ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಬಾವಿ ಸ್ವಚ್ಛತೆ ಗುತ್ತಿಗೆಗೆ ಹಿಂದೇಟು!

ಕಲಬುರ್ಗಿಯಲ್ಲಿ 65 ಬಾವಿಗಳನ್ನು ಗುರುತಿಸಿರುವ ಮಹಾನಗರ ಪಾಲಿಕೆ
Last Updated 25 ಜೂನ್ 2021, 2:15 IST
ಅಕ್ಷರ ಗಾತ್ರ

ಕಲಬುರ್ಗಿ: ಬಹಮನಿ ಸುಲ್ತಾನರು ಹಾಗೂ ನಿಜಾಮರ ಕಾಲದಲ್ಲಿ ನಗರದಲ್ಲಿ ನಿರ್ಮಿಸಲಾದ ಬಾವಿಗಳನ್ನು ಪುನಶ್ಚೇತನಗೊಳಿಸಲು ಮಹಾನಗರ ಪಾಲಿಕೆ 15ನೇ ಹಣಕಾಸು ಯೋಜನೆಯಡಿ ₹ 2 ಕೋಟಿ ಮೀಸಲಿಟ್ಟಿದ್ದು, ಈ ಸಂಬಂಧ ಟೆಂಡರ್ ಕರೆದರೂ ಟೆಂಡರ್ ಹಾಕಲು ಯಾರೊಬ್ಬರೂ ಉತ್ಸುಕತೆ ತೋರದ ಕಾರಣ ಬಾವಿಗಳನ್ನು ಮರುಬಳಕೆ ಮಾಡಿಕೊಳ್ಳುವ ಪಾಲಿಕೆಯ ಯತ್ನಕ್ಕೆ ಹಿನ್ನಡೆಯಾಗಿದೆ.

ಪ್ರಾದೇಶಿಕ ಆಯುಕ್ತರಾಗಿದ್ದ ಸುಬೋಧ್‌ ಯಾದವ್ ಅವರು ನಗರದಲ್ಲಿರುವ ಪುರಾತನ ಕಾಲದ ಬಾವಿಗಳು ಹಾಗೂ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿ ಅವುಗಳ ನೀರನ್ನು ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಿದ್ದರು. ಮಹಾನಗರ ಪಾಲಿಕೆಯ ಹಿಂದಿನ ಆಯುಕ್ತೆ ಫೌಜಿಯಾ ತರನ್ನುಮ್ ಅವರು 64 ಬಾವಿಗಳ ಪುನಶ್ಚೇತನಕ್ಕೆ ಆಸಕ್ತಿ ವಹಿಸಿದ್ದರು. ಇದಕ್ಕಾಗಿ ಅವರು ₹ 4 ಕೋಟಿ ವೆಚ್ಚವಾಗುವ ಅಂದಾಜು ಮಾಡಿದ್ದರು.

ಪ್ರಸ್ತುತ ಪಾಲಿಕೆ ಆಯುಕ್ತರಾದ ಸ್ನೇಹಲ್ ಸುಧಾಕರ ಲೋಖಂಡೆ ಅವರು ಒಟ್ಟು 65 ಬಾವಿಗಳನ್ನು ಪಟ್ಟಿ ಮಾಡಿದ್ದು, ಇದಕ್ಕಾಗಿ 15ನೇ ಹಣಕಾಸು ಯೋಜನೆಯಡಿ ಹಣವನ್ನೂ ಮೀಸಲಿಟ್ಟು ಒಂದು ಬಾರಿ ಟೆಂಡರ್‌ ಕರೆದಿದ್ದಾರೆ. ಈ ಟೆಂಡರ್ ಪ್ರಕ್ರಿಯೆಯಲ್ಲಿ ಯಾರೊಬ್ಬರೂ ಭಾಗಿಯಾಗದ್ದರಿಂದ ಎರಡನೇ ಬಾರಿ ಟೆಂಡರ್ ಕರೆಯಲು ಮುಂದಾಗಿದ್ದಾರೆ.

ನಗರದ ಪ್ರಮುಖ ಸೂಫಿ ಸಂತ ಖಾಜಾ ಬಂದಾನವಾಜ್ ಅವರು ಕೆಲ ಬಾವಿಗಳನ್ನು ಕಟ್ಟಿಸಿದ್ದರು. ಬಹಮನಿ ಸುಲ್ತಾನರು ಜನರಿಗಾಗಿ ಭಾರಿ ಆಳವಾದ ಹಾಗೂ ಅಷ್ಟೇ ಸುಂದರವಾದ ಬಾವಿ (ಬಾವಡಿ)ಗಳನ್ನು ನಿರ್ಮಿಸಿದ್ದರು. ನಗರದಲ್ಲಿರುವ 60ಕ್ಕೂ ಅಧಿಕ ಬಾವಿಗಳ ಪೈಕಿ ಹೀರಾಪುರ, ರಾಜಾಪುರ, ತಾರಫೈಲ್, ನಯಾ ಮೊಹಲ್ಲಾ, ಕೋರಂಟಿ ಹನುಮಾನ ದೇವಸ್ಥಾನದ ಬಳಿ ಸೇರಿದಂತೆ ವಿವಿಧೆಡೆ ಇರುವ 10 ಬಾವಿಗಳಿಂದಲೇ ಅರ್ಧ ಕಲಬುರ್ಗಿ ನಗರಕ್ಕೇ ನೀರು ಪೂರೈಕೆ ಮಾಡಬಹುದಿತ್ತು ಎಂದು ನೀರಾವರಿ ತಜ್ಞರು ಅಂದಾಜು ಮಾಡಿದ್ದಾರೆ.

ಒಟ್ಟಾರೆ 15 ಬಾವಿಗಳಲ್ಲಿನ ನೀರು ಈಗಲೂ ಬಳಕೆ ಮಾಡಲು ಯೋಗ್ಯವಾಗಿದೆ. ಆದರೆ, ಜಲಮಂಡಳಿಯು ಮನೆ ಮನೆಗೆ ನೀರು ಪೂರೈಕೆ ಮಾಡುತ್ತಿರುವುದರಿಂದ ಬಾವಿಗಳು ಹಾಳು ಬಿದ್ದಿದ್ದು, ತ್ಯಾಜ್ಯ ಎಸೆಯುವ ಕೇಂದ್ರಗಳಾಗಿವೆ.

ಬಾವಿಯಲ್ಲಿನ ನೀರನ್ನು ಪೈಪ್‌ಲೈನ್‌ ಮೂಲಕ ಉದ್ಯಾನಗಳು, ಸರ್ಕಾರಿ ಕಟ್ಟಡಗಳಿಗೆ ಬಳಕೆ ಮಾಡಿಕೊಳ್ಳುವ ಪ್ರಸ್ತಾವವವೂ ಇದೆ. ಆದರೆ, ಬಾವಿಯಲ್ಲಿನ ಹೂಳು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆಗೆದು ನೀರನ್ನು ಬಳಕೆಗೆ ಯೋಗ್ಯವನ್ನಾಗಿ ಮಾಡುವ ಪ್ರಯತ್ನ ಯಶ ಕಾಣದೇ ಇರುವುದರಿಂದ ಈ ಪ್ರಸ್ತಾವವೂ ನನೆಗುದಿಗೆ ಬಿದ್ದಿದೆ ಎನ್ನುತ್ತಾರೆ ಪಾಲಿಕೆಯ ಅಧಿಕಾರಿಯೊಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT