ಕಲಬುರಗಿ: ‘12ನೇ ಶತಮಾನದ ದಾರ್ಶನಿಕರಾದ ಬಸವಣ್ಣನವರ ಸಮಕಾಲಿನ ಶರಣರಾದ ನುಲಿಯ ಚಂದಯ್ಯ ಅವರ ಸಮಾಜ ಸುಧಾರಣೆ ಹಾಗೂ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು’ ಎಂದು ಶಾಸಕ ಎಂ.ವೈ.ಪಾಟೀಲ ಹೇಳಿದರು.
ಇಲ್ಲಿನ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಭಾನುವಾರ ಜಿಲ್ಲಾ ಕೊರಮ ಸಮಾಜದ ವತಿಯಿಂದ ಆಯೋಜಿಸಿದ್ದ ಕಾಯಕ ಶರಣ ನುಲಿಯ ಚಂದಯ್ಯ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
‘ನುಲಿಯ ಚಂದಯ್ಯ ಅವರ ಕಾಯಕ ಮತ್ತು ದಾಸೋಹದ ವಚನಗಳಲ್ಲಿ ಸಮ ಸಮಾಜ ನಿರ್ಮಾಣದ ತಾತ್ವಿಕ ಚಿಂತನೆಗಳು ಅಡಗಿವೆ. ಹೀಗಾಗಿ, ಅವರ ಜೀವನಾದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಕೊರಮ ಸಮಾಜ ಬಹಳ ಚಿಕ್ಕ ಸಮಾಜವಾಗಿದ್ದರೂ ಗ್ರಾಮೀಣ ಭಾಗದ ಕೃಷಿಯಲ್ಲಿ ತಮ್ಮದೆಯಾದ ಕೊಡುಗೆ ನೀಡುತ್ತಿದ್ದಾರೆ. ಅನ್ಯ ಸಮುದಾಯಗಳ ಜನರೊಂದಿಗೆ ಪ್ರೀತಿ, ವಿಶ್ವಾಸದೊಂದಿಗೆ ಜೀವನ ನಡೆಸುತ್ತಿದ್ದಾರೆ. ಸರ್ಕಾರದ ಸೌಕರ್ಯಗಳು ಹಾಗೂ ಶಿಕ್ಷಣ ಪಡೆದುಕೊಂಡು ಸಂಘಟಿತರಾಗಿ ಮುಂದೆಬರಬೇಕು’ ಎಂದರು.
ಸಾಹಿತಿ ಚಿ.ಸಿ.ನಿಂಗಣ್ಣ ಮಾತನಾಡಿ, ‘ಬಸವಣ್ಣನವರೊಂದಿಗೆ ಸಮಾಜ ಸುಧಾರಣೆಯಲ್ಲಿ ತೊಡಗಿಸಿಕೊಂಡಿದ್ದ ನುಲಿಯ ಚಂದಯ್ಯ ಅವರ ವಿಚಾರಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಶರಣರ ಚಿಂತನೆಗಳ ಹಾದಿಯಲ್ಲಿ ನಡೆದರೆ ಕುಟುಂಬ, ಸಮಾಜ, ರಾಜ್ಯ, ರಾಷ್ಟ್ರವು ಪ್ರಗತಿ ಸಾಧಿಸುತ್ತದೆ’ ಎಂದು ಹೇಳಿದರು.
ಡಿ.ಎನ್.ಪಾಟೀಲ ಉಪನ್ಯಾಸ ನೀಡಿದರು. ಸುಲಫಲ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಅದ್ಧೂರಿ ಮೆರವಣಿಗೆ: ನಗರದ ಜಗತ್ ವೃತ್ತದಿಂದ ಮಂದಿರದವರೆಗೆ ನುಲಿಯ ಚಂದಯ್ಯ ಅವರ ಭಾವಚಿತ್ರದ ಮೆರವಣಿಗೆ ವಾದ್ಯ ಮೇಳಗಳೊಂದಿಗೆ ಮಳೆಯಲ್ಲಿಯೂ ಅದ್ಧೂರಿಯಾಗಿ ಜರುಗಿತು. ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಸಣ್ಣನವರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಭೀಮರಾವ ಭಜಂತ್ರಿ, ಶಿವಶಂಕರ ಜಾಧವ, ಸಾಯಬಣ್ಣ ಭಜಂತ್ರಿ, ಶಾಂತಪ್ಪ ಜಾಧವ, ಪ್ರಕಾಶ ಭಜಂತ್ರಿ, ಸಿದ್ದಲಿಂಗ ಪಾಳಾ, ಶಿವಕುಮಾರ ಭಜಂತ್ರಿ, ಶರಣು, ರಮೇಶ ಜಾಧವ, ವಿಜಯಕುಮಾರ ಭಜಂತ್ರಿ, ಶ್ರೀಮಂತ ಜಾಧವ, ಮಂಜುಳಾ ಭಜಂತ್ರಿ, ಬಿ.ಎಚ್.ಭಜಂತ್ರಿ, ಸುಭಾಷಚಂದ್ರ ಭಜಂತ್ರಿ, ಸಿದ್ದು ಭಜಂತ್ರಿ, ಶ್ರೀಮಂತ ಜಾಧವ, ಮಲ್ಲಿಕಾರ್ಜುನ ಭಜಂತ್ರಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.