ಮಂಗಳವಾರ, ಜನವರಿ 18, 2022
15 °C

70 ಕಿ.ಮೀ ನಿಂದ ಮಾತ್ರ ಆಮದು ನಿರ್ಣಯ: ರೈತರ ಪರದಾಟ

ತೀರ್ಥಕುಮಾರ ಬೆಳಕೋಟಾ Updated:

ಅಕ್ಷರ ಗಾತ್ರ : | |

Prajavani

ಕಮಲಾಪುರ: ಆಳಂದ ತಾಲ್ಲೂಕಿನ ಭೂಸನೂರ ಸಕ್ಕರೆ ಕಾರ್ಖಾನೆಯನ್ನು ನಂಬಿ ಕಮಲಾಪುರ ತಾಲ್ಲೂಕಿನ ಅಪಾರ ರೈತರು ಕಬ್ಬು ಬೆಳೆದಿದ್ದು ಕಟಾವು ಮಾಡಲು ಹಿಂದೇಟು ಹಾಕುತ್ತಿರುವುದರಿಂದ ಕಂಗಾಲಾಗಿದ್ದಾರೆ.

ಕಾರ್ಖಾನೆಯಿಂದ ಕೇವಲ 70 ಕಿ.ಮೀ ದೂರದಲ್ಲಿರುವ ಗದ್ದೆಯಿಂದ ಮಾತ್ರ ಕಬ್ಬು ಕಟಾವು ಮಾಡಿಕೊಂಡು ತರಿಸಿಕೊಳ್ಳಬೇಕು ಎಂದು ಆಡಳಿತ ಮಂಡಳಿಯವರು ನಿರ್ಣಯ ಮಾಡಿದ್ದಾರೆ. ತಾಲ್ಲೂಕಿನಲ್ಲಿ ಸುಮಾರು 3 ಸಾವಿರ ಎಕರೆಯಲ್ಲಿ ಬೆಳೆದ ಕಬ್ಬು ಕಟಾವಿಗೆ ಬಂದಿದೆ. ಕಟಾವು ಮಾಡಿಕೊಂಡು ಹೋಗುತ್ತಾರೆ ಎಂದು ತಿಂಗಳಿಂದ ನೀರುಣಿಸುವುದನ್ನು ಸ್ಥಗಿತಗೊಳಿಸಲಾಗಿದೆ.

1972ರಲ್ಲಿ ನಾವು ಶೇರ್‌ ಹೋಲ್ಡರ್‌ ಆಗಿದ್ದೇವೆ. ಪ್ರತಿ ವರ್ಷ ಭೂಸೂನರ ಕಾರ್ಖಾನೆಗೆ ಕಬ್ಬು ಕಳುಹಿಸುತ್ತೇವೆ ಅದನ್ನ ನಂಬಿಯೇ ಕಬ್ಬು ಬೆಳೆದಿದ್ದೇವೆ. ಈಗ ಕಬ್ಬು ಕೊಳ್ಳುವುದಿಲ್ಲ ಎಂದರೆ ಹೇಗೆ? ಯಾವುದೇ ನಿರ್ಣಯ ಕೈಗೊಳ್ಳಬೇಕಿದ್ದರೆ ನಾಟಿಗೂ ಮುಂಚೆಯೆ ರೈತರಿಗೆ ತಿಳಿಸಬೇಕು ಎಂದು ಕಬ್ಬು ಬೆಳೆಗಾರ ಮಲ್ಲಾರೆಡ್ಡಿ ಯಂಕಾರಡ್ಡಿ ಕಲಮೂಡ ಕಿಡಿಕಾರಿದರು.

ತೊಗರಿ ಮತ್ತಿತ್ತರ ಬೆಳೆ ರಾಶಿಯಾಗಿದ್ದು ಜಮೀನುಗಳು ಖಾಲಿಯಾಗಿ ಅಲ್ಲಿನ ಕಬ್ಬಿನ ಗದ್ದೆಗೆ ತೆರಳಲು ದಾರಿ ಸುಗಮಗೊಂಡಿದೆ. ಬೇಕಾದಷ್ಟು ಕಬ್ಬು ಪೂರೈಕೆಯಾಗುತ್ತಿದೆ. ಈಗ ಕಬ್ಬು ಕೊಂಡ್ಯೊಯಲು ನಿರಾಕರಿಸುತ್ತಿದ್ದಾರೆ. ಕಟಾವು ಮಾಡುವ ಕಾರ್ಮಿಕರನ್ನು ವಾಪಸ್‌ ಕರೆಸಿಕೊಂಡಿದ್ದಾರೆ. ತಮ್ಮ ಲಾಭಕ್ಕಾಗಿ 70 ಕಿ.ಮೀ ಅಂತರ ಕಬ್ಬು ತರಬೇಕು ಎಂಬ ನಿಯಮ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆ ಕಬ್ಬು ಬೆಳೆಗಾರರು ಶೇರುದಾರರಿಂದ ಆಯ್ಕೆಯಾದ ನಿರ್ದೇಶಕರನ್ನೊಳಗೊಂಡ ಆಡಳಿತ ಮಂಡಳಿ ಇತ್ತು. ಆಗ ಕಂಪನಿಯ ಶೇರುದಾರರು ಎಲ್ಲೇ ಇರಲಿ ಅವರ ಕಬ್ಬು ಕಟಾವು ಮಾಡಿಕೊಂಡು ತರಬೇಕೆಂದು ನಿಯಮವಿತ್ತು. ಕಳೆದರೆಡು ವಾರದ ಹಿಂದೆ ಎಲ್ಲ ಕಡೆಯ ಕಬ್ಬು ಕೊಂಡ್ಯೊಯ್ದಿದ್ದಾರೆ. ರೈತರ ಕತ್ತು ಹಿಸುಕುತ್ತಿರುವ ಕಾರ್ಖಾನೆಯ ವಿರುದ್ಧ ಕ್ರಮಕೈಗೊಳ್ಳಬೇಕು. ಈ ಹಿಂದಿನಂತೆ ಎಲ್ಲ ರೈತರ ಕಬ್ಬು ಕೊಳ್ಳುವಂತೆ ಸೂಚಿಸಬೇಕು. ಇಲ್ಲದಿದ್ದರೆ ಕಮಲಾ‍ಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಈ ವರ್ಷವೇ ಹೊಸದಾಗಿ 5 ಎಕರೆ ಕಬ್ಬು ಲಾವಣಿ ಮಾಡಿದ್ದೇನೆ. ಕಟಾವಿಗೆ ಬಂದಿದ್ದು ತಿಂಗಳಿಂದ ನೀರುಣಿಸುವುದು ನಿಲ್ಲಿಸಿದ್ದೇನೆ. 15 ದಿನದಲ್ಲಿ ಕೊಂಡ್ಯೊಯ್ಯದಿದ್ದರೆ ಅಪಾರ ನಷ್ಟವಾಗಲಿದೆ’ ಎಂದು ಕಬ್ಬು ಬೆಳೆಗಾರ ಮಲ್ಲಾರೆಡ್ಡಿ ಯಂಕಾರೆಡ್ಡಿ ಅವರು ಅಳಲು ತೋಡಿಕೊಂಡರು.

ಹಿಂದೆ ಸಹಕಾರ ಸಂಘದಡಿ ಕಾರ್ಖಾನೆ ನಿರ್ವಹಣೆ ಮಾಡಲಾಗುತ್ತಿತ್ತು. ಕೆಲ ವರ್ಷಗಳಿಂದ ಖಾಸಗಿಯವರಿಗೆ ಲೀಸ್‌ ಕೊಡಲಾಗಿದೆ. ಕಾರ್ಖಾನೆಯ ಶೇರ್‌ ಹೋಲ್ಡರ್‌ಗಳ ಕಬ್ಬು ಎಲ್ಲೆ ಇದ್ದರು ಕೊಂಡು ತರಬೇಕು ಎಂದು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಅಫಜಲಪುರ ಕಲಬುರಗಿ, ಕಮಲಾಪುರ, ಆಳಂದ ತಾಲ್ಲೂಕಿನ ಎಲ್ಲ ಶೇರ್‌ ಹೋಲ್ಡರ್‌ ಹೊಂದಿದ ಕಬ್ಬು ಕಡ್ಡಾಯವಾಗಿ ಕೊಂಡು ತರಲೇಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.