ಕಲಬುರಗಿ: ಪಿಎಂ ಕುಸುಮ್ ಯೋಜನೆಯಡಿ ಸೋಲಾರ್ ಪಂಪ್‌ಸೆಟ್ ಖರೀದಿ ಮೇಲೆ ₹2 ಲಕ್ಷ ಸಬ್ಸಿಡಿ ಕೊಡಿಸುವುದಾಗಿ ನಂಬಿಸಿ ರೈತರೊಬ್ಬರಿಗೆ ₹2.68 ಲಕ್ಷ ವಂಚಿಸಲಾಗಿದ್ದು, ಈ ಸಂಬಂಧ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ(ಸೆನ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೀರೇಂದ್ರ ಪಾಟೀಲ ನಗರದ ರಾಮಚಂದ್ರ ಗಂಧೆನವರ್ ಎಂಬುವವರು ದೂರು ನೀಡಿದ್ದಾರೆ. ಬೆಂಗಳೂರು ಮೂಲದ ಪವನ ಕುಮಾರ, ಸೌರಭ ಕುಮಾರ ಮತ್ತು ಸುಶೀಲ ಕುಮಾರ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ರಾಮಚಂದ್ರ, ಸಾಮಾಜಿಕ ಜಾಲತಾಣದಲ್ಲಿ ಪಿಎಂ ಕುಸುಮ್ ಯೋಜನೆಯಡಿ ಸೋಲಾರ್ ಪಂಪ್‌ಸೆಟ್ ಖರೀದಿಗೆ ₹2 ಲಕ್ಷ ಸಬ್ಸಿಡಿ ನೋಡಿ, ಪವನ ಕುಮಾರ ಎಂಬುವವರಿಗೆ ಕರೆ ಮಾಡಿದರು. ವಾಟ್ಸ್‌ಆ್ಯಪ್ ಮೂಲಕ ಆಧಾರ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆಯಂತಹ ದಾಖಲೆ ಪಡೆದರು. ನೋಂದಣಿ ಶುಲ್ಕ, ಜಿಎಸ್‌ಟಿ, ಸಾರಿಗೆ ವೆಚ್ಚವೆಂದು ₹1.28 ಲಕ್ಷ ಡಿಜಿಟಿಲ್ ಮೂಲಕ ಪಾವತಿಸಿಕೊಂಡರು. ಮತ್ತೆ ಕರೆ ಮಾಡಿದ ಪವನ, ಸಾರಿಗೆ, ಬಿಡಿ ಭಾಗಗಳ ವೆಚ್ಚಕ್ಕಾಗಿ ₹87,900 ಜಮಾ ಮಾಡಿಕೊಂಡರು. ಪದೇ ಪದೇ ಹಣ ಹಾಕುವಂತೆ ಕರೆ ಮಾಡಿದಾಗ ಅನುಮಾನ ಬಂದು ವೆಬ್‌ಸೈಟ್‌ನಲ್ಲಿ ಯೋಜನೆ ಸಂಬಂಧ ಪರಿಶೀಲನೆ ನಡೆಸಿದಾಗ ಸುಶೀಲ ಕುಮಾರ ಹೆಸರಿನ ಮೊಬೈಲ್ ಸಂಖ್ಯೆ ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಸುಶೀಲ ಎಂಬಾತನಿಗೆ ಕರೆ ಮಾಡಿದ ರಾಮಚಂದ್ರ ಅವರು, ಪವನ ಮತ್ತು ಸೌರಭ ಎಸಗಿದ್ದ ವಂಚನೆ ತಿಳಿಸಿದರು. ಆ ಇಬ್ಬರು ಕುಸಮ್ ಯೋಜನೆಯ ಏಜೆಂಟರ್‌ಗಳು. ಕಮಿಷನ್ ರೂಪದಲ್ಲಿ ಹಣ ಪಡೆದಿದ್ದು, ವಾಪಸ್ ಕೊಡಿಸಲು ಶುಲ್ಕ ಆಗುತ್ತದೆ ಎಂದು ನಂಬಿಸಿದ ಸುಶೀಲ ಎಂಬಾತನೂ ಹಂತ– ಹಂತವಾಗಿ ₹52,410 ಪಡೆದು ಮೋಸ ಮಾಡಿದ. ಈ ಮೂವರು ಸೇರಿ ರಾಮಚಂದ್ರ ಅವರಿಗೆ ₹2.68 ಲಕ್ಷ ವಂಚನೆ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.