ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಕಲ್ಯಾಣ ಕರ್ನಾಟಕದತ್ತ ಸುಳಿಯದ ಉದ್ಯಮಗಳು..

ರದ್ದಾದ ನಿಮ್ಜ್; ಕಾಗದದಲ್ಲೇ ಉಳಿದ ಜ್ಯುವೆಲರಿ ಪಾರ್ಕ್, ಮುಚ್ಚುತ್ತಿರುವ ದಾಲ್‌ ಮಿಲ್‌ಗಳು
Last Updated 14 ಸೆಪ್ಟೆಂಬರ್ 2022, 4:48 IST
ಅಕ್ಷರ ಗಾತ್ರ

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶವು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿಯಷ್ಟೇ ಹಿಂದುಳಿದಿಲ್ಲ, ಉದ್ಯಮ ದೃಷ್ಟಿಯಿಂದಲೂ ಹಿನ್ನಡೆ ಎದುರಿಸುತ್ತಿದೆ. ಇದಕ್ಕೆ ಪೂರಕವಾಗಿ ಬೃಹತ್ ಕೈಗಾರಿಕೆಗಳೂ ಇತ್ತ ಮುಖ ಮಾಡಿಲ್ಲ.

ರಾಜ್ಯದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ತೊಗರಿ ಬೆಳೆಯುವ ರೈತರಿಗೆ ಸಮರ್ಪಕ ಬೆಂಬಲ ಬೆಲೆ ನಿಗದಿಯಾಗಿಲ್ಲ. ತೊಗರಿ ಬೇಳೆ ಸಂಸ್ಕರಿಸಿ ರಫ್ತು ಮಾಡುವ ಕಲಬುರಗಿ ಜಿಲ್ಲೆಯ ದಾಲ್‌ ಮಿಲ್‌ಗಳನ್ನು ಪ್ರೋತ್ಸಾಹಿಸಲು ಯಾವುದೇ ಉತ್ತೇಜಕ ಕ್ರಮವೂ ಇಲ್ಲ. ಒಂದು ಕಾಲಕ್ಕೆ 400 ಇದ್ದ ದಾಲ್‌ ಮಿಲ್‌ಗಳ ಸಂಖ್ಯೆ ಈಗ 150ಕ್ಕೆ ಉಳಿದಿವೆ. ಕೆಲವು ಬಾಗಿಲು ಮುಚ್ಚುವ ಸ್ಥಿತಿಯಲ್ಲಿವೆ.

ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ಹೂಡಿಕೆ ಮತ್ತು ತಯಾರಿಕಾ ವಲಯ (ನಿಮ್ಜ್‌) ಕಲಬುರಗಿಯಲ್ಲಿ ಆರಂಭವಾಗಲಿದೆ ಎಂಬ ಭರವಸೆ ಸಿಕ್ಕಿತು. ಆದರೆ, ನಿಮ್ಜ್ ಬರಲಿಲ್ಲ.

‘ಪಕ್ಕದ ಹೈದರಾಬಾದ್‌ನಲ್ಲಿ ವಿಶೇಷ ಆರ್ಥಿಕ ವಲಯಗಳು ರಚನೆಯಾಗಿ, ಸಹಸ್ರಾರು ಉದ್ಯೋಗಗಳು ಸೃಷ್ಟಿಯಾ ಗಿವೆ. ಕಲಬುರಗಿಯಲ್ಲಿ ಅಗತ್ಯವಿರುವಷ್ಟು ಸರ್ಕಾರಿ ಭೂಮಿ ಇದೆ. ಆದರೂ, ಕೈಗಾರಿಕೆಗಳು ಏಕೆ ಬರುವುದಿಲ್ಲ’ ಎಂಬುದು ಇಲ್ಲಿನ ಉದ್ಯಮಿಗಳು ಮತ್ತು ಹೋರಾಟಗಾರರ ಪ್ರಶ್ನೆಯಾಗಿದೆ.

ಬಾರದ ಜ್ಯುವೆಲರಿ ಪಾರ್ಕ್: ‘ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಮುರುಗೇಶ ನಿರಾಣಿ ಅವರ ಕೈಯಲ್ಲೇ ಪ್ರಭಾವಿ ಖಾತೆಯಾದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಇದೆ. ಜಿಲ್ಲೆಗೆ ಜ್ಯುವೆಲರಿ ಪಾರ್ಕ್ ಶೀಘ್ರ ಘೋಷಿಸಲಾಗುವುದು ಎಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ ತಿಳಿಸಿದ್ದರು. ಅದು ಇನ್ನೂ ಈಡೇರಿಲ್ಲ. ಜವಳಿ ಪಾರ್ಕ್‌ ಆರಂಭಿಸುವ ಕುರಿತು ಈಗ ಹೇಳಿಕೆ ನೀಡಿದ್ದಾರೆ. ಆದರೆ, ಇಲ್ಲಿ ಜವಳಿ ಪಾರ್ಕ್ ಮಾಡುವ ಉದ್ದೇಶವಿದ್ದರೆ ಕೇಂದ್ರಕ್ಕೆ ಸಲ್ಲಿಕೆಯಾದ ಪ್ರಸ್ತಾವದಲ್ಲಿ ಕಲಬುರಗಿ ಜಿಲ್ಲೆಯ ಜೊತೆಗೆ ವಿಜಯಪುರ ಜಿಲ್ಲೆಯನ್ನೂ ಯಾಕೆ ಸೇರಿಸಬೇಕಿತ್ತು’ ಎಂದು ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ (ಎಚ್‌ಕೆಸಿಸಿಐ) ಅಧ್ಯಕ್ಷ ಪ್ರಶಾಂತ ಮಾನಕರ ಪ್ರಶ್ನಿಸುತ್ತಾರೆ.

‘ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ ರೂಪಿಸಿ ಹೆಚ್ಚು ಸಬ್ಸಿಡಿಗಳನ್ನು ನೀಡಬೇಕು. ಇಲ್ಲಿರುವ ಕೈಗಾರಿಕೆಗಳು ಹಾಗೂ ಕೃಷಿ ಆಧಾರಿತ ಸಂಸ್ಕರಣಾ ಘಟಕಗಳಿಗೆ ₹ 1ಕ್ಕೆ ಯೂನಿಟ್‌ನಂತೆ ಕಡಿಮೆ ದರದಲ್ಲಿ ವಿದ್ಯುತ್ ನೀಡಬೇಕು. ಅದಕ್ಕಾಗಿ, ಜೆಸ್ಕಾಂ ಸೋಲಾರ್ ಪಾರ್ಕ್‌ಗಳನ್ನು ಆರಂಭಿಸಿ ಅದರಿಂದ ವಿದ್ಯುತ್ ಪಡೆಯಬೇಕು. ಇಲ್ಲದಿದ್ದರೆ ಇಂದಿನ ದುಬಾರಿ ಕಾಲದಲ್ಲಿ ಉದ್ಯಮ ನಡೆಸುವುದು ಕಷ್ಟವಾಗಲಿದೆ’ ಎಂದು ಅವರು ಹೇಳಿದರು.

‘ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ರಿಯಾಯಿತಿ ನೀಡುವ ಉದ್ದೇಶದಿಂದ ಪ್ರತ್ಯೇಕ ವಲಯವೆಂದು ಘೋಷಿಸಿ ಉದ್ಯಮಿಗಳಿಗೆ ಬೇಕಾದ ಭೂಮಿ, ನೀರು, ವಿದ್ಯುತ್ ಸೌಲಭ್ಯ ಕಡಿಮೆ ದರದಲ್ಲಿ ನೀಡಬೇಕು ಎಂದು ಹಿಂದಿನ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರಿಗೆ ಕೋರಲಾಗಿತ್ತು. ಆದರೆ, ಈ ಮನವಿಗೆ ರಾಜ್ಯ ಸರ್ಕಾರ ಯಾವುದೇ ಮನ್ನಣೆ ನೀಡಲಿಲ್ಲ’ ಎಂದು ಜಿಲ್ಲೆಯ ಉದ್ಯಮಿಗಳು ಬೇಸರ ವ್ಯಕ್ತಪಡಿಸುತ್ತಾರೆ.

‘ದಾಲ್ ಮಿಲ್ ಕೃಷಿ ಆಧಾರಿತ ಉದ್ಯಮವಾಗಲಿ’

ಜಿಲ್ಲೆಯಲ್ಲಿ ಸಂಕಷ್ಟದಲ್ಲಿ ನಡೆಯು ತ್ತಿರುವ ದಾಲ್‌ ಮಿಲ್‌ಗಳ ನೆರವಿಗೆ ಬರುವ ಮನಸ್ಸು ಕೇಂದ್ರ ಸರ್ಕಾರಕ್ಕೆ ಇದ್ದರೆ ದಾಲ್‌ ಮಿಲ್‌ಗಳನ್ನು ಕೃಷಿ ಆಧಾರಿತ ಉದ್ಯಮವೆಂದು ಪರಿಗಣಿಸಬೇಕು. ಇದರಿಂದ ಶೇ 4ರ ಬಡ್ಡಿ ದರದಲ್ಲಿ ಸಾಲ ದೊರೆಯು ತ್ತದೆ. ಈಗ ಶೇ 8ರಿಂದ ಶೇ 8.50 ದರದಲ್ಲಿ ಸಾಲ ಪಡೆಯಬೇಕಿದೆ ಎನ್ನುತ್ತಾರೆ ಗುಲಬರ್ಗಾ ದಾಲ್ ಮಿಲ್ಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಶಿವಶರಣಪ್ಪ ನಿಗ್ಗುಡಗಿ.

ಬ್ಯಾಂಕ್‌ನಲ್ಲಿ ₹ 1 ಕೋಟಿ ಓವರ್ ಡ್ರಾಫ್ಟ್ (ಓ.ಡಿ.) ಸೌಲಭ್ಯ ಪಡೆಯಬೇಕೆಂದರೆ ₹ 5 ಕೋಟಿ ವಹಿವಾಟು ತೋರಿಸಬೇಕಿದೆ. ಹಲವು ಬಾರಿ ಅಷ್ಟು ವಹಿವಾಟು ನಡೆಯುವುದಿಲ್ಲ. ಆದ್ದರಿಂದ ಮಿತಿಯನ್ನು ₹ 2.5 ಕೋಟಿಗೆ ಇಳಿಸಬೇಕು. ದಾಲ್‌ಮಿಲ್‌ಗಳಿಗೆ ಐದು ವರ್ಷ ಕಡಿಮೆ ದರದಲ್ಲಿ ಸಾಲಸೌಲಭ್ಯ ನೀಡಬೇಕು. ಐದು ವರ್ಷದ ಸಾಲದ ಮೇಲಿನ ಬಡ್ಡಿಯನ್ನು ಕೆಕೆಆರ್‌ಡಿಬಿ ಉದ್ಯಮ ಉಳಿಸುವ ಸಲುವಾಗಿ ಭರಿಸಬೇಕು. ಮುಖ್ಯವಾಗಿ ಪಡಿತರದ ಮೂಲಕ ಬೇಳೆ ಪೂರೈಸುವ ಉದ್ಯಮಿಗಳು ಕನಿಷ್ಠ ₹ 25 ಕೋಟಿ ವಹಿವಾಟು ನಡೆಸಬೇಕು ಎಂಬ ನಿಯಮ ವಿಧಿ ಸಲಾಗಿದೆ. ಇದರಿಂದ ಕೆಲವರಿ ಗಷ್ಟೇ ಅನುಕೂಲವಾಗಲಿದೆ. ಹಾಗಾಗಿ ಆ ಷರತ್ತನ್ನು ಸಡಿಲಗೊ ಳಿಸಿ ₹ 5 ಕೋಟಿ ವಹಿವಾಟು ಇದ್ದವರೂ ಬೇಳೆ ಪೂರೈಸಲು ಅವಕಾಶ ಕೊಡಬೇಕು ಎಂದು ಒತ್ತಾಯಿಸುತ್ತಾರೆ.

ವಿಮಾನ ನಿಲ್ದಾಣವೂ ಇರುವುದರಿಂದ ಕಲಬುರಗಿ ಜಿಲ್ಲೆಗೆ ಜ್ಯುವೆಲರಿ ಪಾರ್ಕ್ ಮಂಜೂರು ಮಾಡಿದರೆ ಇಲ್ಲಿ ಆಭರಣಗಳನ್ನು ಜೋಡಣೆ ಮಾಡಿ ವಿಮಾನದ ಮೂಲಕ ರಫ್ತು ಮಾಡಬಹುದು. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕು
ಪ್ರಶಾಂತ ಮಾನಕರ,

ಎಚ್‌ಕೆಸಿಸಿಐ ಅಧ್ಯಕ್ಷ

ಕಲಬುರಗಿ ಜಿಲ್ಲೆಯ ಫಿರೋಜಾಬಾದ್ ಬಳಿ ಇರುವ 1000 ಎಕರೆ ಭೂಮಿಯಲ್ಲಿ ಜವಳಿ ಪಾರ್ಕ್ ನಿರ್ಮಿಸಲು ಅನುಮೋದನೆ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅಲ್ಲಿಂದ ಒಪ್ಪಿಗೆ ಸಿಕ್ಕ ಬಗ್ಗೆ ಮಾಹಿತಿ ಇಲ್ಲ
ಅಜಿತ್ ನಾಯಕ್
ಉಪನಿರ್ದೇಶಕ (ಪ್ರಭಾರ), ಜವಳಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT