ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯದ ಧೋರಣೆಗೆ ವಿದ್ಯಾರ್ಥಿಗಳ ಆತಂಕ

Last Updated 5 ಫೆಬ್ರುವರಿ 2023, 7:11 IST
ಅಕ್ಷರ ಗಾತ್ರ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ 2021ರ ಅಕ್ಟೋಬರ್ /ನವೆಂಬರ್‌ನಲ್ಲಿ ನಡೆದ ಪದವಿ ಪರೀಕ್ಷೆಯಲ್ಲಿ 6ನೇ ಸೆಮಿಸ್ಟರ್ ಪರೀಕ್ಷೆ ನಡೆಸಿ, 2 ಮತ್ತು 4ನೇ ಸೆಮಿಸ್ಟರ್ (ರೆಗ್ಯುಲರ್ ಮತ್ತು ರಿಪೀಟರ್ಸ್) ವಿದ್ಯಾರ್ಥಿಗಳಿಗೆ ತರಗತಿ ಪ್ರಮೋಟ್ ಮಾಡುವುದರ ಮೂಲಕ ಉತ್ತೀರ್ಣಗೊಳಿಸುವುದಾಗಿ ವಿಶ್ವವಿದ್ಯಾಲಯ ನಿರ್ಧರಿಸಿತ್ತು.

ವಿಶ್ವವಿದ್ಯಾಲಯ 2ನೇ ಮತ್ತು 4ನೇ ಸೆಮಿಸ್ಟರ್ ರೆಗ್ಯುಲರ್ ವಿದ್ಯಾರ್ಥಿಗಳಿಗೆ ಮಾತ್ರ ಪ್ರಮೋಟ್ ಮಾಡಿ ಉತ್ತೀರ್ಣಗೊಳಿಸಿದೆ. ಆದರೆ 2ನೇ ಮತ್ತು 4ನೇ ಸೆಮಿಸ್ಟರ್ ರಿಪೀಟರ್ಸ್ ವಿದ್ಯಾರ್ಥಿಗಳು ಅತ್ತ ಪರೀಕ್ಷೆ ಇಲ್ಲದೆ, ಇತ್ತ ಪ್ರಮೋಟ್ ಮೂಲಕ ಉತ್ತೀರ್ಣವಾಗದೇ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

ವಿಶ್ವವಿದ್ಯಾಲಯವು ರಿಪೀಟರ್ಸ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದಿರುವ ವಿಷಯವನ್ನು ಮುಚ್ಚಿಟ್ಟಿದೆ. ವಿಶ್ವವಿದ್ಯಾಲಯದ ನಿರ್ಧಾರದಿಂದಾಗಿ 2021ರ ಅಕ್ಟೋಬರ್ /ನವೆಂಬರ್‌ನಲ್ಲಿ ಪದವಿ ಪೂರೈಸಬೇಕಾದ ವಿದ್ಯಾರ್ಥಿಗಳ ಎರಡು ವರ್ಷಗಳ ಶೈಕ್ಷಣಿಕ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ.

ಪ್ರಸ್ತುತ ವರ್ಷದ 6ನೇ ಸೆಮಿಸ್ಟರ್ ಪರೀಕ್ಷೆ ನವೆಂಬರ್/ ಡಿಸೆಂಬರ್ ತಿಂಗಳಲ್ಲಿ ನಡೆದಿತ್ತು. ಈ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿದ್ದರೂ 2ನೇ ಮತ್ತು 4ನೇ ಸೆಮಿಸ್ಟರ್ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ವಿಳಂಬವಾಗಿ ಫಲಿತಾಂಶ ಪ್ರಕಟವಾಗಿಲ್ಲ.

ಇದಲ್ಲದೇ ವಿಶ್ವವಿದ್ಯಾಲಯದ 39 ಮತ್ತು 40ನೇ ಘಟಿಕೋತ್ಸವ ಮುಗಿದು ವರ್ಷ ಸಮೀಪಿಸುತ್ತಿದ್ದರೂ ಘಟಿಕೋತ್ಸವ ಪ್ರಮಾಣ ಪತ್ರ ವಿದ್ಯಾರ್ಥಿಗಳಿಗೆ ಇನ್ನೂ ತಲುಪಿಲ್ಲ. ಅಗತ್ಯ ಇರುವ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತಿದ್ದಾರೆ. ಸದ್ಯ ವಿಶ್ವವಿದ್ಯಾಲಯವು 41ನೇ ಘಟಿಕೋತ್ಸವದ ಹೊಸ್ತಿಲಲ್ಲಿದೆ. 2021ರ ಅಕ್ಟೋಬರ್/ನವೆಂಬರ್‌ನಲ್ಲಿ ಪರೀಕ್ಷೆ ಉತ್ತೀರ್ಣರಾದ ವಿದ್ಯಾರ್ಥಿಗಳ ತಾತ್ಕಾಲಿಕ ಪಾಸಿಂಗ್ ಸರ್ಟಿಫಿಕೇಟ್ ಸಹ ಇಲ್ಲಿಯವರೆಗೆ ಬಂದಿಲ್ಲ ಎಂಬುದು ವಿದ್ಯಾರ್ಥಿಗಳ ಅಳಲು.

2022ರ ಮೇ/ ಜೂನ್‌ನಲ್ಲಿ ಪದವಿ ಪರೀಕ್ಷೆ ಮುಗಿದು ಫಲಿತಾಂಶ ಪ್ರಕಟವಾದರೂ ಈ ಪರೀಕ್ಷೆಗಳಿಗೆ ಸಂಬಂಧಿಸಿದ ನೋಡಲ್ ಕೇಂದ್ರ, ಆಂತರಿಕ ಹಿರಿಯ ಮೇಲ್ವಿಚಾರಕರು ಹಾಗೂ ಪ್ರಾಯೋಗಿಕ ಪರೀಕ್ಷೆಗಳ ಪರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿರುವ ಸಿಬ್ಬಂದಿಯ ಗೌರವ ಹಣ ಇಲ್ಲಿಯವರೆಗೆ ಸಂದಾಯವಾಗಿರುವುದಿಲ್ಲ ಎಂದು ಮೇಲ್ವಿಚಾರಕರೊಬ್ಬರ ಆರೋಪ.

ಹಿಂದಿನ ಬಹಳಷ್ಟು ಪರೀಕ್ಷೆಗಳ ಹೆಚ್ಚುವರಿ ಹಣದ ಬಿಲ್‌ಗಳು ವಿಲೇವಾರಿಯಾಗದೆ ಹಣ ಪಾವತಿ ಮಾಡಿಲ್ಲ. ಈ ಎಲ್ಲ ತರಹದ ಬಿಲ್‌ಗಳು ಪರೀಕ್ಷಾ ವಿಭಾಗದಲ್ಲಿಯೇ ಉಳಿಸಿಕೊಂಡು ಹಣಕಾಸು ವಿಭಾಗಕ್ಕೆ ಕಳುಹಿಸದೇ ಇರುವುದು ಇದಕ್ಕೆ ಕಾರಣವಾಗಿದೆ. ಇದು ವಿವಿಧ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದೆಲ್ಲದರ ಹೊರತಾಗಿ ಫಲಿತಾಂಶ ಪ್ರಕಟಣೆ, ಆರ್‌ಆರ್‌ಎಲ್‌, ಐ.ಎ. ಅಂಕಗಳು ಬಾಕಿ ಮತ್ತು ಪ್ರಾಯೋಗಿಕ ಪರೀಕ್ಷೆಗಳ ಅಂಕಗಳು ಬಾಕಿಯಿರುವ ನೂರಾರು ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಪ್ರಕಟಣೆಗಾಗಿ ದಿನನಿತ್ಯ ವಿಶ್ವವಿದ್ಯಾಲಯಕ್ಕೆ ಅಲೆದಾಡುತಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ಗಂಭೀರವಾಗಿ ಪ್ರಯತ್ನಿಸದೇ ವಿಶ್ವವಿದ್ಯಾಲಯವು ತಾಂತ್ರಿಕ ತೊಂದರೆ ಎಂದು ಸಬೂಬು ನೀಡುವುದರ ಮೂಲಕ ವಿಳಂಬ ಮಾಡುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

‘ಕೆಲವೇ ದಿನಗಳಲ್ಲಿ ಅಂಕಪಟ್ಟಿ’

ರಿಪೀಟರ್ಸ್ ವಿದ್ಯಾರ್ಥಿಗಳಿಗೆ ಪ್ರಮೋಟ್ ಮಾಡಲು ಕೆಲವು ನಿಬಂಧನೆಗಳಿವೆ. ವಿದ್ಯಾರ್ಥಿಗಳು 2ನೇ ಸೆಮಿಸ್ಟರ್‌ ಪ್ರಮೋಟ್ ಆಗಬೇಕಾದರೆ ಒಂದನೇ ಸೆಮಿಸ್ಟರ್ ಪರೀಕ್ಷೆ ಪಾಸಾಗಿರಬೇಕು. 2ನೇ ಸೆಮಿಸ್ಟರ್‌ ಪ್ರಾಯೋಗಿಕ ಅಂಕ ನೀಡಿರಬೇಕು. ಆ ವರ್ಷದ ಶುಲ್ಕ ತುಂಬಿರಬೇಕು ಎನ್ನುತ್ತಾರೆ ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಂಕಪಟ್ಟಿ, ಪಾಸಿಂಗ್‌ ಹಾಗೂ ಘಟಿಕೋತ್ಸವ ಪ್ರಮಾಣಪತ್ರಗಳನ್ನು ಮುದ್ರಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಲಭ್ಯವಾಗಲಿದೆ’ ಎಂದು ಅವರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT