ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ: ಮತ್ತೊಬ್ಬ ಆರೋಪಿ ವಶಕ್ಕೆ

Last Updated 12 ಮೇ 2022, 9:50 IST
ಅಕ್ಷರ ಗಾತ್ರ

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ, ಸಿಐಡಿ ಅಧಿಕಾರಿಗಳು ಗುರುವಾರ ಮತ್ತೊಬ್ಬ ಆರೋಪಿ ಶಿವಪ್ಪ ಆಲಮೇಲ್‌ ಎನ್ನುವವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದರು.

ಶಿವಪ್ಪ ಕೂಡ ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮದವರು. ಬ್ಲೂಟೂತ್‌ ಬಳಸಿ ಅಕ್ರಮ ಎಸಗಿದ ಆರೋಪದಡಿ ಜೈಲು ಸೇರಿರುವ ರುದ್ರಗೌಡ ಡಿ. ಪಾಟೀಲ ಅವರ ಗುಂಪಿನಲ್ಲಿ ಇವರೂ ಇದ್ದರು. ರುದ್ರಗೌಡ ಬಂಧನವಾದಾಗಿನಿಂದಲೂ ಶಿವಪ್ಪ ತಲೆಮರೆಸಿಕೊಂಡಿದ್ದರು. ಗುರುವಾರ ಬೆಳಿಗ್ಗೆ ಅವರ ಸುಳಿವು ಸಿಕ್ಕಿತ್ತು. ಅಕ್ರಮ ಎಸಗುವಲ್ಲಿ ಶಿವಪ‍್ಪ ಪಾತ್ರ ಏನು ಎಂಬ ಬಗ್ಗೆ ಖಚಿತಪಡಿಸಿಕೊಂಡ ಬಳಿಕ ಅವರನ್ನು ಬಂಧಿಸಬೇಕೆ, ಬೇಡವೆ ಎಂದು ನಿರ್ಧರಿಸುವುದಾಗಿ ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೀಗೆ ಸಿಐಡಿ ತಂಡ ಒಬ್ಬೊಬ್ಬರನ್ನೇ ಜಾಲಾಡುತ್ತಿರುವುದನ್ನು ಕಂಡು, ಇನ್ನೂ ಕೆಲವು ಅಭ್ಯರ್ಥಿಗಳು ಊರು ಬಿಟ್ಟು ಪರಾರಿಯಾಗಿದ್ದಾರೆ. ರುದ್ರಗೌಡ ಡಿ. ಪಾಟೀಲ ಹಾಗೂ ಮಂಜುನಾಥ ಮೇಳಕುಂದಿ ಸಂಪರ್ಕದಲ್ಲಿದ್ದ ಕೆಲವರಿಗೆ ತಂಡ ಹುಡುಕಾಟ ನಡೆಸಿದೆ. ಅಭ್ಯರ್ಥಿಗಳು ತಲೆಮರೆಸಿಕೊಂಡಿದ್ದಾರೆಂದರೆ ಸಹಜವಾಗಿ ಅನುಮಾನ ಹುಟ್ಟುತ್ತದೆ. ಹೀಗಾಗಿ, ಯಾರು ಅವರ ಸ್ಥಳದಲ್ಲಿದ್ದಾರೆ, ಯಾರು ಇಲ್ಲ ಎಂಬ ಅಂಶಗಳನ್ನೂ ಪರಿಗಣೆನೆಗೆ ತೆಗೆದುಕೊಳ್ಳುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಇನ್ನೂ ಸಿಗದ ಶಾಂತಿಬಾಯಿ:

ಹಗರದಣ ಪ್ರಮುಖ ಆರೋಪಿಗಳನ್ನು ಜೈಲಿಗಟ್ಟಿದ ಸಿಐಡಿ ಅಧಿಕಾರಿಗಳ ತಂಡಕ್ಕೆ, ಅಭ್ಯರ್ಥಿ ಶಾಂತಿಬಾಯಿ ಮಾತ್ರ ಇನ್ನೂ ತಲೆನೋವಾಗಿದ್ದಾರೆ. ಏ. 10ರಂದೇ ಶಾಂತಿಬಾಯಿ ಹಾಗೂ ಅವರ ಪತಿ ಬಸ್ಯನಾಯ್ಕ ತಲೆಮರೆಸಿಕೊಂಡಿದ್ದಾರೆ. ಇದೂವರೆಗೆ ಪ್ರಕರಣದಲ್ಲಿ ಹೆಸರು ಕೇಳಿಬಂದವರಲ್ಲಿ ಏಕಮಾತ್ರ ಮಹಿಳಾ ಅಭ್ಯರ್ಥಿ ಇವರು.

ಸೇಡಂ ತಾಲ್ಲೂಕಿನ ಕೋನಪುರ ತಾಂಡಾಕ್ಕೆ ಏಪ್ರಿಲ್ 10ರಂದು ತೆರಳಿದ್ದ ತನಿಖಾಧಿಕಾರಿಗಳು ವಿಚಾರಣೆಗೆ ತಮ್ಮೊಂದಿಗೆ ಬರುವಂತೆ ಶಾಂತಿಬಾಯಿ ಹಾಗೂ ಅವರ ಪತಿ ಬಸ್ಯನಾಯ್ಕಗೆ ಸೂಚಿಸಿದ್ದರು. ಬೇರೆ ಕಡೆ ಹೋಗಿರುವುದಾಗಿ ತಿಳಿಸಿದ ಬಸ್ಯನಾಯ್ಕ ಆ ನಂತರ ಪತ್ನಿಯನ್ನು ಕರೆದುಕೊಂಡು ಪರಾರಿಯಾದರು. ಇವರು ಪರಾರಿಯಾಗಲು ಸೂಚಿಸಿದ್ದ, ಆರೋಪಿ ಜ್ಯೋತಿ ಪಾಟೀಲ ಕೂಡ ಬಂಧಿತರಾಗಿದ್ದಾರೆ. ಆದರೆ, ಶಾಂತಿಬಾಯಿ ಮಾತ್ರ ಅಧಿಕಾರಿಗಳ ಕಣ್ಣು ತಪ್ಪಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT