ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟದಲ್ಲಿ ಸಿಗದ ಪ್ರಾತಿನಿಧ್ಯ: ಪ್ರತಿಭಟನೆ

Last Updated 20 ಆಗಸ್ಟ್ 2019, 16:04 IST
ಅಕ್ಷರ ಗಾತ್ರ

ಕಲಬುರ್ಗಿ: ಮಂಗಳವಾರ ವಿಸ್ತರಣೆಯಾದ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ಸಿಗದಿರುವುದನ್ನು ಖಂಡಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಕಾರ್ಯಕರ್ತರು ನಗರದ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಹೈದರಬಾದ್‌–ಕರ್ನಾಟಕದ ಆರು ಜಿಲ್ಲೆಗಳ ಪೈಕಿ ಕೇವಲ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ದೇಶಕ್ಕೆ ಚಿನ್ನ, ತೊಗರಿ, ಸಿಮೆಂಟ್, ಭತ್ತ, ಅಕ್ಕಿ, ವಿದ್ಯುತ್‌ ಹಾಗೂ ಕೋಟ್ಯಂತರ ರೂಪಾಯಿ ತೆರಿಗೆ ಕೊಡುತ್ತೇವೆ. ಅದಕ್ಕೆ ಪ್ರತಿಯಾಗಿ ನಮ್ಮ ಜನಪ್ರತಿನಿಧಿಗಳಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಹರಿಹಾಯ್ದರು. ಕೇಂದ್ರ ಸರ್ಕಾರದಲ್ಲಿಯೂ ಈ ಭಾಗದವರಿಗೆ ಸಚಿವ ಸ್ಥಾನ ಇಲ್ಲ. ಇದೀಗ ರಾಜ್ಯ ಸಚಿವ ಸಂಪುಟದಲ್ಲಿಯೂ ಸ್ಥಾನ ನೀಡಿಲ್ಲ. ಒಟ್ಟಾರೆ ಎರಡೂ ಸರ್ಕಾರಗಳಿಂದ ಸಿಕ್ಕಿದ್ದು ಖಾಲಿ ಚೊಂಬು ಎಂದು ಚೊಂಬಿನ ಚಿತ್ರವನ್ನು ಪ್ರದರ್ಶಿಸಿದರು. ಈ ಭಾಗಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿರುವುದರಿಂದ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯವನ್ನು ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್‌.ಪಾಟೀಲ ನರಿಬೋಳ ನೇತೃತ್ವ ವಹಿಸಿದ್ದರು.

ಪ್ರತ್ಯೇಕ ರಾಜ್ಯದ ಬೇಡಿಕೆಗೆ ಖಂಡನೆ: ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಕಾರಣಕ್ಕಾಗಿ‍ಪ್ರತ್ಯೇಕ ರಾಜ್ಯಕ್ಕಾಗಿ ಧ್ವನಿ ಎತ್ತುವುದು ಖಂಡನೀಯ ಎಂದು ಕರ್ನಾಟಕ ನವನಿರ್ಮಾಣ ಸೇನೆ ಟೀಕಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ರವಿ ದೇಗಾಂವ, ‘ಸಚಿವ ಸ್ಥಾನ ಸಿಗಲಿಲ್ಲ ಎಂದು ಕೆಲ ಅತೃಪ್ತ ಶಾಸಕರು ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳಲು ಹೋರಾಟಗಾರರಿಂದ ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸುತ್ತಿದ್ದಾರೆ. ತಮ್ಮನ್ನು ಆಯ್ಕೆ ಮಾಡಿದ ಜನಗಳ ಸೇವೆಯನ್ನೇ ಮಾಡದ ಇವರು ಸಚಿವರಾಗಿ ಯಾವ ಸೇವೆ ಮಾಡುತ್ತಾರೆ ಎಂಬುದನ್ನು ಹೋರಾಟಗಾರರು ಯೋಚಿಸಬೇಕು. ಅಧಿಕಾರ ಕೈಯಲ್ಲಿದ್ದಾಗ ಏನನ್ನೂ ಮಾಡದ ಇವರನ್ನು ನಂಬಿ ರಾಜ್ಯ ವಿಭಜಿಸುವ ಕೆಟ್ಟ ಕೆಲಸಕ್ಕೆ ಕೈ ಹಾಕಬಾರದು. ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಬಿಡುಗಡೆಯಾದ ಕೋಟಿ ಕೋಟಿ ಹಣ ಇಲ್ಲಿಯ ಶಾಸಕರು ಸದ್ಬಳಕೆ ಮಾಡಿಕೊಳ್ಳದ ಮರಳಿ ಸರ್ಕಾರಕ್ಕೆ ಹೋಗಿದೆ. ಕೊಟ್ಟ ಕುದುರೆಯನ್ನು ಏರಲು ಅರಿಯದ ಇಂಥವರಿಗಾಗಿ ಪವಿತ್ರ ನಾಡನ್ನು ಒಡೆಯುವ ಕೆಟ್ಟ ಕೆಲಸಕ್ಕೆ ಕೈ ಹಾಕಬಾರದು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT