ಬುಧವಾರ, ನವೆಂಬರ್ 20, 2019
25 °C
ಬೆಂಗಳೂರಿನ ಮಿಂಟೊ ಕಣ್ಣಿನ ಆಸ್ಪತ್ರೆ ವೈದ್ಯರ ಮೇಲಿನ ಹಲ್ಲೆಗೆ ಖಂಡನೆ

ಕಲಬುರ್ಗಿ| ಖಾಸಗಿ ಆಸ್ಪತ್ರೆಗಳ ಬಹುತೇಕ ಒ‍ಪಿಡಿಗಳು ಬಂದ್‌

Published:
Updated:
Prajavani

ಕಲಬುರ್ಗಿ: ಬೆಂಗಳೂರಿನ ಮಿಂಟೊ ಕಣ್ಣಿನ ಆಸ್ಪತ್ರೆ ವೈದ್ಯರ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಹಲ್ಲೆ ನಡೆಸಿದ ಪ್ರಕರಣ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ನೀಡಿದ್ದ ಕರೆಯ ಮೇರೆಗೆ ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗ (ಒಪಿಡಿ)ಗಳನ್ನು ಬಂದ್‌ ಮಾಡಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ನಗರದಲ್ಲಿರುವ ಬಸವೇಶ್ವರ ಆಸ್ಪತ್ರೆ, ಕೆಬಿಎನ್, ಯುನೈಟೆಡ್, ಕಾಮರಡ್ಡಿ ಟ್ರಾಮಾ ಕೇರ್, ಚಿರಾಯು, ಏಜಲ್ ಟ್ರೀ, ಸಿದ್ದರಾಮೇಶ್ವರ ಐ ಹಾಸ್ಟಿಟಲ್, ಧನ್ವಂತರಿ, ಪಸ್ತಾಪುರ ಮೊದಲಾದ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಪ್ರತಿಭಟನೆ ನಡೆಸಿದರು. ಕೆಲವು ಆಸ್ಪತ್ರೆಗಳಲ್ಲಿ ಹೊರರೋಗಿಗಳ (ಒಪಿಡಿ) ವಿಭಾಗ ಬಂದ್ ಮಾಡಲಾಗಿತ್ತು.

ಐಎಂಎ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ವೈದ್ಯರು ಪ್ರತಿಭಟನೆಯನ್ನು ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿ, ಮಿಂಟೊ ಆಸ್ಪತ್ರೆ ವೈದ್ಯರ ಮೇಲೆ ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸಲು ಕ್ರಮ ಕೈಗೊಳ್ಳಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು, ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಡೆಂಗಿ, ವೈರಲ್ ಇನ್ನಿತರ ರೋಗಗಳು ಹೆಚ್ಚಿರುವುದರಿಂದ ರೋಗಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಒಪಿಡಿಯನ್ನು ಬಂದ್ ಮಾಡದೇ ಕಪ್ಪು ಪಟ್ಟಿಯನ್ನು ಧರಿಸಿಕೊಂಡು ಸೇವೆ ನೀಡಲಾಗುತ್ತಿದೆ. ಈ ತೆರನಾಗಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಪ್ರತಿಭಟನೆ ನಿರತ ವೈದ್ಯ ಡಾ.ಸಿದ್ದೇಶ್ವರ ಹೇಳಿದರು.

ಆದಾಗ್ಯೂ, ಯುನೈಟೆಡ್‌ ಹಾಗೂ ಕೆಬಿಎನ್‌ ಆಸ್ಪತ್ರೆಗಳ ಒಪಿಡಿಗಳು ಬಂದ್‌ ಆಗಿದ್ದವು. ಇದರಿಂದಾಗಿ ಕೆಲವರು ಜಿಲ್ಲಾ ಆಸ್ಪತ್ರೆಯತ್ತ ನಡೆದರೆ ಮತ್ತೆ ಕೆಲವರು ಆಸ್ಪತ್ರೆಗಳ ತೀವ್ರ ನಿಗಾ ಘಟಕಕ್ಕೆ ತೆರಳಿ ಅಲ್ಲಿ ಪರಿಸ್ಥಿತಿಯನ್ನು ವಿವರಿಸಿ ಚಿಕಿತ್ಸೆ ಪಡೆದರು. ಸಂಜೆಯ ಬಳಿಕ ಕೆಲ ಒಪಿಡಿಗಳು ಆರಂಭವಾದವು.

ಅಪಘಾತ, ಪ್ರಸೂತಿ, ತುರ್ತುಚಿಕಿತ್ಸೆ ಹಾಗೂ ಒಳರೋಗಿಗಳ ವಿಭಾಗದಲ್ಲಿ ಎಂದಿನಂತೆ ಚಿಕಿತ್ಸೆ ಲಭ್ಯವಾಯಿತು. ಜಿಲ್ಲಾ ಆಸ್ಪತ್ರೆಯ ಒಪಿಡಿ ವಿಭಾಗದ ಮುಂದೆ ಬೆಳಿಗ್ಗೆಯಿಂದಲೇ ಜನಜಂಗುಳಿ ಇತ್ತು. 

ಜಿಮ್ಸ್‌ನಲ್ಲಿ ಕೊಂಚ ದಟ್ಟಣಿ: ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್‍ಗೆ ಕರೆ ನೀಡಿದ್ದರಿಂದ ನಗರದ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್) ಆಸ್ಪತ್ರೆಯಲ್ಲಿ ಒಪಿಡಿ ವಿಭಾಗದಲ್ಲಿ ಚೀಟಿಗಳನ್ನು ಪಡೆದುಕೊಳ್ಳಲು ರೋಗಿಗಳ ಉದ್ದನೆಯ ಸಾಲು ಕಂಡು ಬಂದಿತು. ಜಿಮ್ಸ್ ವೈದ್ಯರನ್ನು ಹೆಚ್ಚುವರಿ ಸಮಯ ಕೆಲಸಕ್ಕೆ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್‌ ಸಿ.ಆರ್‌. ನಿಯೋಜಿಸಿದ್ದರು. ಹೀಗಾಗಿ ರೋಗಿಗಳಿಗೆ ತೊಂದರೆಯಾಗಲಿಲ್ಲ.

ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಐಎಂಎ ಅಧ್ಯಕ್ಷ ಅಮೋಲ್ ಪತಂಗೆ, ಕಾರ್ಯದರ್ಶಿ ಡಾ.ಸಂಜನಾ ತೆಲ್ಲೂರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಡಾ.ಲವಕುಮಾರ ಲೋಯಾ, ಡಾ.ಸಿದ್ದೇಶ್ವರ ಸಿರವಾರ, ವಿಜಯ ಕಪ್ಪಿಕೇರಿ, ಡಾ.ಗುರುಲಿಂಗಪ್ಪ, ಡಾ.ರಾಹುಲ್ ಮಂದಕನಳ್ಳಿ, ಡಾ.ಅಜಯ ಗುಡೂರ, ಡಾ.ಸಂತೋಷ ಪಾವಲೆ, ಡಾ.ವಿನೋದ, ಡಾ.ಮುನಾವರ್, ಡಾ.ಶಾಂತಲಿಂಗ ನಿಗ್ಗುಡಗಿ, ಡಾ.ನಂದೀಶ, ಡಾ.ಹತ್ತಿ, ಡಾ.ಸುಚಿತ್ರಾ ದುರಗಿ, ಡಾ.ವನಿತಾ ಧಾರವಾಡ, ಡಾ.ಹೇಮಾ ಸಿಂಹಾಸನೆ, ಡಾ.ರೂಪಾ ಪಾಟೀಲ ಪಾಲ್ಗೊಂಡಿದ್ದರು. 

ಪ್ರತಿಕ್ರಿಯಿಸಿ (+)