ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮನ್ನಾ: ಅರ್ಧದಷ್ಟು ಹಣಕ್ಕೆ ಕೇಂದ್ರಕ್ಕೆ ಬೇಡಿಕೆ

Last Updated 17 ಜೂನ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ರೈತರ ಸಾಲ ಮನ್ನಾ ಮಾಡುವ ರಾಜ್ಯ ಸರ್ಕಾರದ ಕ್ರಮಕ್ಕೆ ಶೇ50ರಷ್ಟು ನೆರವು ನೀಡುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.

ಭಾನುವಾರ ಇಲ್ಲಿ ಪ್ರಧಾನಿ ಅಧ್ಯಕ್ಷತೆಯ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಉಲ್ಬಣಗೊಂಡಿರುವ ಕೃಷಿ ಬಿಕ್ಕಟ್ಟಿನ ನಿರ್ವಹಣೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೈ ಜೋಡಿಸಬೇಕು ಎಂದರು.

ರಾಜ್ಯದಲ್ಲಿ 85 ಲಕ್ಷ ರೈತರು ಬ್ಯಾಂಕುಗಳಿಂದ ಕೃಷಿ ಸಾಲ ಪಡೆದಿದ್ದಾರೆ. ಮತ್ತೆ ಮತ್ತೆ ಎರಗುವ ಬರಗಾಲ ಕಾರಣ ರೈತರ ಬವಣೆ ಮತ್ತಷ್ಟು ತೀವ್ರಗೊಂಡಿದೆ. ರೈತರ ಉತ್ಪನ್ನಗಳಿಗೆ ಲಾಭದಾಯಕ ಧಾರಣೆಗಳು ಸಿಗುತ್ತಿಲ್ಲ. ಗ್ರಾಮೀಣ ಋಣಭಾರ ಮುಖಕ್ಕೆ ರಾಚುವಂತೆ ಬೆಳೆಯತೊಡಗಿದೆ. ಈ ಬಿಕ್ಕಟ್ಟಿನ ನಿರ್ವಹಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೈ ಜೋಡಿಸಬೇಕು. ರೈತರ ಋಣಭಾರ ತಗ್ಗಿಸಲು ಕರ್ನಾಟಕ ಸರ್ಕಾರ ಸಾಕಷ್ಟು ಕ್ರಮಗಳನ್ನು ಜರುಗಿಸಿದೆ. ಕೇಂದ್ರ ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ಅವರು ಮನವಿ ಮಾಡಿದರು.

ಕೃಷಿ ಮಾರುಕಟ್ಟೆ ಸುಧಾರಣೆಗಳು ಮತ್ತು ಮಣ್ಣಿನ ಆರೋಗ್ಯ ಪರೀಕ್ಷೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. 2015-16 ಮತ್ತು 2016-17ನೆಯ ಸಾಲುಗಳಲ್ಲಿ 78.32 ಲಕ್ಷ ಮಣ್ಣು ಪರೀಕ್ಷೆಯ ಕಾರ್ಡ್ ಗಳನ್ನು ವಿತರಿಸಲಾಗಿದೆ. ಹವಾಮಾನ ವೈಪರೀತ್ಯಗಳನ್ನು ಸಹಿಸಿಕೊಳ್ಳುವ ಕೃಷಿಯನ್ನು ಅಭಿವೃದ್ಧಿಪಡಿಸಬೇಕಿದೆ. ಭಾರೀ ವಿಸ್ತೀರ್ಣದ ಮಳೆಯಾಶ್ರಿತ ಕೃಷಿ ಭೂಮಿ ಹವಾಮಾನ ಬದಲಾವಣೆಯ ತೀವ್ರ ಕಷ್ಟಕ್ಕೆ ಸಿಲುಕಿದೆ. ಕಳೆದ 16 ವರ್ಷಗಳಲ್ಲಿ 13 ಬರಗಾಲಗಳನ್ನು ಕರ್ನಾಟಕ ಕಂಡಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ವೈಪರೀತ್ಯ ತಡೆದುಕೊಳ್ಳುವ ತಳಿಗಳ ಅಭಿವೃದ್ಧಿ, ಜಲಸಂರಕ್ಷಣೆ ಪದ್ಧತಿಗಳು, ಪಾರಂಪರಿಕ ಆಹಾರ ಸೇವನೆಯ ಉತ್ತೇಜನಾ ಕ್ರಮಗಳನ್ನು ರೂಪಿಸಲು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ತಜ್ಞರನ್ನು ನೀತಿ ಆಯೋಗ ಬಳಸಿಕೊಳ್ಳಬೇಕು ಎಂದರು.

ಆಶೋತ್ತರ ಜಿಲ್ಲೆಗಳೆಂದು ಕೇಂದ್ರ ಸರ್ಕಾರ ಗುರುತಿಸಿರುವ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ವಿಸ್ತೃತ ಅಭಿವೃದ್ಧಿ ನಡೆಸಲು ಆಶೋತ್ತರ ಜಿಲ್ಲೆಗಳಿಗೆ ಪ್ರತಿ ವರ್ಷ ತಲಾ ₹100 ಕೋಟಿ ನೆರವು ನೀಡಬೇಕು ಎಂದು ಅವರು ಕೋರಿದರು.

ನೀತಿ ಆಯೋಗದ ಮುಂಬರುವ ಸಭೆಗಳ ಕಾರ್ಯಸೂಚಿಯಲ್ಲಿ ಉದ್ಯೋಗ ಸೃಷ್ಟಿ ಮತ್ತು ಕೌಶಲ ಅಭಿವೃದ್ಧಿಯನ್ನೂ ಸೇರಿಸಬೇಕು. ಈ ದಿಸೆಯಲ್ಲಿ ನಾನಾ ರಾಜ್ಯಗಳು ಅನುಸರಿಸಿದ ವಿಧಾನಗಳು ಮತ್ತು ರಣತಂತ್ರಗಳನ್ನು ಪರಸ್ಪರ ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ರಾಜ್ಯಗಳು ಮಂಡಿಸಿದ ಬೇಡಿಕೆಗಳು

* ರಾಜ್ಯ ವಿಭಜನೆಯ ಸಮಸ್ಯೆಗಳು ಬಗೆಹರಿಯಬೇಕು ಮತ್ತು ತಮ್ಮ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಆಂಧಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಒತ್ತಾಯಿಸಿದರು.

* ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದಾಗಿ ರಾಜ್ಯಗಳ ಆದಾಯ ಸಂಗ್ರಹದ ಸ್ವಾತಂತ್ರ್ಯ ಮೊಟಕಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದರು.

* ಸಹಕಾರಿ ಗಣರಾಜ್ಯ ವ್ಯವಸ್ಥೆ ಎಂದು ಹೇಳುತ್ತಿದ್ದರೂ ರಾಜ್ಯಗಳ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು  ಕೇಂದ್ರ ಮುಂದಾಗುತ್ತಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದರು.

* ಚಂದ್ರಬಾಬು ನಾಯ್ಡು ಬೇಡಿಕೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಪುನರುಚ್ಚರಿಸಿದರು. ತಮ್ಮ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಬೇಕು ಎಂದು ಅವರು ಒತ್ತಾಯಿಸಿದರು.

* ರೈತರ ಸಾಲ ಮನ್ನಾ ಮಾಡುವುದಕ್ಕಾಗಿ ಕೇಂದ್ರ ಮತ್ತು ರಾಜ್ಯಗಳ ಸಮಿತಿಯೊಂದನ್ನು ಕೇಂದ್ರ ಸರ್ಕಾರ ರೂಪಿಸಬೇಕು ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಆಗ್ರಹಿಸಿದರು.

ಏಕಕಾಲಕ್ಕೆ ಚುನಾವಣೆ: ಚರ್ಚೆಗೆ ಒತ್ತಾಯ

ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕು ಎಂಬ ತಮ್ಮ ಕರೆಗೆ ಪುನಶ್ಚೇತನ ಕೊಡಲು ನೀತಿ ಆಯೋಗದ ಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಬಳಸಿಕೊಂಡರು. ಈ ಬಗ್ಗೆ ವ್ಯಾಪಕವಾದ ಚರ್ಚೆ ನಡೆಯಬೇಕು ಎಂದು ಅವರು ಹೇಳಿದರು.

ಆದರೆ, ಸಭೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿಗಳು ಪ್ರಧಾನಿಯ ಈ ಕರೆಯ ಬಗ್ಗೆ ಹೆಚ್ಚಿನ ಉತ್ಸಾಹ ತೋರಲಿಲ್ಲ. ಆರ್ಥಿಕ ವಿಚಾರಗಳು ಮತ್ತು ಇತರ ಆದ್ಯತೆಯ ವಿಚಾರಗಳ ಬಗ್ಗೆ ಗಮನ ಹರಿಸುವಂತೆ ಅವರು ಒತ್ತಾಯಿಸಿದರು.

ಕೃಷಿ ಕ್ಷೇತ್ರದಲ್ಲಿ ಉದ್ಯಮಗಳು ಹೆಚ್ಚು ಬಂಡವಾಳ ಹೂಡುವಂತೆ ರಾಜ್ಯ ಸರ್ಕಾರಗಳು ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಪ್ರಧಾನಿ ಸೂಚಿಸಿದರು.

ರೈತರ ಸಮಸ್ಯೆಗಳೇ ಕೇಂದ್ರ ಬಿಂದು: ನೀತಿ ಆಯೋಗದ ಸಭೆಯಲ್ಲಿ ರೈತರ ಸಮಸ್ಯೆಗಳು ಮತ್ತು ರೈತರ ಸಾಲ ಮನ್ನಾ ವಿಚಾರವೇ ಪ್ರಮುಖವಾಗಿ ಪ್ರಸ್ತಾಪವಾದವು. ರೈತರ ಆದಾಯ ದ್ವಿಗುಣಗೊಳಿಸಲು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದೇ ಸಭೆಯ ಮುಖ್ಯ ಕಾರ್ಯಸೂಚಿಯಾಗಿತ್ತು. ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಗಳ ಪ್ರಗತಿ ಪರಿಶೀಲನೆಯ ಉದ್ದೇಶವನ್ನೂ ಸಭೆಯು ಹೊಂದಿತ್ತು.

ಅಂಕಿ ಅಂಶ

* ₹ 69,372 ಕೋಟಿ ಕಳೆದ ಐದು ವರ್ಷಗಳಲ್ಲಿ ನೈಸರ್ಗಿಕ ವಿಕೋಪದಿಂದ ಆದ ನಷ್ಟ

* ₹ 7,656 ಕೋಟಿ ಕಳೆದ ಐದು ವರ್ಷಗಳಲ್ಲಿ ಕರ್ನಾಟಕ ಅವಗಡಗಳ ನಿರ್ವಹಣೆಗೆ ವಿನಿಯೋಗಿಸಿದ ಮೊತ್ತ

* ₹ 1,253 ಕೋಟಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ ನೆರವು

* ಯಾದಗಿರಿ-ರಾಯಚೂರಿಗೆ ವಾರ್ಷಿಕ ₹ 100 ಕೋಟಿ ನೀಡಿ

* ಉದ್ಯೋಗ ಸೃಷ್ಟಿಯನ್ನೂ ಕಾರ್ಯಸೂಚಿಗೆ ಸೇರಿಸಿ

* ಬರ-ನೆರೆ ನಿರ್ವಹಣೆಗೆ ಕೇಂದ್ರ ನೆರವು ಅಸಮರ್ಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT