ಚಿಂಚೋಳಿ: ತಾಲ್ಲೂಕಿನ ಫತ್ತು ನಾಯಕ ತಾಂಡಾದಲ್ಲಿ 6 ವರ್ಷ ಮೇಲಿನ 60ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಆದರೆ, ಇಲ್ಲಿ ಸರ್ಕಾರಿ ಶಾಲೆಯೇ ಇಲ್ಲ. ಇದರಿಂದಾಗಿ ಇಲ್ಲಿನ ಮಕ್ಕಳು ಬೇರೆ ಊರಿನ ಶಾಲೆಗಳಿಗೆ ದಾಖಲಾಗುವಂತಾಗಿದೆ.
ಐನಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫತ್ತುನಾಯಕ ತಾಂಡಾಕ್ಕೆ ಶತಮಾನದ ಇತಿಹಾಸವಿದೆ. ಭೂಂಯಾರ್ (ಕೆ) ಗ್ರಾಮದಿಂದ 3 ಕಿ.ಮೀ ದೂರದಲ್ಲಿರುವ ಈ ತಾಂಡಾದಲ್ಲಿ 1980ರ ದಶಕದಲ್ಲಿಯೇ ಅನುದಾನಿತ ಶಾಲೆಯೊಂದು ಇತ್ತು. ಹೀಗಾಗಿ ಇಲ್ಲಿ ಸರ್ಕಾರಿ ಶಾಲೆ ಇರಲಿಲ್ಲ. ತಾಂಡಾದಿಂದ ಅನುದಾನಿತ ಶಾಲೆ 2012ರಲ್ಲಿ ಚಿಂಚೋಳಿ ಪುರಸಭೆ ವ್ಯಾಪ್ತಿಯ ಚಂದಾಪುರಕ್ಕೆ ಸ್ಥಳಾಂತರಗೊಂಡಿತು. ಇದರಿಂದಾಗಿ ಫತ್ತು ನಾಯಕ ತಾಂಡಾದಲ್ಲಿ ಶಾಲೆಯೇ ಇಲ್ಲದಂತಾಗಿದೆ.
ಫತ್ತು ನಾಯಕ ತಾಂಡಾದಲ್ಲಿ ಅಂಗನವಾಡಿ ಕೇಂದ್ರವಿದ್ದು, 44 ಮಕ್ಕಳಿದ್ದಾರೆ. ಶಾಲೆಗೆ ಹೋಗುವ ಮಕ್ಕಳು 60ಕ್ಕೂ ಹೆಚ್ಚಿದ್ದಾರೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮಣ ರಾಠೋಡ.
ಇಲ್ಲಿನ ಮಕ್ಕಳನ್ನು 1 ಕಿ.ಮೀ ದೂರದ ನಾಮು ನಾಯಕ ತಾಂಡಾದ ಶಾಲೆಗೆ ದಾಖಲಿಸಲಾಗುತ್ತಿದೆ. ನಾಮು ನಾಯಕ ತಾಂಡಾದವರು 39 ಮಕ್ಕಳು ಇದ್ದರೆ, ಫತ್ತುನಾಯಕ ತಾಂಡಾದ 45ಕ್ಕೂ ಹೆಚ್ಚು ಮಕ್ಕಳು ಇದ್ದಾರೆ ಎಂದು ತಿಳಿಸಿದರು.
ಇಲ್ಲಿನ ಅಂಗನವಾಡಿ ಕಟ್ಟಡದ ಬಳಿಯೇ ಸರ್ಕಾರಿ ಶಾಲಾ ಕಟ್ಟಡ ನಿರ್ಮಿಸಲಾಗಿದೆ. ನಾಮು ನಾಯಕ ತಾಂಡಾ ಮತ್ತು ಭೂಂಯಾರ್ ಶಾಲೆಗೆ ಇಲ್ಲಿನ ಮಕ್ಕಳನ್ನು ದಾಖಲಿಸಿದ್ದಾರೆ. ಮಕ್ಕಳನ್ನು ಬೇರೆ ಶಾಲೆಯಲ್ಲಿ ದಾಖಲಿಸಿ, ಆ ಶಾಲೆಯ ಒಬ್ಬ ಶಿಕ್ಷಕರನ್ನು ಫತ್ತುನಾಯಕ ತಾಂಡಾಕ್ಕೆ ಕಳುಹಿಸಿ ತರಗತಿ ನಡೆಸಲಾಗುತ್ತಿದೆ. ಬಿಸಿ ಊಟವನ್ನೂ ನೀಡಲಾಗುತ್ತಿದೆ. ಆದರೆ, ಎಲ್ಲವೂ ನಾಮುನಾಯಕ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹೆಸರಲ್ಲಿಯೇ ನಡೆಯುತ್ತಿದೆ ಎಂದು ತಾಂಡಾವಾಸಿಗಳು ಬೇಸರ ವ್ಯಕ್ತಪಡಿಸಿದರು.
‘ನಮ್ಮ ತಾಂಡಾಕ್ಕೆ ಸರ್ಕಾರಿ ಪ್ರಾಥಮಿಕ ಶಾಲೆ ಹೊಸದಾಗಿ ಮಂಜೂರು ಮಾಡಿರಿ ಇಲ್ಲವೇ ಬೇರೆ ಕಡೆಯ ಶಾಲೆಯನ್ನು ಇಲ್ಲಿಗೆ ಸ್ಥಳಾಂತರ ಮಾಡಿ ಎಂದರೂ ಸರ್ಕಾರ ಸ್ಪಂದಿಸಿಲ್ಲ. ತಾಂಡಾಕ್ಕೆ ಪ್ರತ್ಯೇಕ ಶಾಲೆ ಬೇಕು ಎಂದು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸುಸ್ತಾಗಿದೆ. ಆದರೆ, ಶಾಲೆ ಮಂಜೂರಾತಿ ಮಾತ್ರ ಮರೀಚಿಕೆಯಾಗಿದೆ. ಇಲ್ಲಿ ಶಾಲೆ ಮಂಜೂರಾತಿಗಾಗಿ ಶಾಸಕ ಡಾ.ಅವಿನಾಶ ಜಾಧವ ವಿಧಾನಸಭೆ ಅಧಿವೇಶನದಲ್ಲಿ ಧ್ವನಿ ಎತ್ತಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ತಿಳಿಸಿದರು.
ಫತ್ತು ನಾಯಕ ತಾಂಡಾದಲ್ಲಿ ಸರ್ಕಾರಿ ಶಾಲೆ ಇಲ್ಲದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಕುರಿತು ಮಾಹಿತಿ ಪಡೆದು ಪರಿಶೀಲಿಸುತ್ತೇನೆ.ಸಕ್ರೆಪ್ಪಗೌಡ ಬಿರಾದಾರ ಡಿಡಿಪಿಐ ಕಲಬುರಗಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.