ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಸಾನದತ್ತ ನಿಜಾಮರ ಕಾಲದ ಶಾಲೆ

1920ರಲ್ಲಿ ನಿರ್ಮಿಸಲಾಗಿರುವ ಕಟ್ಟಡ 1987ರ ನಂತರ ಕನ್ಯಾಶಾಲೆಯಾಗಿ ಮಾರ್ಪಾಡು
Last Updated 31 ಅಕ್ಟೋಬರ್ 2022, 6:15 IST
ಅಕ್ಷರ ಗಾತ್ರ

ವಾಡಿ: ನಿಜಾಮರ ಆಡಳಿತ ಕಾಲದಲ್ಲಿ ಆರಂಭಗೊಂಡ ಪಟ್ಟಣದ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ ಈಗ ಆಡಳಿತಶಾಹಿಯ ನಿರ್ಲಕ್ಷ್ಯದಿಂದ ಅವಸಾನದ ಅಂಚಿಗೆ ತಲುಪಿದೆ.

ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಬರೆದ ಶಾಲೆ, ಶಿಕ್ಷಣ ಇಲಾಖೆಯ ನಿರ್ಲಕ್ಷದಿಂದ ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ. ಹಲವರಿಗೆ ಸುಭದ್ರ ಭವಿಷ್ಯ ಬರೆದ ಈ ಶಾಲೆಯಲ್ಲಿ ಈಗ ಮಕ್ಕಳ ಜೀವಕ್ಕೆ ಭದ್ರತೆ ಇಲ್ಲದಂತಾಗಿದೆ. ಕಟ್ಟಡ ತೀರಾ ಹಳೆಯದಾಗಿದ್ದು ಯಾವುದೇ ಕ್ಷಣದಲ್ಲಿ ಧರೆಗುರುಳಬಹುದು ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯ ನಂತರ ಹಲವು ದಶಕಗಳ ಕಾಲ ಪಟ್ಟಣ ಹಾಗೂ ಸುತ್ತಲಿನ ಪ್ರದೇಶಗಳ ಮಕ್ಕಳಿಗೆ ಶಿಕ್ಷಣ ನೀಡಿದ ಏಕೈಕ ಪ್ರಾಥಮಿಕ ಶಾಲೆ ಇದಾಗಿದೆ. ನಿಜಾಮರು ತಂಗಲು ನಿರ್ಮಿಸಿದ್ದ ಪ್ರವಾಸಿ ಮಂದಿರವನ್ನು ನಂತರ ಶಾಲೆಯನ್ನಾಗಿ ಮಾರ್ಪಡಿಸಲಾಗಿದೆ. ಶಾಲೆಯ ಒಟ್ಟು 7 ಕೋಣೆಗಳು ಸಂಪೂರ್ಣ ಹಾಳಾಗಿದ್ದು, ಮಳೆ ಬಂದರೆ ಇಡೀ ಕಟ್ಟಡ ತೊಯ್ದು ತೊಪ್ಪೆಯಾಗುತ್ತದೆ. ಮಳೆ ಬಂದರೆ ಕೋಣೆಯೊಳಗೆ ಅರ್ಧ ಅಡಿಗೂ ಅಧಿಕ ನೀರು ನಿಲ್ಲುತ್ತಿದ್ದು, ಶಾಲೆಗೆ ರಜೆ ನೀಡಲಾಗುತ್ತದೆ. ಮಳೆ ನಿಂತ ಬಳಿಕವೂ ತಿಂಗಳುಗಟ್ಟಲೆ ಹನಿ ನೀರು ತೊಟ್ಟಿಕ್ಕಿ ಮಕ್ಕಳ ಅಭ್ಯಾಸಕ್ಕೆ ಇಲ್ಲಿ ತೀವ್ರ ಅಡಚಣೆ ಉಂಟಾಗುತ್ತದೆ.
1920ರಲ್ಲಿ ಈ ಕಟ್ಟಡ ನಿರ್ಮಿಸಲಾಗಿದ್ದು ನಂತರ ಇದನ್ನು ಶಾಲೆಗೆ ಬಳಸಿಕೊಳ್ಳಲಾಗುತ್ತಿದೆ. ನಿಜಾಮರ ಕಾಲದಲ್ಲಿ ಶಾಲೆ ಆರಂಭಗೊಂಡಿದೆ. ಉರ್ದು ಮಾಧ್ಯಮದಲ್ಲಿ ಆರಂಭಗೊಂಡ ಶಾಲೆ ನಂತರ ಕನ್ನಡ ಮಾಧ್ಯಮವಾಯಿತು ಎನ್ನುತ್ತಾರೆ ಹಿರಿಯರಾದ ಟೋಪಣ್ಣ ಕೋಮಟೆ.

ಮೊದಲು ಸಹ ಶಿಕ್ಷಣ ಇದ್ದ ಶಾಲೆ 1987ರ ನಂತರ ಇದು ಕನ್ಯಾಶಾಲೆಯಾಗಿ ಬದಲಾಯಿತು ಎನ್ನುತ್ತಾರೆ ಮುಖ್ಯಶಿಕ್ಷಕಿ ಲಲಿತಾಬಾಯಿ ಏಸುಮಿತ್ರ.

ಪ್ರಸಕ್ತ ಇಲ್ಲಿ 1 ರಿಂದ 7ನೇ ತರಗತಿವರೆಗೆ ಇದ್ದು 101 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಗಾಳಿ ಬೆಳಕು ಇಲ್ಲದ ಬರೀ ಧೂಳು ತುಂಬಿರುವ ಚಿಕ್ಕ ಚಿಕ್ಕ ಕೋಣೆಯೊಳಗೆ ಕುಳಿತು ಅಭ್ಯಾಸ ಮಾಡುವುದು ಇಲ್ಲಿನ ಮಕ್ಕಳಿಗೆ ಅನಿವಾರ್ಯವಾಗಿದೆ. ದೊಡ್ಡ ಕೋಣೆಗಳನ್ನು ವಿಭಾಗಿಸಿ ಚಿಕ್ಕ ಕೋಣೆಗಳನ್ನಾಗಿ ಮಾಡಲಾಗಿದ್ದು, ಒಂದು ತರಗತಿಯ ಪಾಠ ಮತ್ತೊಂದು ತರಗತಿಗೆ ಅಡಚಣೆ ಉಂಟು ಮಾಡುತ್ತಿದೆ. ಆಟದ ಮೈದಾನದ ಕೊರತೆ ಇದ್ದು, ಮಕ್ಕಳು ಕ್ರೀಡಾ ಚಟುವಟಿಕೆಗಳಿಂದ ಸಂಪೂರ್ಣ ವಂಚಿತರಾಗಿದ್ದಾರೆ. ದೈನಂದಿನ ಪ್ರಾರ್ಥನೆ ಮಾಡಲು ಸಹ ಸ್ಥಳದ ಕೊರತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT