ಶನಿವಾರ, ಮಾರ್ಚ್ 25, 2023
25 °C
ಕೋವಿಡ್ ಸಂದರ್ಭದಲ್ಲಿಯೂ ಜನರಿಗೆ ಮಾಹಿತಿ ತಲುಪಿಸುವ ವಾಹಕವಾದ ಪತ್ರಿಕಾ ವಿತರಕರು

ಕಲಬುರ್ಗಿ: ಪತ್ರಿಕಾ ವಾರಿಯರ್‌ಗಳ ಕರ್ತವ್ಯಕ್ಕೆ ಸಲಾಂ

ಮನೋಜಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಭಾರತದಲ್ಲಿ ಪತ್ರಿಕೆಗಳ ಯುಗ ಆರಂಭವಾಗಿ 240 ವರ್ಷಗಳು ಸಂದಿರುವ ಈ ಸಂದರ್ಭದಲ್ಲಿ ಪತ್ರಿಕೆಗಳನ್ನು ಜನರಿಗೆ ತಲುಪಿಸುವ ಆ ಮೂಲಕ ಮಾಹಿತಿಗಳ ವಾಹಕರಾದ ಪತ್ರಿಕಾ ವಿತರಕರು ಕೋವಿಡ್‌–19 ಸೋಂಕು ದೇಶಕ್ಕೆ ವ್ಯಾಪಿಸಿರುವ ಸಂದರ್ಭದಲ್ಲಿಯೂ ಅಂಜದೇ ಅಳುಕದೇ ಕೆಲಸ ಮಾಡಿದ್ದಾರೆ. ಇದೇ 4ರಂದು ರಾಜ್ಯದಾದ್ಯಂತ ಪತ್ರಿಕಾ ವಿತರಕರ ದಿನವನ್ನಾಗಿ ಆಚರಿಸುವ ಮೂಲಕ ಅವರಿಗೆ ಸೂಕ್ತ ಗೌರವವನ್ನು ಸಲ್ಲಿಸಲಾಗುತ್ತಿದೆ.

ಮಾರ್ಚ್ 10ರಂದು ಜಿಲ್ಲೆಯಲ್ಲಿ ಮೊದಲ ಕೋವಿಡ್‌ ಸಾವು ಸಂಭವಿಸಿತು. ಅಂದಿನಿಂದ ಇತ್ತೀಚಿನವರೆಗೂ ಲಾಕ್‌ಡೌನ್ ವಿಧಿಸಲಾಗಿತ್ತು. ಕೆಲ ದಿನಗಳವರೆಗೆ ಪತ್ರಿಕೆಗಳನ್ನು ಜನರ ಮನೆಗಳಿಗೆ ತಲುಪಿಸಲು ಪಟ್ಟ ಶ್ರಮ ಅಷ್ಟಿಷ್ಟಲ್ಲ.

ರಾಜ್ಯ ಸರ್ಕಾರ ಪತ್ರಿಕೆಗಳ ವಿತರಣೆಗೆ ಅಡ್ಡಿ ಮಾಡಬಾರದೆಂದು ಸೂಚನೆ ನೀಡಿದ್ದರೂ ಬೆಳಿಗ್ಗೆಯೇ ಪತ್ರಿಕೆಗಳನ್ನು ವಿಂಗಡಿಸುವ ಸ್ಥಳಕ್ಕೆ ಬಂದ ಪೊಲೀಸರು ಹಲವು ವಿತರಕರಿಗೆ ಲಾಠಿಯಿಂದ ಥಳಿಸಿದರು. ಮನೆಗಳಿಗೆ ಪತ್ರಿಕೆ ಹಂಚಲು ಹೋದರೆ, ಪತ್ರಿಕೆಯಿಂದ ಕೋವಿಡ್ ಹರಡುತ್ತದೆ ಎಂಬ ತಪ್ಪು ಕಲ್ಪನೆಯಿಂದಾಗಿ ಹಲವು ಜನರು ಪತ್ರಿಕೆಗಳನ್ನು ಹಾಕಿಸಿಕೊಳ್ಳಲು ನಿರಾಕರಿಸಿದರು ಎಂದು ನೆನಪಿಸಿ ಕೊಳ್ಳುತ್ತಾರೆ ಕಲಬುರ್ಗಿಯ ಹಲವು ಪತ್ರಿಕಾ ಏಜೆಂಟರು ಹಾಗೂ ವಿತರಕರು.

‘ಲಾಕ್‌ಡೌನ್ ಅವಧಿಯ ಸುಮಾರು ಮೂರು ತಿಂಗಳು ನಮಗೆ ನಿಜವಾಗಿಯೂ ಕಷ್ಟದ ದಿನಗಳು. ಬಹುತೇಕ ಜನರಿಗೆ ಸುದ್ದಿಪತ್ರಿಕೆಗಳನ್ನು ಓದುವ ಆಸೆಯಿದ್ದರೂ ಕೊರೊನಾ ಬಗ್ಗೆ ಇದ್ದ ತಪ್ಪು ಕಲ್ಪನೆಯಿಂದಾಗಿ ಒಂದಷ್ಟು ದಿನಗಳು ಪತ್ರಿಕೆಗಳು ಬೇಡ ಎಂದರು. ಆದರೆ, ಸುಮಾರು 25ರಿಂದ 30 ವರ್ಷ ಇದೇ ವೃತ್ತಿಯಲ್ಲಿರುವ ನಮಗೆ ಜನರೊಂದಿಗಿನ ಒಡನಾಟವೂ ಚೆನ್ನಾಗಿದೆ. ಹೀಗಾಗಿ, ಅವರ ಮನವೊಲಿಸಿ ಪತ್ರಿಕೆಗಳನ್ನು ಹಾಕಿದೆವು. ನಂತರ ಶುರುವಾಗಿದ್ದು ತಿಂಗಳ ಬಿಲ್ ಸಂಗ್ರಹ. ನಾವು ಮಾಸ್ಕ್ ಹಾಕಿಕೊಂಡೇ ಬಿಲ್ ಸಂಗ್ರಹಕ್ಕೆ ಹೋದರೂ ಕೈಯಿಂದ ಹಣ ಕೊಡಲು ಹಿಂಜರಿದರು. ಬದಲಾಗಿ, ಬಟ್ಟೆಯಲ್ಲಿ ಹಣವನ್ನು ಸುರಳಿ ಸುತ್ತಿ ಬಿಲ್ ಮೊತ್ತವನ್ನು ಪಾವತಿಸಿದರು’ ಎಂದು ಸ್ಮರಿಸುತ್ತಾರೆ ಕಲಬುರ್ಗಿಯ ಪತ್ರಿಕಾ ಏಜೆಂಟರಾದ ಬಸವರಾಜ ಖಾನಾಪುರ.

ಮಳೆ, ಚಳಿ ಎನ್ನದೇ ಎಲ್ಲರೂ ಏಳುವ ಮುಂಚೆಯೇ ಗ್ರಾಹಕರ ಮನೆ ಬಾಗಿಲಿಗೆ ಪತ್ರಿಕೆಗಳನ್ನು ತಲುಪಿಸುತ್ತೇವೆ. ಈ ವೃತ್ತಿಯನ್ನು ಬಿಟ್ಟರೆ ಬೇರೆ ಉದ್ಯೋಗವಿಲ್ಲ. ಆಗ ‘ಪ್ರಜಾವಾಣಿ’ ಪತ್ರಿಕೆ ಬೆಂಗಳೂರಿನಿಂದ ಬರುತ್ತಿತ್ತು. ಮತ್ತೊಂದು ಪತ್ರಿಕೆ ಹುಬ್ಬಳ್ಳಿಯಿಂದ ಬರುತ್ತಿತ್ತು. ಎಷ್ಟೇ ಹೊತ್ತಾದರೂ ಪತ್ರಿಕೆಗಳ ಬಂಡಲ್‌ಗಳನ್ನು ಸೈಕಲ್ ಮೇಲೆ ಹೊತ್ತುಕೊಂಡು ಮನೆ ಮನೆ ತಿರುಗಿ ತಲುಪಿಸುತ್ತಿದ್ದೆವು. ಈಗಲೂ ಕಾಲ ಬದಲಾಗಿದೆ ಎಂದು ಅನಿಸುವುದಿಲ್ಲ. ಇಷ್ಟೊಂದು ದಿನಗಳ ಲಾಕ್‌ಡೌನ್ ನನ್ನ ವೃತ್ತಿ ಜೀವನದಲ್ಲಿ ಕಂಡಿಲ್ಲ. ಆದರೂ, ಜನರಿಗೆ ಪತ್ರಿಕೆಗಳನ್ನು ತಲುಪಿಸುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಿಲ್ಲ ಎಂದು ಹಲವು ಜನ ಪತ್ರಿಕಾ ವಿತರಕರು ಹೆಮ್ಮೆಯಿಂದ ತಮ್ಮ ಕಾರ್ಯದ ಕುರಿತು ‘ಪ್ರಜಾವಾಣಿ’ಗೆ ಹೇಳಿದರು.

ದೊರೆಯದ ಉದ್ಯೋಗ ಭದ್ರತೆ: ಪತ್ರಿಕಾ ವಿತರಣೆ ಕಾರ್ಯಕ್ಕೆ ಯಾವ ಭದ್ರತೆಯೂ ಇಲ್ಲ. ಯಾರಾದರೂ ಕಾಯಿಲೆ ಬಿದ್ದರೆ ಅಥವಾ ಮರಣ ಹೊಂದಿದರೆ ಅವರಿಗೆ ಆರ್ಥಿಕ ನೆರವನ್ನೂ ಸರ್ಕಾರ ನೀಡುವುದಿಲ್ಲ. ಈ ಬಗ್ಗೆ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದರೂ ಸಮಸ್ಯೆ ಮಾತ್ರ ಹಾಗೆಯೇ ಇದೆ. ಎಲ್ಲ ಪತ್ರಿಕಾ ವಿತರಕರು ಹಾಗೂ ಏಜೆಂಟರಿಗೆ ವಿಮಾ ಸೌಲಭ್ಯವನ್ನು ನೀಡಬೇಕು. ಇವರ ಕುಟುಂಬ ಸದಸ್ಯರಿಗೆ ಆರ್ಥಿಕ ನೆರವು ಸಿಗಬೇಕು. ಈ ಬಗ್ಗೆ ರಾಜ್ಯ ಸರ್ಕಾರ, ಪತ್ರಿಕಾ ಸಂಸ್ಥೆಗಳು ಗಮನ ಹರಿಸಬೇಕು. ಬೇಕಿದ್ದರೆ ₹ 500 ರವರೆಗೆ ವಿಮೆ ಕಂತು ಭರಿಸಲು ಸಿದ್ಧರಿದ್ದೇವೆ ಎಂದು ಪತ್ರಿಕಾ ವಿತರಣೆ ವೃತ್ತಿಯಲ್ಲಿ ತೊಡಗಿರುವ ಬಸವರಾಜ ಖಾನಾಪುರ, ವಿ.ಜಿ. ಕುಲಕರ್ಣಿ, ಸುಭಾಷ್ ಚಿಂಚೋಳಿ ಹೇಳುತ್ತಾರೆ.

*******************

ಕೊರೊನಾ ಸಂದರ್ಭದಲ್ಲಿ ಬಹಳಷ್ಟು ಜನರು ಮನೆಗಳಿಗೆ ಪತ್ರಿಕೆ ಬೇಡ ಎಂದರು. ಕೆಲವರು ತಿಂಗಳ ಬಿಲ್ ನೀಡಲಿಲ್ಲ. ಆದರೂ, 20 ವರ್ಷಗಳಿಂದ ಮಾಡಿಕೊಂಡ ಬಂದ ವೃತ್ತಿ ಎಂಬ ಕಾರಣಕ್ಕೆ ಮುಂದುವರಿಸಿದ್ದೇವೆ.

