ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯುತ್ ಕಡಿತ: ಅರ್ಧ ಕಲಬುರಗಿ ಕತ್ತಲಲ್ಲಿ, ಪರದಾಡಿದ ನಾಗರಿಕರು

ಎಂ.ಬಿ. ನಗರ ಬಡಾವಣೆಯಿಂದ ಸಂತ್ರಾಸವಾಡಿವರೆಗಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತ
Published : 9 ಸೆಪ್ಟೆಂಬರ್ 2024, 16:18 IST
Last Updated : 9 ಸೆಪ್ಟೆಂಬರ್ 2024, 16:18 IST
ಫಾಲೋ ಮಾಡಿ
Comments

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದ ವಿದ್ಯುತ್ ಪೂರೈಕೆ ಜಾಲದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಸೋಮವಾರ ನಗರದ ವೀರೇಂದ್ರ ಪಾಟೀಲ ಬಡಾವಣೆ, ಆದರ್ಶ ನಗರ, ಮಹಾತ್ಮ ಬಸವೇಶ್ವರ ನಗರ, ಗಣೇಶ ನಗರ, ಗುಬ್ಬಿ ಕಾಲೊನಿ, ಬಾಪುಗೌಡ ದರ್ಶನಾಪುರ ಕಾಲೊನಿ, ಜಾಗೃತಿ ಕಾಲೊನಿ, ಉಸ್ಮಾನಿಯಾ ಕಾಲನಿ, ಜಿಡಿಎ ಲೇಔಟ್ ಸೇರಿದಂತೆ ಹಲವು ಬಡಾವಣೆಗಳಲ್ಲಿ ಸಂಜೆ 4ಕ್ಕೆ ಕಡಿತಗೊಂಡಿದ್ದ ಸಂಪರ್ಕ ರಾತ್ರಿಯವರೆಗೂ ಬಂದಿರಲಿಲ್ಲ.

ಇದರಿಂದಾಗಿ ಈ ಬಡಾವಣೆಗಳಲ್ಲಿ ವಾಸವಿರುವ ಲಕ್ಷಾಂತರ ನಿವಾಸಿಗಳು ಪರದಾಡಿದರು. ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಕೇಂದ್ರ ಕಚೇರಿ ಇರುವ ನಗರದಲ್ಲೇ ಇಷ್ಟೊಂದು ಸಮಸ್ಯೆಯಾಗಿದ್ದರಿಂದ ನಿವಾಸಿಗಳು ಜೆಸ್ಕಾಂ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಿದರು.

ಬಸವೇಶ್ವರ ಕಾಲೊನಿಯಿಂದ ಸಂತ್ರಾಸವಾಡಿಯವರೆಗಿನ ಕಲಬುರಗಿ ನಗರದ ಭಾಗ ಕತ್ತಲಲ್ಲಿ ಮುಳುಗಿದ್ದರಿಂದ ರಾತ್ರಿ ಹೊತ್ತಿನಲ್ಲಿ ವಿವಿಧ ಕೆಲಸಗಳಿಗಾಗಿ ವಿದ್ಯುತ್ ಅವಲಂಬಿಸಿದವರು ಪರದಾಡಿದರು. 

ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ ಮಹಾತ್ಮ ಬಸವೇಶ್ವರ ನಗರದ ನಿವಾಸಿ, ವಕೀಲ ಭೀಮಾಶಂಕರ ಮಾಡಿಯಾಳ, ‘ಸಂಜೆ 4ರಿಂದಲೇ ವಿದ್ಯುತ್ ಕಡಿತಗೊಂಡಿದ್ದು, ಬಹುತೇಕ ಕೆಲಸಗಳು ಸ್ಥಗಿತಗೊಂಡಿವೆ. ಸಂಜೆ ಹೊತ್ತಿನಲ್ಲಿ ಹೀಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಕಳ್ಳ ಕಾಕರಿಗೆ ವರದಾನವಾಗಿದೆ. ಮಕ್ಕಳಿಗೆ ಹೋಮ್ ವರ್ಕ್ ಮಾಡಲು ಅಡ್ಡಿಯಾಯಿತು. ಗುಡಿ ಕೈಗಾರಿಕೆಗಳು, ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡಿದ್ದವು’ ಎಂದರು.

ಉಮ್ರಾವ್ ಕಾಲೊನಿ ನಿವಾಸಿ ಜಾವೀದ್ ಖಾನ್ ಮಾತನಾಡಿ, ‘ಸಂಜೆ ಹೊತ್ತು ಮನೆಯಲ್ಲಿ ನೀರು ಖಾಲಿಯಾಗಿತ್ತು. ಸಂಪ್‌ನಿಂದ ಟ್ಯಾಂಕ್‌ಗೆ ನೀರು ಏರಿಸಲು ಸಾಧ್ಯವಾಗುತ್ತಿಲ್ಲ. ಗಂಟೆಗಟ್ಟಲೇ ವಿದ್ಯುತ್ ಪೂರೈಕೆ ನಿಲ್ಲಿಸಿದರೆ ಹೇಗೆ? ಈ ಬಗ್ಗೆ ದೂರು ನೀಡೋಣವೆಂದು 1912 ಸಹಾಯವಾಣಿಗೆ ಕರೆ ಮಾಡಿದರೆ ಯಾರೂ ಸ್ಪಂದಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಎಷ್ಟು ಬಾರಿ ಕರೆ ಮಾಡಿದರೂ ಅರ್ಧ ಗಂಟೆಯಲ್ಲಿ ಕರೆಂಟ್ ಹಾಕುತ್ತೇವೆ ಎಂದು ಹೇಳುತ್ತಿದ್ದಾರೆಯೇ ಹೊರತು ರಾತ್ರಿಯಾದರೂ ಇನ್ನೂ ಬಂದಿಲ್ಲ. ಇಷ್ಟೊಂದು ಸಿಬ್ಬಂದಿ ಇದ್ದರೂ ಸಮಸ್ಯೆ ಸರಿಪಡಿಸದಿದ್ದರೆ ಹೇಗೆ’ ಎಂದು ಗಣೇಶ ನಗರದ ನಿವಾಸಿ ಶರಣಗೌಡ ಪಾಟೀಲ ಜೆಸ್ಕಾಂ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT