₹30 ಲಕ್ಷ ವೆಚ್ಚದಲ್ಲಿ ಕನ್ನಡ ಸಭಾ ಭವನ ನಿರ್ಮಾಣ: ಸಿಂಪಿ

7

₹30 ಲಕ್ಷ ವೆಚ್ಚದಲ್ಲಿ ಕನ್ನಡ ಸಭಾ ಭವನ ನಿರ್ಮಾಣ: ಸಿಂಪಿ

Published:
Updated:
Deccan Herald

ಕಲಬುರ್ಗಿ: ‘ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ₹30 ಲಕ್ಷ ವೆಚ್ಚದಲ್ಲಿ ಕನ್ನಡ ಸಭಾ ಭವನ ನಿರ್ಮಿಸಲಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕನ್ನಡ ಸಾಹಿತ್ಯ ಕೇಂದ್ರ ಸಮಿತಿ ₹15 ಲಕ್ಷ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ₹7 ಲಕ್ಷ ಅನುದಾನ ನೀಡಿವೆ. ದಾನಿಗಳು ₹2 ಲಕ್ಷ ನೀಡಿದ್ದಾರೆ. ಇದುವರೆಗೆ ₹26 ಲಕ್ಷ ಖರ್ಚಾಗಿದೆ’ ಎಂದು ತಿಳಿಸಿದರು.

‘ಈ ಸಭಾ ಭವನವು 200 ಆಸನಗಳ ಸಾಮರ್ಥ್ಯ ಹೊಂದಿದೆ. ಅತ್ಯಾಧುನಿಕ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಸೇರಿದಂತೆ ತಾಂತ್ರಿಕ ಸಲಕರಣೆಗಳನ್ನು ಅಳವಡಿಸಲು ₹4 ಲಕ್ಷ ಕೊರತೆ ಇದೆ. ಆದ್ದರಿಂದ ಪರಿಷತ್ ಸದಸ್ಯರು ತಲಾ ₹500 ಹಾಗೂ ಕನ್ನಡ ಪ್ರೇಮಿಗಳು ತಲಾ ₹100 ಧನಸಹಾಯ ನೀಡಬೇಕು’ ಎಂದು ಮನವಿ ಮಾಡಿದರು.

‘ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ₹3 ಸಾವಿರ ಹಾಗೂ ಇತರೆ ಕಾರ್ಯಕ್ರಮಗಳಿಗೆ ₹7 ಸಾವಿರ ಬಾಡಿಗೆ ನಿಗದಿ ಪಡಿಸಲಾಗಿದೆ. ಅಕ್ಟೋಬರ್‌ನಲ್ಲಿ ಸಭಾ ಭವನವನ್ನು ಉದ್ಘಾಟಿಸಲಾಗುವುದು’ ಎಂದು ತಿಳಿಸಿದರು.

‘ನವೆಂಬರ್‌ನಲ್ಲಿ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಅಲ್ಲದೆ, ಗಡಿ ಭಾಗಗಳಲ್ಲೂ ಸಮ್ಮೇಳನಗಳನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆದಿದೆ’ ಎಂದರು.

ಪರಿಷತ್‌ನ ಗೌರವ ಕಾರ್ಯದರ್ಶಿಗಳಾದ ವಿಜಯಕುಮಾರ ಪರುತೆ, ಮಡಿವಾಳಪ್ಪ ನಾಗರಳ್ಳಿ, ಸಂಘ–ಸಂಸ್ಥೆಗಳ ಅಧ್ಯಕ್ಷ ಶಿವಾನಂದ ಕಶೆಟ್ಟಿ, ಕಲಬುರ್ಗಿ ದಕ್ಷಿಣ ವಲಯದ ಗೌರವ ಕಾರ್ಯದರ್ಶಿ ಆನಂದ ನಂದೂರಕರ್, ಚಿಂಚೋಳಿ ತಾಲ್ಲೂಕು ಗೌರವ ಕಾರ್ಯದರ್ಶಿ ಜಾಕಿರ್ ಹುಸೇನ್, ವಿಶೇಷ ಆಹ್ವಾನಿತರಾದ ಸುಲೇಖಾ ಮಾಲಿಪಾಟೀಲ, ಸಂಜೀವರೆಡ್ಡಿ, ರಾಧಾಕೃಷ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !