ಭಾನುವಾರ, ಏಪ್ರಿಲ್ 2, 2023
32 °C
ಮಂಗಗಳ ಸಾವಿಗೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಅಕ್ರೋಶ

ಖಾಲಿ ಟ್ಯಾಂಕ್‌ಗೆ ಬಿದ್ದು, ಹಸಿವಿನಿಂದ ಸತ್ತ 18 ಮಂಗಗಳ ಸಾಮೂಹಿಕ ಅಂತ್ಯಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಲಕರ್ಟಿ (ವಾಡಿ): ನೀರಿನ ಟ್ಯಾಂಕ್‌ನೊಳಗೆ ಬಿದ್ದು ಹಸಿವಿನಿಂದ ನರಳಿ ಮೃತಪಟ್ಟ 18 ಮಂಗಗಳ ಸಾಮೂಹಿಕ ಅಂತ್ಯಸಂಸ್ಕಾರ ಶನಿವಾರ ಸಂಜೆ ಅಧಿಕಾರಿಗಳ ಸಮ್ಮುಖ ನೆರವೇರಿಸಲಾಯಿತು.

ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಚಿಕ್ಕ ಚಿಕ್ಕ ಮರಿಗಳನ್ನು ಟ್ಯಾಂಕ್‌ನಿಂದ ಹೊರ ತೆಗೆಯುತ್ತಲೇ ದುರ್ವಾಸನೆ ಬೀರಲಾರಂಭಿಸಿತು. ಗೋಣಿ ಚೀಲದಲ್ಲಿ ತುಂಬಿಕೊಂಡು ಹೊರ ಬಂದಾಗ ಎಳೆಯ ಮಂಗಗಳ ಮೃತದೇಹಗಳನ್ನು ನೋಡಿ ಗ್ರಾಮಸ್ಥರು ಮರುಗಿದರು.

ಜನವಸತಿ ಪ್ರದೇಶದಲ್ಲಿ ನಿರುಪಯುಕ್ತ ಟ್ಯಾಂಕ್ ಕಳೆದ 5 ವರ್ಷಗಳಿಂದ ಇದ್ದು, ಪ್ರತಿದಿನವೂ ಸುತ್ತಲಿನ ನಿವಾಸಿಗಳು ಆತಂಕದಿಂದ ಕಾಲ ಕಳೆಯುತ್ತಿದ್ದಾರೆ ಎಂದು ಚಿತ್ತಾಪುರ ತಾಲ್ಲೂಕು ಪಂಚಾಯಿತಿ ಇಒ ನೀಲಗಂಗಾ ಬಬಲಾದ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಿರ್ಲಕ್ಷ್ಯದಿಂದ ಮಂಗಗಳು ದಾರುಣವಾಗಿ ಮೃತಪಟ್ಟಿವೆ. ಟ್ಯಾಂಕ್‌ ತೆರವು ಮಾಡದೇ ನಿರ್ಲಕ್ಷ್ಯ ವಹಿಸಿದ್ದೀರಿ. ಪ್ರಾಣಕ್ಕೆ ಸಂಚಕಾರ ತರುವ ಟ್ಯಾಂಕ್ ತೆರವುಗೊಳಿಸಬೇಕೆನ್ನುವ ಕನಿಷ್ಠ ಕಾಳಜಿ ನಿಮಗಿಲ್ಲವೇ? ಜನರು ಸತ್ತ ಬಳಿಕ ನೀವು ಜಾಗೃತವಾಗುತ್ತೀರಾ? ಜನರ ಪ್ರಾಣದ ಬಗ್ಗೆ ಕಾಳಜಿಯಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.

ಮಂಗಗಳು ಟ್ಯಾಂಕ್‌ನೊಳಗೆ ಬಿದ್ದು ನರಳಾಡುತ್ತಿವೆ ಎಂದು ಪಂಚಾಯತಿ ಆಡಳಿತಕ್ಕೆ ತಿಳಿಸಿದರೂ, ರಕ್ಷಣೆಗೆ ಸಂಪೂರ್ಣ ನಿರ್ಲಕ್ಷ ಮಾಡಲಾಗಿದೆ. ಮೃತಪಟ್ಟ ಮಂಗಗಳ ಶವಗಳ ಜೊತೆ ಹಲವು ಮಂಗಗಳು ಇದ್ದವು. ಅವುಗಳ ಆರೋಗ್ಯ ತಪಾಸಣೆ ನಡೆಸದೇ ಹಾಗೇ ಬಿಡಲಾಗಿದೆ. ಗ್ರಾಮದಲ್ಲಿ ಈಗ ಸಾಂಕ್ರಾಮಿಕ ರೋಗದ ಭೀತಿ ಶುರುವಾಗಿದೆ. ಏನು ಕ್ರಮ ತೆಗೆದುಕೊಳ್ಳುತ್ತೀರಿ. ಟ್ಯಾಂಕ್ ತೆರವುಗೊಳಿಸುವ ಕುರಿತು ಸ್ಪಷ್ಟವಾದ ಹೇಳಿಕೆ ನೀಡುವವರೆಗೂ ನಾವು ಬಿಡುವುದಿಲ್ಲ ಎಂದು ಗ್ರಾಮಸ್ಥರು ಹಾಗೂ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷ, ಶ್ರೀರಾಮಸೇನೆ ಮುಖಂಡರು ಬಿಗಿ ಪಟ್ಟು ಹಿಡಿದರು.

ಅರಣ್ಯ ವಲಯ ಅಧಿಕಾರಿ ವಿಜಯಕುಮಾರ್ ಬಡಿಗೇರ, ನೀರು ಸರಬರಾಜು ಇಲಾಖೆ ಎಇಇ ಹರೀಶ ರಾಠೋಡ, ಪಶುಪಾಲನ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಡಾ. ಎಸ್.ಡಿ ಅವಂಟಿ, ಡಾ.ಶಂಕರ್ ಕಣ್ಣಿ, ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಮುಖಂಡರಾದ ಗೌತಮ ಪರತೂರಕರ, ಶಿವಕುಮಾರ ಆಂದೋಲಾ, ಯುವ ಮುಖಂಡ ವಿಠಲ ನಾಯಕ, ಸಿದ್ದು ಮುಗುಟಿ, ನೀಲಕಂಠ ಸಂಗಶೆಟ್ಟಿ, ಮಲ್ಲಪ್ಪ ಚೌದರಿ, ಬಸವರಾಜ ಮೇಲಿನಮನಿ, ಗುರುನಾಥ ಮಣಿಗಿರಿ, ಈರಣ್ಣ ಇಸಬಾ, ಅಶೋಕ ಪವಾರ ವಾಡಿ,
ಶ್ರೀರಾಮ ಸೇನೆಯ ವಿಶ್ವ ತಳವಾರ ಇದ್ದರು. 

ಹಲಕರ್ಟಿ ಪಿಡಿಒಗೆ ನೋಟಿಸ್

ನೀರಿನ ಟ್ಯಾಂಕ್‌ನಲ್ಲಿ ಮಂಗ ಬಿದ್ದರೂ ಟ್ಯಾಂಕ್‌ ಸ್ವಚ್ಛಗೊಳಿಸದೇ ನಿರ್ಲಕ್ಷ್ಯ ತೋರಿಸಿದ್ದಕ್ಕೆ ಹಲಕರ್ಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿಲ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಚಿತ್ತಾಪುರ ತಾಲ್ಲೂಕು ಪಂಚಾಯಿತಿ ಇಒ ನೀಲಗಂಗಾ ಬಬಲಾದ ತಿಳಿಸಿದರು. ‌‌

ನೀರು ಸರಬರಾಜು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಇಒ, ಒಂದು ವಾರದಲ್ಲಿ ಟ್ಯಾಂಕ್ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ಸಾಂಕ್ರಾಮಿಕ ರೋಗ ಹರಡದಂತೆ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು. ಮೃತಪಟ್ಟ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಜೆಸಿಬಿ ಯಂತ್ರದ ಮೂಲಕ ಗುಂಡಿ ಅಗೆದು ಶವಗಳ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು