ಸೋಮವಾರ, ಮಾರ್ಚ್ 8, 2021
22 °C
ಜಿಲ್ಲೆಗೆ ಮರಳಿದ ವಲಸಿಗರಿಗೆ ತಪ್ಪದ ಪರದಾಟ

ಕಲಬುರ್ಗಿ: ಅಲ್ಲಿಂದ ಬಂದರೂ ಇಲ್ಲಿಂದ ಬಸ್ಸಿಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೂಲಿ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ತೆರಳಿದ್ದ 60ಕ್ಕೂ ಅಧಿಕ ಕಾರ್ಮಿಕರು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದ್ದ ವಿಶೇಷ ಬಸ್‌ ಮೂಲಕ ಭಾನುವಾರ ಬೆಳಿಗ್ಗೆ ಕಲಬುರ್ಗಿಗೆ ಬಂದರಾದರೂ ಇಲ್ಲಿಂದ ಅವರ ಊರುಗಳಿಗೆ ಹೋಗಲು ಯಾವುದೇ ಬಸ್‌ ವ್ಯವಸ್ಥೆ ಇಲ್ಲದ್ದರಿಂದ ಪರದಾಡಬೇಕಾಯಿತು.

ಬೆಳಿಗ್ಗೆ 8 ಗಂಟೆ ಸುಮಾರಿಗೆ ನಗರದ ಕೇಂದ್ರ ಬಸ್‌ ನಿಲ್ದಾಣಕ್ಕೆ ಬಂದ ಕೆಎಸ್‌ಆರ್‌ಟಿಸಿಯ ಒಂದೊಂದು ಬಸ್‌ನಲ್ಲಿ ತಲಾ 30 ಪ್ರಯಾಣಿಕರು ಇದ್ದರು. ಅವರು ಕೆಳಗಿಳಿಯುತ್ತಿದ್ದಂತೆಯೇ ಪೊಲೀಸ್ ಸಿಬ್ಬಂದಿ, ‘ಎಲ್ಲಿಂದ ಬಂದರು,
ಎಲ್ಲಿಗೆ ಹೊರಟಿದ್ದಾರೆ’ ಎಂಬುದು ಸೇರಿದಂತೆ ಅಗತ್ಯ ವಿವರಗಳನ್ನು ಬರೆದುಕೊಂಡರು. ಊರಿಗೆ ಹೋಗಲು ಬಸ್‌ ವ್ಯವಸ್ಥೆ ಇದೆಯೇ ಎಂಬ ಹಲವು ಪ್ರಯಾಣಿಕರ ಪ್ರಶ್ನೆಗಳಿಗೆ ಇಲ್ಲಿಂದ ಯಾವುದೇ ಗಾಡಿ ಇಲ್ಲ ಎನ್ನುತ್ತಿದ್ದಂತೆಯೇ ಚಿಂತಾಕ್ರಾಂತರಾದರು.

ಸೇಡಂ ತಾಲ್ಲೂಕಿನ ತಮ್ಮೂರು ಮಲಕೂಡ ಗ್ರಾಮಕ್ಕೆ ತೆರಳಬೇಕಿದ್ದ ಕಾರ್ಮಿಕ ಭೀಮಪ್ಪ, ‘ದೂರದ ಬೆಂಗಳೂರಿಂದ ಕರೆದುಕೊಂಡ ಬಂದ ಮೇಲೆ ಇಲ್ಲಿಯೂ ಗಾಡಿ ವ್ಯವಸ್ಥೆ ಇರುತ್ತದೆ ಅಂದುಕೊಂಡಿದ್ದಿವಿ. ಇಲ್ಲಿ ಕೇಳಿದರೆ ಇಲ್ಲ ಅನ್ನುತ್ತಿದ್ದಾರೆ. ಏನು ಮಾಡುವುದು ಗೊತ್ತಾಗುತ್ತಿಲ್ಲ. ಸೇಡಂ ರಸ್ತೆ‌ ಕಡೆ ಹೋಗ್ತೀನಿ. ಅಲ್ಲಿ ಯಾವುದಾದರೂ ಗಾಡಿ ಸಿಕ್ಕರೆ ಹೋಗ್ತೀನಿ’ ಎಂದರು.

ಅದೇ ಬಸ್ಸಿನಲ್ಲಿ ಇಬ್ಬರು ಮಕ್ಕಳೊಂದಿಗೆ ಬಂದ ಮಹಿಳೆಯೊಬ್ಬರು ನಗರದಿಂದ 90 ಕಿ.ಮೀ. ಇರುವ ಯಡ್ರಾಮಿ ಪಟ್ಟಣಕ್ಕೆ ಹೊರಟಿದ್ದರು. ಅವರಿಗೂ ಹೇಗೆ ಹೋಗಬೇಕು ಎಂದು ತಿಳಿಯದೇ ಚಿಂತಾಕ್ರಾಂತರಾಗಿದ್ದರು.

ನಗರಕ್ಕೆ ಸಮೀಪದ ಹಳ್ಳಿಗಳಲ್ಲಿ ಇದ್ದವರು ತಮ್ಮ ಸಂಬಂಧಿಕರಿಗೆ ಮಾಹಿತಿ ನೀಡಿ ವಾಹನಗಳನ್ನು ತರಿಸಿಕೊಳ್ಳುವ ಪ್ರಯತ್ನವನ್ನೂ ನಡೆಸಿದ್ದರು.

ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್‌ ಊಟ

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಲಬುರ್ಗಿಗೆ ಬರುವ ಕಾರ್ಮಿಕರಿಗೆ ಮಹಾನಗರ ಪಾಲಿಕೆಯು ಇಂದಿರಾ ಕ್ಯಾಂಟೀನ್ ಮೂಲಕ ಉಚಿತ ಊಟದ ವ್ಯವಸ್ಥೆಯನ್ನು ಮಾಡಲಿದೆ.

ಸೋಮವಾರ ನಸುಕಿನ 5.30ರಿಂದ ಬೆಳಿಗ್ಗೆ 9ರವರೆಗೆ ಸುಮಾರು 900 ಪ್ಯಾಕೆಟ್‌ಗಳಲ್ಲಿ ಉಪ್ಪಿಟ್ಟನ್ನು ಉಪಾಹಾರವಾಗಿ ನೀಡಲಾಗುವುದು. ಚಿಕ್ಕಮಕ್ಕಳಿಗೆ ಹಾಲು ನೀಡಲಾಗುವುದು. ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಅವರ ಸೂಚನೆ ಮೇರೆಗೆ ಉಪಾಹಾರ ಹಾಗೂ ಹಾಲನ್ನು ಪ್ಯಾಕ್‌ ಮಾಡಿ ಉಚಿತವಾಗಿ ಕೊಡಲಿದ್ದೇನೆ ಎಂದು ಕಲಬುರ್ಗಿಯ ಇಂದಿರಾ ಕ್ಯಾಂಟೀನ್ ವ್ಯವಸ್ಥಾಪಕ ಶ್ರೀಶೈಲ ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು