ಶನಿವಾರ, ಅಕ್ಟೋಬರ್ 19, 2019
28 °C
ಗುಲಬರ್ಗಾ ವಿ.ವಿ.ಯ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಪ್ರೊ.ಸಿದ್ದರಾಮಯ್ಯ

ವಚನ ರೂಪದ ಕಾಯಕ ಚಳವಳಿಗೆ ಹಲವು ಮುಖ

Published:
Updated:
Prajavani

ಕಲಬುರ್ಗಿ: ಸಂಸ್ಕೃತಿಗಳು ಏಕವ್ಯಕ್ತಿ ಕೇಂದ್ರೀಕೃತವಾಗಿದ್ದರೆ ವಚನ ರೂಪದ ಕಾಯಕ ಚಳವಳಿಗೆ ಹಲವು ಮುಖಗಳಿವೆ. ಆದರೆ, ಅದಕ್ಕೊಬ್ಬ ನಾಯಕ ಬಸವಣ್ಣ ಇದ್ದ. ಹೀಗಾಗಿ ಇದೊಂದು ಪ್ರಬಲ ಮಾಧ್ಯಮವಾಗಿ ನಮ್ಮ ಮುಂದಿದೆ. ಇದನ್ನು ಪುನಃ ವ್ಯಾಖ್ಯಾನ ಮಾಡಿಕೊಡುವ ಕೆಲಸ ಆಗಬೇಕಿದೆ ಎಂದು ಎಂದು ಲೇಖಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿ.ವಿ.ಯಲ್ಲಿ ಗುರುವಾರ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ  ನಡೆದ ವಚನ ಸಾಹಿತ್ಯದ ಪ್ರಸ್ತುತತೆ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ವಚನಗಳು ಅನುಭವ ಸಾಹಿತ್ಯ ಎನ್ನಲಿಕ್ಕೆ, ಕಾಯಕದ ಮುಖೇನ ಕಂಡುಕೊಂಡಿದ್ದ ಸತ್ಯಗಳನ್ನು ಕ್ರಾಂತಿಕಾರಕ ರೂಪದಲ್ಲಿ ಶರಣರು ಹೊರ ಹಾಕಿದ್ದಾರೆ. ಸೂಳೆ ಸಂಕವ್ವ ವೃತ್ತಿ ಸೂಚಕವಾಗಿ ಒಂದೇ ವಚನ ಬರೆದರೂ, ವಚನ ಸಾಹಿತ್ಯದಲ್ಲಿ ಅದು ಮೇರು ಸ್ಥಿತಿಯಲ್ಲಿದೆ. ಅದೇ ವೃತ್ತಿಯಲ್ಲಿದ್ದ ಶರಣೆ ಅಕ್ಕಮ್ಮ ಬಳಸಿದ ಪದ, ಹೇಳಿಕೊಂಡ ಕಾಯಕ ನಿಷ್ಠೆ ನಿಜಕ್ಕೂ ಶ್ರೇಷ್ಠವಾದದ್ದು’ ಎಂದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಮಾತನಾಡಿದರು. ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪ್ರೊ.ಬಿ.ವಿಜಯ ಮಾತನಾಡಿದರು.

ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ, ‘12ನೇ ಶತಮಾನದ ಬಸವಾದಿ ಶರಣರ ಚಳವಳಿಯನ್ನು ಚರಿತ್ರೆಯಾಗಿ ನೋಡಲಿಲ್ಲ. ಕೇವಲ ಅದನ್ನು ಸಾಹಿತ್ಯಕ್ಕೆ ಸೀಮಿತಗೊಳಿಸಲಾಗಿದೆ. ಅದರಂತೆಯೇ ಬುದ್ಧನನ್ನು ದೇಶದಿಂದ ಹೊರ ಹಾಕುವ ಮೂಲಕ ಸಮ ಸಮಾಜ ಕಟ್ಟುವಿಕೆಗೆ ತಿಲಾಂಜಲಿ ಇಡಲಾಯಿತು. ಅದರೊಂದಿಗೆ ಅಂಬೇಡ್ಕರ್ ಚಿಂತನೆಗಳನ್ನು ದಲಿತರಿಗೆ ಸೀಮಿತ ಮಾಡಲಾಯಿತು’ ಎಂದರು. 

ವಚನ ಸಾಹಿತ್ಯ ಇಂದಿನ ತಲ್ಲಣಗಳು ವಿಷಯ ಕುರಿತು ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಶ್ರೀಶೈಲ ನಾಗರಾಳ, ವಚನ ಸಾಹಿತ್ಯ ಮತ್ತು ಸಾಮಾಜಿಕ ಸೌಹಾರ್ದತೆ ವಿಷಯ ಕುರಿತು ಹಂಪಿ ಕನ್ನಡ ವಿ.ವಿ. ಕನ್ನಡ ಸಹ ಪ್ರಾಧ್ಯಾಪಕ ಪ್ರೊ.ವೆಂಕಟಗಿರಿ ದಳವಾಯಿ, ವಚನ ಸಾಹಿತ್ಯ ಮತ್ತು ಪರಿಸರ ಪ್ರಜ್ಞೆ ವಿಷಯ ಕುರಿತು ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಚೆನ್ನಬಸಪ್ಪ ಚಿಲ್ಕರಾಗಿ ಮಾತನಾಡಿದರು.

ಸಾಹಿತಿ ರಂಜಾನ್ ದರ್ಗಾ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರೊ.ಕುಪೇಂದ್ರ ಪಾಟೀಲ, ಸಹ ಪ್ರಾಧ್ಯಾಪಕರಾದ ಪ್ರೊ.ಅಪ್ಪಗೆರೆ ಸೋಮಶೇಖರ, ಪ್ರೊ.ಕಲ್ಯಾಣರಾವ ಪಾಟೀಲ, ಅಕ್ಕಲಕೋಟ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ.ಗುರುಲಿಂಗಪ್ಪ ಧಬಾಲೆ ಮಾತನಾಡಿದರು.

Post Comments (+)