ಲಾಕ್‌ಡೌನ್‌ ತೆಗೆದ ಬಳಿಕ ಪರಿಸ್ಥಿತಿ ಸುಧಾರಿಸಿದೆ. ರಾಜ್ಯ ಸರ್ಕಾರ ಪತ್ರಿಕಾ ವಿತರಕರ ನೆರವಿಗೆ ಬರಬೇಕು. ಅಗತ್ಯಬಿದ್ದರೆ ಒಂದಷ್ಟು ವಂತಿಗೆ ಕೊಡಲು ನಾವು ಸಿದ್ಧರಿದ್ದೇವೆ.

-ಬಸವರಾಜ ಖಾನಾಪುರ

****

ಕೊರೊನಾ ಲಾಕ್‌ಡೌನ್‌ ಬಹಳ ದೀರ್ಘ ಅವಧಿಗೆ ಹೆಚ್ಚಿಸಿದ್ದರಿಂದ ಪತ್ರಿಕಾ ವೃತ್ತಿಯನ್ನೇ ನಂಬಿಕೊಂಡವರಿಗೆ ಬಹಳಷ್ಟು ಸಮಸ್ಯೆಯಾಯಿತು.

ಬೇರೆ ಕೆಲಸ ಮಾಡಬೇಕೆಂದರೆ ಇದು ಬಿಟ್ಟು ಬೇರೆ ಯಾವುದೂ ಗೊತ್ತಿಲ್ಲ. ಆದ್ದರಿಂದ ಆರ್ಥಿಕ ನಷ್ಟವನ್ನು ತುಂಬಿಕೊಡಲು ರಾಜ್ಯ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಬೇಕು.

-ವಿ.ಜಿ. ಕುಲಕರ್ಣಿ

1989ರಿಂದ ಪತ್ರಿಕಾ ವಿತರಕನಾಗಿ ಕೆಲಸ ಮಾಡುತ್ತಿದ್ದೇವೆ. ಆಗಿನಿಂದಲೂ ಹಲವು ಸರ್ಕಾರಗಳ ಬಳಿ ಏನಾದರೂ ನೆರವು ನೀಡಿ ಎಂದು ಮನವಿ ಸಲ್ಲಿಸಿದ್ದೇ ಬಂತು. ಆದರೆ, ಯಾವುದೂ ಈಡೇರಿಲ್ಲ.

ಲಾಕ್‌ಡೌನ್ ಸಂದರ್ಭದಲ್ಲಿ ಪತ್ರಿಕೆ ಹಾಕಲು ಪೊಲೀಸರು ಸಾಕಷ್ಟು ಅಡ್ಡಿ ಮಾಡಿದರು. ಲಾಠಿಯಿಂದ ನಮ್ಮ ಹುಡುಗರಿಗೆ ಥಳಿಸಿದರು. ಆದರೆ, ಪತ್ರಿಕೆ ಅತ್ಯವಶ್ಯಕ ವಸ್ತುಗಳ ಪಟ್ಟಿಯಲ್ಲಿದ್ದುದರಿಂದ ಇವುಗಳನ್ನು ವಿತರಿಸಲು ಅಗತ್ಯವಾದ ಗುರುತಿನ ಚೀಟಿಗಳನ್ನು ಕೊಡಲೂ ಹಲವು ದಿನಗಳನ್ನು ತೆಗೆದುಕೊಂಡರು.

ಲಾಕ್‌ಡೌನ್ ಸಂದರ್ಭದಲ್ಲಿ ಅಂಗಡಿಗಳು ತೆರೆಯದೇ ಇದ್ದುದರಿಂದ ಹೆಚ್ಚು ಪತ್ರಿಕೆಗಳಿಗೆ ಬೇಡಿಕೆ ಇರಲಿಲ್ಲ. ಆದರೂ, ಪತ್ರಿಕಾ ವಿತರಕರನ್ನು ಕೆಲಸದಿಂದ ತೆಗೆಯಲಿಲ್ಲ. ಅವರ ಪಗಾರವನ್ನೂ ಕಡಿಮೆ ಮಾಡಲಿಲ್ಲ.

-ರಾಜು ನಿಂಗಾರೆಡ್ಡಿ

ಪತ್ರಿಕಾ ಸೇವೆಯಲ್ಲಿ ತೊಡಗಿರುವ ನಮಗೆ ಹಲವು ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರು ಗುರುತಿಸಿ ಆಹಾರ ಕಿಟ್‌ಗಳನ್ನು ನೀಡಿದ್ದರಿಂದ ಎಷ್ಟೋ ಸಮಾಧಾನವಾಯಿತು. ಕಷ್ಟಕಾಲದಲ್ಲಿ ನೆರವಿಗೆ ಬಂದ ಎಲ್ಲರಿಗೂ ವಂದನೆಗಳು.

-ಸುಭಾಷ್ ಚಿಂಚೋಳಿ

ಪತ್ರಿಕೆಗಳ ಮಾರಾಟ ಲಾಕ್‌ಡೌನ್‌ ಸಂದರ್ಭದಲ್ಲಿ ಸಾಕಷ್ಟು ಕುಸಿದಿತ್ತು. ಈಗ ಮತ್ತೆ ಬೇಡಿಕೆ ಬರುತ್ತಿದೆ. ಆ ಸಂದರ್ಭದಲ್ಲಿ ಬೇರೆ ಉದ್ಯೋಗವೂ ಇರಲಿಲ್ಲ. ಹೀಗಾಗಿ, ಸರ್ಕಾರ ಆರ್ಥಿಕ ನೆರವಿಗೆ ಬರಬೇಕು.

-ಪ್ರವೀಣ್ ಕಳ್ಳಿಮನಿ

ಕೋವಿಡ್‌ನಿಂದಾಗಿ ಪತ್ರಿಕೆ ಹಾಕುವವರನ್ನು ಹತ್ತಿರ ಸೇರಿಸಲು ಜನರು ಹಿಂಜರಿಯುತ್ತಿದ್ದರು. ಅಲ್ಲದೇ, ಸೀಲ್‌ಡೌನ್‌ ಮಾಡಿದ್ದರಿಂದ ಬಡಾವಣೆಯನ್ನು ಸುತ್ತು ಹಾಕಿಕೊಂಡು ಹೋಗಿ ಪತ್ರಿಕೆ ಹಾಕಿದೆ. ಸಾಕಷ್ಟು ಪೆಟ್ರೋಲ್ ಖರ್ಚಾಗುತ್ತಿತ್ತು. ಆದರೂ, ಖುಷಿಯಿಂದ ಕೆಲಸ ಮಾಡಿದೆ.

-ಮಲ್ಲಿಕಾರ್ಜುನ ಮಾಲಿಪಾಟೀಲ

ಬೇಡಿಕೆಗಳೇನು?

ಜೀವ ವಿಮೆ ಸೌಲಭ್ಯವನ್ನು ಕಲ್ಪಿಸಬೇಕು

ಆರೋಗ್ಯ ಕಾರ್ಡ್‌ಗಳನ್ನು ನೀಡಬೇಕು

ಸವಿತಾ ಸಮಾಜ, ಮಡಿವಾಳರು, ಆಟೊ, ಟ್ಯಾಕ್ಸಿ ಚಾಲಕರಿಗೆ ನೀಡಿದಂತೆ ₹ 5 ಸಾವಿರ ಪರಿಹಾರ ನೀಡಬೇಕು

ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದ ₹ 2 ಕೋಟಿ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು

ಪತ್ರಿಕಾ ವಿತರಕರು ಮರಣಕ್ಕೀಡಾದ ಸಂದರ್ಭದಲ್ಲಿ ಕನಿಷ್ಠ ₹ 50 ಸಾವಿರ ಪರಿಹಾರ ನೀಡಬೇಕು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು