕ್ಕೆ ಆವರಣದಲ್ಲಿ ಸ್ಥಳಾವಕಾಶ ಕೊಟ್ಟರೆ ವಿಶ್ವವಿದ್ಯಾಲಯಕ್ಕೂ ಅನುಕೂಲ ಆಗುತ್ತದೆ. ಜಿಲ್ಲಾ ಪಂಚಾಯಿತಿಯ ಹೆಗಲಿಗೆ ಉದ್ಯಾನ, ಸಾಮಾಜಿಕ ಅರಣ್ಯ ದಂತಹ ನಿರ್ವಹಣೆಯ ಜವಾಬ್ದಾರಿ ಯನ್ನೂ ಒಪ್ಪಿಸಬಹುದು ಎಂಬ ಲೆಕ್ಕಾಚಾರದ ಮೇಲೆ ಜಾಗ ಕೊಡಲು ಸಿಂಡಿಕೇಟ್ ಸದಸ್ಯರು ಸಮ್ಮತಿಸಿದ್ದಾರೆ.

‘ಜಿಲ್ಲಾ ಪಂಚಾಯಿತಿ ಸಿಇಒ ಅವರು ಆವರಣದಲ್ಲಿ 5 ಎಕರೆ ಜಾಗ ನೀಡುವಂತೆ ಪತ್ರ ಬರೆದಿದ್ದು, ಸಿಂಡಿಕೇಟ್‌ನಲ್ಲಿ ಚರ್ಚಿಸಲಾಗಿದೆ. 5 ಎಕರೆ ಬದಲಿಗೆ ಕಟ್ಟಡಕ್ಕೆ ಬೇಕಾದ ಎರಡು ಎಕರೆ ಜಾಗ ನೀಡಲು ಸಿಂಡಿಕೇಟ್ ಒಪ್ಪಿಗೆ ನೀಡಿದೆ. ಕಲ್ಯಾಣ ಕರ್ನಾಟಕ ಉತ್ಸವ ನಡೆದ ಪ್ರದೇಶದಲ್ಲಿ ಜಿಲ್ಲಾ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಸ್ಥಳಾವಕಾಶ ಕೊಡಲು ತೀರ್ಮಾನಿಸಲಾಗಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅವರಣದ ಈ ಭಾಗದ ಹೊರ ಪ್ರದೇಶವು ಜನವಸತಿಯಿಂದ ಕೂಡಿದ್ದು, ಮಳೆ ನೀರು ಸಹ ನುಗ್ಗುತ್ತದೆ. ಆವರಣದ ಭದ್ರತೆ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಇಲ್ಲಿಯೇ ಜಾಗ ನೀಡಲು ಮುಂದಾಗಿದ್ದೇವೆ. ನಿಯಮಗಳ ಅನುಸಾರ, ಕಾಯ್ದೆಯಲ್ಲಿ ಏನಿದೆ ಎಂಬುದನ್ನು ನೋಡಿಕೊಂಡು ಜಾಗ ಕೊಡುತ್ತೇವೆ’ ಎಂದರು.

ಅಗ್ನಿ ಶಾಮಕ, ಕೆಎಸ್‌ಒಯು, ಪೊಲೀಸ್ ಠಾಣೆಗೂ ತಲಾ 1 ಎಕರೆ

ವಿಶ್ವವಿದ್ಯಾಲಯದ ಆವರಣದಲ್ಲಿ ಅಗ್ನಿಶಾಮಕ ದಳ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (ಕೆಎಸ್‌ಒಯು) ಪ್ರಾದೇಶಿಕ ಕಚೇರಿ ಮತ್ತು ವಿಶ್ವವಿದ್ಯಾಲಯ ಪೊಲೀಸ್ ಠಾಣೆ ನಿರ್ಮಾಣಕ್ಕೆ ತಲಾ ಒಂದು ಎಕರೆ ಜಾಗ ಕೊಡಲು ಸಿಂಡಿಕೇಟ್ ಒಪ್ಪಿಗೆ ಕೊಟ್ಟಿದೆ.

‘ಆವರಣದ ಸುತ್ತಮುತ್ತ ಆಗಾಗ ಬೆಂಕಿ ಅವಘಡಗಳು ಸಂಭವಿಸುತ್ತವೆ. ಸಮೀಪದಲ್ಲಿ ಅಗ್ನಿ ಶಾಮಕ ಕಚೇರಿ ಇರಲಿ ಎಂಬ ಕಾರಣಕ್ಕೆ ಒಂದು ಎಕರೆ ನೀಡಲಾಗುತ್ತಿದೆ. ಕೆಎಸ್‌ಒಯು ಪ್ರತಿ ಜಿಲ್ಲೆಯಲ್ಲಿ ಪ್ರಾದೇಶಿಕ ಕಚೇರಿ ತೆರೆಯಲು ಮುಂದಾಗಿದೆ. ಹೀಗಾಗಿ, ಒಂದು ಎಕರೆ ಜಾಗ ಕೊಟ್ಟು ಕೆಎಸ್‌ಒಯು ಜೊತೆಗೆ ಎಂಒಯು ಮಾಡಿಕೊಳ್ಳಲಾಗುವುದು.

ಇದರಿಂದ ವಿದ್ಯಾರ್ಥಿಗಳಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಎಪಿ) ಅನ್ವಯ ಏಕಕಾಲದಲ್ಲಿ ಎರಡು ಪದವಿ ಪಡೆಯುವ ಅವಕಾಶ ಸಿಗಲಿದೆ’ ಎಂದು ಪ್ರೊ.ದಯಾನಂದ ಅಗಸರ ಅವರು ತಿಳಿಸಿದರು.

‘ಈಗಿರುವ ಪೊಲೀಸ್ ಠಾಣೆಯು ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಗೆ ಅಡ್ಡಿಯಾಗುತ್ತಿದೆ. ಹೀಗಾಗಿ, ಆವರಣ ಮೂಲೆಯೊಂದರಲ್ಲಿ ಒಂದು ಎಕರೆ ಜಾಗ ಕೊಡಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT