ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಇಂದಿನಿಂದ ರಾತ್ರಿ ಕರ್ಫ್ಯೂ ಜಾರಿ

ಹೊಸ ವರ್ಷಾಚರಣೆ ನೆಪದಲ್ಲಿ ಗುಂಪುಗೂಡಲು ಇಲ್ಲ ಅವಕಾಶ
Last Updated 28 ಡಿಸೆಂಬರ್ 2021, 4:11 IST
ಅಕ್ಷರ ಗಾತ್ರ

ಕಲಬುರಗಿ: ಕೋವಿಡ್‌–19ನ ರೂಪಾಂತರಿತ ವೈರಾಣು ಓಮೈಕ್ರಾನ್ ಹರಡಿಕೊಳ್ಳುವ ಭೀತಿಯಿಂದ ಜನಸಂದಣಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ ಇದೇ 28ರಿಂದ ಜನವರಿ 7ರವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಿದೆ.

ಇದರಿಂದ ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಅತ್ಯವಶ್ಯಕ ಸೇವೆಗಳನ್ನು ಹೊರತುಪಡಿಸಿ ಎಲ್ಲ ವಹಿವಾಟುಗಳನ್ನು ರಾತ್ರಿ 10ಕ್ಕೆ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾನಿರ್ದೇಶನ ನೀಡಿದ್ದಾರೆ. ಪೊಲೀಸ್ ಸಿಬ್ಬಂದಿಯನ್ನು ಇದಕ್ಕಾಗಿ ಸನ್ನದ್ಧಗೊಳಿಸಲಾಗಿದ್ದು, ಅನವಶ್ಯಕವಾಗಿ ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ಹೊರಗೆ ಸಂಚರಿಸುವವರ ಮೇಲೆ ನಿಗಾ ಇರಿಸುವಂತೆ ಸೂಚಿಸಲಾಗಿದೆ.

ಕರ್ಫ್ಯೂ ಪ್ರಯುಕ್ತ ಕಲಬುರಗಿ ಪೊಲೀಸ್ ಕಮಿಷನರ್‌ ಡಾ. ವೈ.ಎಸ್. ರವಿಕುಮಾರ್ ಅವರು ಸೋಮವಾರ ಸಂಜೆ ಡಿಸಿಪಿಗಳು, ಎಸಿಪಿಗಳು ಹಾಗೂ ವಿವಿಧ ಠಾಣೆಗಳ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳ ಸಭೆ ನಡೆಸಿ ರಾತ್ರಿ ಕರ್ಫ್ಯೂ ವೇಳೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು.

ಕಮಿಷನರೇಟ್ ವ್ಯಾಪ‍್ತಿಯಲ್ಲಿರುವ 1100ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿಗೆ ರಾತ್ರಿ ಕರ್ಫ್ಯೂ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಲಾಗಿದೆ ಎಂದು ಡಾ.ರವಿಕುಮಾರ್ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ಕರ್ಫ್ಯೂ ಸಂದರ್ಭದಲ್ಲಿ ಜನರ ಅನಗತ್ಯ ಸಂಚಾರವನ್ನು ನಿರ್ಬಂಧಿಸುವಂತೆ ಸೂಚನೆ ನೀಡಿದ್ದಾರೆ.

ಹೊಸ ವರ್ಷಾಚರಣೆಗೆ ನಿರ್ಬಂಧ: ಡಿಸೆಂಬರ್ 31ರಂದು ರಾತ್ರಿ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ. ರಾತ್ರಿ 10 ಗಂಟೆಯ ಒಳಗೇ ಹೋಟೆಲ್, ಬಾರ್ ಅಂಡ್ ರೆಸ್ಟೊರೆಂಟ್‌ಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ. ರಾತ್ರಿ ಗಸ್ತನ್ನು ಹೆಚ್ಚಿಸುವಂತೆ ಪೊಲೀಸರಿಗೆ ಕಮಿಷನರ್‌ ಹಾಗೂ ಎಸ್ಪಿ ಅವರು ತಿಳಿಸಿದ್ದಾರೆ.

ಹೋಟೆಲ್, ಬಾರ್‌ ಅಂಡ್‌ ರೆಸ್ಟೊರೆಂಟ್‌ನ ಒಟ್ಟು ಸಾಮರ್ಥ್ಯದ ಅರ್ಧದಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ನೀಡುವಂತೆ ಹೊಟೆಲ್, ರೆಸ್ಟೊರೆಂಟ್ ಮಾಲೀಕರಿಗೆ ತಿಳಿಸಲಾಗಿದೆ. ಕರ್ಫ್ಯೂ ಅವಧಿಯಲ್ಲಿ ಕಲ್ಯಾಣ ಮಂಟಪದಲ್ಲಿ ಗರಿಷ್ಠ 300 ಜನರಿಗೆ ಅವಕಾಶ ನೀಡಲಾಗುತ್ತದೆ.

ಆಸ್ಪತ್ರೆಗೆ ಬರುವ ರೋಗಿಗಳು, ಅವರ ಸಹಾಯಕರ ಸಂಚಾರಕ್ಕೆ ಅವಕಾಶವಿದೆ. ಟೆಲಿಕಾಂ, ಇಂಟರ್ನೆಟ್ ಸೇವೆ ಒದಗಿಸುವ ಕಂಪನಿಗಳು, ವಿವಿಧ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ನೌಕರರು ರಾತ್ರಿ ವೇಳೆ ಸಂಚರಿಸುವ ಸಂದರ್ಭದಲ್ಲಿ ಗುರುತಿನ ಚೀಟಿಯನ್ನು ಇಟ್ಟುಕೊಳ್ಳುವಂತೆ,ರಾತ್ರಿ ವೇಳೆ ಬಸ್‌, ರೈಲಿನ ಮೂಲಕ ನಗರಕ್ಕೆ ಬರುವವರು ತಮ್ಮ ಟಿಕೆಟ್ ತೋರಿಸುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT