ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ಸುದ್ದಿ ಸ್ವಾರಸ್ಯ ಹೊತ್ತು ತರುವ ಸೇನಾನಿಗಳು

Published 4 ಸೆಪ್ಟೆಂಬರ್ 2024, 4:58 IST
Last Updated 4 ಸೆಪ್ಟೆಂಬರ್ 2024, 4:58 IST
ಅಕ್ಷರ ಗಾತ್ರ

ಕಲಬುರಗಿ: ಎಲ್ಲರೂ ಸೊಂಪಾದ ನಿದ್ರೆಗೆ ಜಾರಿದ ಸಮಯದಲ್ಲಿ ನಿದ್ರೆಯನ್ನು ತ್ಯಜಿಸಿ, ನಿತ್ಯ ಮುಂಜಾನೆ ಚಳಿ, ಮಳೆ, ಗಾಳಿ ಎನ್ನದೆ ಶ್ರದ್ಧೆ ಮತ್ತು ನಿಷ್ಠೆಯಿಂದ ಓದುಗರ ಮನೆ– ಮನೆಗಳಿಗೆ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸೇರಿದಂತೆ ಇತರೆ ಪತ್ರಿಕೆಗಳನ್ನು ತಲುಪಿಸುವ ಪತ್ರಿಕಾ ಏಜೆಂಟರು ಹಾಗೂ ವಿತರಕರ ಕಾರ್ಯ ಎಲ್ಲ ದಿನ ಪತ್ರಿಕೆಗಳಿಗೆ ಜೀವಾಳ.

ಸೂರ್ಯನ ಕಿರಣಗಳು ಭೂಮಿಗೆ ಮುತ್ತಿಕ್ಕುವ ಮೊದಲೇ ಪತ್ರಿಕಾ ವಿತರಕರು ಕಾಯಕಕ್ಕೆ ಹಾಜರಾಗುತ್ತಾರೆ. ಮುದ್ರಣಾಲಯದಲ್ಲಿ ಸಿದ್ಧಗೊಂಡು ಪತ್ರಿಕೆಗಳ ಬಂಡಲ್‌ಗಳನ್ನು ಮುಂಜಾನೆ 3, 4 ಗಂಟೆಗೆ ಬಸ್ ನಿಲ್ದಾಣ, ರೈಲು ನಿಲ್ದಾಣ, ಅಂಗಡಿ–ಮುಂಗಟ್ಟುಗಳು, ಪ್ರಮುಖ ವೃತ್ತಗಳ ಬೀದಿ ದೀಪಗಳ ಕೆಳಗೆ ಇಳಿಸಿಕೊಳ್ಳುತ್ತಾರೆ.

ಹಂಚಿಕೆ ಮಾಡುವ ಮನೆ, ಕಚೇರಿ, ಸಂಸ್ಥೆಗಳ ವಿಳಾಸದ ಅನುಸಾರ ಪತ್ರಿಕೆಗಳನ್ನು ಒಪ್ಪವಾಗಿ ಜೋಡಿಸಿಕೊಂಡು ಸೈಕಲ್, ಬೈಕ್‌ಗಳ ಮೇಲೆ ಇರಿಸಿಕೊಳ್ಳುತ್ತಾರೆ. ಓದುಗರು ನಿದ್ರೆಯಿಂದ ಮೇಲೇಳುವ ಮೊದಲೇ ಅವರ ಮನೆ ಬಾಗಿಲಿಗೆ ‘ರಪ್’ ಎಂಬ ಶಬ್ದದೊಂದಿಗೆ ಪತ್ರಿಕೆ ಹಾಕಿ ಸೇನಾನಿಗಳಂತೆ ಅಚ್ಚುಕಟ್ಟಾಗಿ ತಮ್ಮ ವಿತರಣಾ ಕೆಲಸವನ್ನು ಪೂರ್ಣಗೊಳಿಸುತ್ತಾರೆ.

ಮುಂಜಾನೆಯ ಧಾವಂತದಲ್ಲಿ ಪತ್ರಿಕಾ ವಿತರಕರು ನಡೆಸುವ ಒಂದೆರಡು ಗಂಟೆಗಳ ಕೆಲಸ ಓದುಗರ ಜ್ಞಾನವೃದ್ಧಿಗೆ ಭೂಮಿಕೆಯಾಗುತ್ತಿದೆ. ನಿತ್ಯದ ನೈಜ ಸಂಗತಿಗಳನ್ನು ಹೊತ್ತು ಮನೆ– ಮನೆಗೆ ತಲುಪಿಸಿ ಓದುಗರು ಹಾಗೂ ದಿನ ಪತ್ರಿಕೆಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಪತ್ರಿಕಾ ವಿತರಣೆ ಅನೇಕ ಯುವಕರಿಗೆ ಬದುಕಿನ ಪಾಠವನ್ನು ಕಲಿಸಿದೆ. ಹಿರಿಯರಿಗೆ ಕುಟುಂಬ ನಿರ್ವಹಣೆಗೆ ನೆರವಾಗಿದೆ. ಪತ್ರಿಕೆಯನ್ನು ಹಂಚುತ್ತಲೇ ಶಿಕ್ಷಣ ಪಡೆದು, ನಗರದಲ್ಲಿನ ಸಣ್ಣ–ಪುಟ್ಟ ಖರ್ಚುಗಳನ್ನು ನಿಭಾಯಿಸಿಕೊಂಡು ಉನ್ನತ ಹುದ್ದೆಗಳಿಗೆ ಏರಿದವರು ಸಾಕಷ್ಟು ಜನರಿದ್ದಾರೆ.

ಸುದ್ದಿಯ ಸ್ವಾರಸ್ಯವನ್ನು ಹೊತ್ತು ಸೈಕಲ್‌ಗಳ ಮೇಲೆ ಹೊರಟ ವಿತರಕರಿಗೆ ಹತ್ತಾರು ಸಮಸ್ಯೆಗಳು ಎದುರಾಗುತ್ತವೆ. ಬಹುತೇಕ ಕಡೆ ಬೀದಿ ನಾಯಿಗಳು ಎದುರಾಗುತ್ತವೆ. ಅಟ್ಟಿಸಿಕೊಂಡು ಬಂದಾಗ ಧಾವಂತದಲ್ಲಿ ಬಿದ್ದು ಗಾಯಗೊಂಡ, ಕಚ್ಚಿಸಿಕೊಂಡ ನಿದರ್ಶನಗಳೂ ಇವೆ. ಮಳೆಯಲ್ಲಿ ತೊಯ್ದು, ಸಮಯಕ್ಕೆ ಸರಿಯಾಗಿ ಪತ್ರಿಕೆ ಕೈಗೆ ಸಿಗದೆ ಇದ್ದಾಗ ಓದುಗರ ಕೋಪಕ್ಕೆ ತುತ್ತಾಗುವುದು ಅವರಿಗೆ ಸಹಜವಾಗಿದೆ.

ಯುಗಾದಿ, ಗಣೇಶ ಚತುರ್ಥಿ, ಆಯುಧ ಪೂಜೆ ಮತ್ತು ದೀಪಾವಳಿ ಹಬ್ಬಗಳನ್ನು ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲಿ ವೃತ್ತಿಪರತೆಯ ಜತೆಗೆ ಕಾರ್ಯತತ್ಪರತೆ ತೋರುವ ಪತ್ರಿಕಾ ವಿತರಕರಿಗೆ ಸೆಪ್ಟೆಂಬರ್ 4ರ ‘ವಿಶ್ವ ದಿನಪತ್ರಿಕಾ ವಿತರಕರ ದಿನಾಚರಣೆ’ಯಂದು ಧನ್ಯವಾದ ಸಲ್ಲಿಸೋಣ.

ಪತ್ರಿಕಾ ವಿತರಕರು ಏನಂತಾರೆ?
28 ವರ್ಷಗಳಿಂದ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ವಿತರಕ ಆಗಿದ್ದುಕೊಂಡೇ ಎರಡ್ಮೂರು ವ್ಯವಹಾರ ಮಾಡುತ್ತಿದ್ದೇನೆ. ಸುಮಾರು 30 ಜನರಿಗೆ ಕೆಲಸ ಕೊಟ್ಟಿದ್ದರೂ ಬದುಕಿಗೆ ದಾರಿ ತೋರಿದ ಪತ್ರಿಕಾ ವಿತರಣೆ ಬಿಟ್ಟಿಲ್ಲ –
ಬಸವರಾಜ ಖಾನಾಪುರ
ಪತ್ರಿಕೆ ವಿತರಕ 25 ವರ್ಷಗಳಿಂದ ಮಳೆ ಚಳಿ ಎನ್ನದೆ ಪತ್ರಿಕೆ ವಿತರಣೆ ಮಾಡುತ್ತಿದ್ದೇನೆ. ಪತ್ರಿಕಾ ವಿತರಣೆಯಿಂದ ಬಂದ ಹಣದಲ್ಲೇ ಕುಟುಂಬಕ್ಕೆ ನಿತ್ಯ ಬೇಕಾದ ಸಾಮಗ್ರಿಗಳಿಗೆ ಖರ್ಚು ಮಾಡುತ್ತಿದ್ದು ಜೀವನಕ್ಕೆ ಆಧಾರವಾಗಿದೆ
– ಶರಣಬಸಪ್ಪ ಕಡಗಂಚಿ ಪತ್ರಿಕೆ ವಿತರಕ ಶಹಾಬಾದ್
ಪತ್ರಿಕಾ ವಿತರಣೆಯ ವೃತ್ತಿ ತೃಪ್ತಿತಂದುಕೊಟ್ಟಿದೆ. 20 ವರ್ಷಗಳಿಂದ ನಿರಂತರವಾಗಿ ಪತ್ರಿಕೆ ಓದುತ್ತಿದ್ದವರು ಏಕಾಏಕಿ ಹಿಮ್ಮುಖ ಆಗುತ್ತಿರುವುದು ನೋಡಿದಾಗ ಬೇಸರ ಆಗುತ್ತದೆ –ಪ್ರವೀಣ್‌ಕುಮಾರ ವಿ.ಕೆ. ಪತ್ರಿಕೆ ವಿತರಕ ಕಲಬುರಗಿ ನಗರ ಪಟ್ಟಣಗಳ ಜತೆಗೆ ಗ್ರಾಮೀಣ ಭಾಗದಲ್ಲಿ ನಡೆಯುವ ವಿದ್ಯಮಾನಗಳಿಗೂ ಪತ್ರಿಕೆಯಲ್ಲಿ ಜಾಗ ಸಿಕ್ಕಾಗ ಇನ್ನಷ್ಟು ಓದುಗರನ್ನು ತಲುಪಲು ಸಾಧ್ಯವಾಗುತ್ತದೆ. ಹಳ್ಳಿಯಲ್ಲಿನ ಓದುಗರು ತಮ್ಮ ಊರಿನ ಸುತ್ತಲ್ಲಿನ ಕುಂದು–ಕೊರತೆ ಇತರೆ ವಿದ್ಯಮಾನಗಳು ತಿಳಿಯಲು ಬಯಸುತ್ತಿದ್ದಾರೆ
–ಶಿವಲಿಂಗಯ್ಯ ಸ್ವಾಮಿ ಪತ್ರಿಕೆ ವಿತರಕ ಚಿಂಚೋಳಿ
ಹೂವಿನ ವ್ಯಾಪಾರ ಮಾಡುತ್ತಿದ್ದಾಗ ಪತ್ರಿಕೆಗಳತ್ತ ನಿಗಾ ಇಡುವಂತೆ ಹೇಳುತ್ತಿದ್ದರು. ಒಂದು ದಿನ ಜಗಳವಾಗಿದ್ದರಿಂದ ನಾನೇ ಪತ್ರಿಕೆಗಳ ವಿತರಕನಾದೆ. ಇವತ್ತು ಹೂವಿನ ವ್ಯಾಪಾರದ ಜತೆಗೆ ಪತ್ರಿಕಾ ವಿತರಕನಾಗಿದ್ದು ಸಂತಸವಾಗಿದೆ
–ಕುಪೇಂದ್ರ ಜಮಾದಾರ್ ಪತ್ರಿಕಾ ವಿತರಕ ಮಹಾಗಾಂವ್ ಕ್ರಾಸ್
ಪತ್ರಿಕಾ ವಿತರಕರಿಗೆ ಸಬ್ಸಿಡಿ ದರದಲ್ಲಿ ಎಲೆಕ್ಟ್ರಿಕ್‌ ಬೈಕ್‌ಗಳನ್ನು ಕೊಟ್ಟರೆ 100 ಪೇಪರ್ ಬದಲಿಗೆ 200 ಪೇಪರ್‌ಗಳು ಹಾಕಬಹುದು. ಬೀದಿ ಬದಿ ಸಾಲದ ಮೊತ್ತವನ್ನು ₹25 ಸಾವಿರಕ್ಕೆ ಹೆಚ್ಚಿಸಿದರೆ ಅನುಕೂಲ ಆಗುತ್ತದೆ
–ಫಾರೂಕ್ ಪತ್ರಿಕೆ ವಿತರಕ ಕಲಬುರಗಿ
ರಾಜ್ಯ ಸರ್ಕಾರವು 60 ವರ್ಷ ಮೇಲ್ಪಟ್ಟ ಪತ್ರಿಕಾ ವಿತರಿಕರಿಗೆ ಪಿಂಚಣಿ ಸೌಲಭ್ಯ ನೀಡುವುದರ ಜೊತೆಗೆ ಸಬ್ಸಿಡಿ ದರದಲ್ಲಿ ಎಲೆಕ್ಟ್ರಿಕ್‌ ಬೈಕ್‌ಗಳನ್ನು ನೀಡಬೇಕು
–ರಮಾಕಾಂತ್ ಜಿಡಗೇಕರ್ ಪತ್ರಿಕಾ ವಿತರಕರ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT