ಕಲಬುರಗಿ: ಎಪಿಎಂಸಿ ಕಾಯ್ದೆಯ ತಿದ್ದುಪಡಿ ಸಣ್ಣ, ಅತಿ ಸಣ್ಣ ರೈತರ ವಿರೋಧಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ತಳವಾರ ಸಾಬಣ್ಣಾ ಅವರು ವಿಧಾನ ಮಂಡಲ ಅಧಿವೇಶನದಲ್ಲಿ ವಿರೋಧಿಸಿದ್ದಾರೆ.
2020ರಲ್ಲಿ ಎಪಿಎಂಸಿ ಕಾಯ್ದೆಯನ್ನು ಜಾರಿಗೆ ತಂದು ಸಣ್ಣ, ಅತಿ ಸಣ್ಣ ರೈತರು ತಾವು ಬೆಳೆದ ಬೆಳೆಯನ್ನು ಸ್ವತಂತ್ರವಾಗಿ ಮಾರಾಟ ಮಾಡುವ ಅವಕಾಶವನ್ನು ಒದಗಿಸಲಾಗಿತ್ತು. ಈ ಕಾಯ್ದೆಯಿಂದ ರೈತರು ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಪಡೆಯುತ್ತಿದ್ದರು ಎಂದು ಹೇಳಿದ್ದಾರೆ.
ರೈತನೊಂದಿಗೆ ಮಾನ್‌ಸೂನ್ ಮತ್ತು ಮಾರ್ಕೆಟ್ ಎರಡೂ ತೊಂದರೆ ನೀಡುತ್ತಿವೆ. ಇಂದಿಗೂ ರೈತರಿಗೆ ಉತ್ತಮ ಮಾರುಕಟ್ಟೆ ಒದಗಿಸಲು ವಿಫಲರಾಗಿದ್ದೇವೆ. ಸಣ್ಣ, ಅತಿ ಸಣ್ಣ ರೈತರು ಅಸಂಘಟಿತ, ಅಸಹಾಯಕರಾಗಿ ತಾವು ಮಾಡಿರುವ ಸಾಲಕ್ಕಾಗಿ ತಮ್ಮ ಬೆಳೆಯನ್ನು ಮಾರುತ್ತಾರೆ. ಬಿತ್ತುವಾಗ ಬೀಜ, ಗೊಬ್ಬರ ಪಡೆಯಲು ಸಾಲ ತೆಗೆದುಕೊಂಡು ಬಿತ್ತನೆಯಾದ ನಂತರ ಬೆಳೆಯನ್ನು ಅವರಿಗೆ ಮಾರಾಟ ಮಾಡುತ್ತಾರೆ. ಎಪಿಎಂಸಿಯಲ್ಲಿ ಸಣ್ಣ ರೈತರು ತಮ್ಮ ಉತ್ಪಾದನೆಯನ್ನು ತಂದು ಮಾರಾಟ ಮಾಡುವುದಿಲ್ಲ. ಕಾರಣ, ಸಾರಿಗೆ ವೆಚ್ಚ, ಮಧ್ಯವರ್ತಿಗಳು, ದಲ್ಲಾಳಿಗಳು ಮತ್ತು ವ್ಯಾಪಾರಿಗಳ ಹಾವಳಿಯಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದಿದ್ದಾರೆ.
ಮಧ್ಯಮ, ದೊಡ್ಡ ರೈತರು ಎಪಿಎಂಸಿಯಲ್ಲಿ ಬೆಳೆಯನ್ನು ಮಾರಾಟ ಮಾಡುತ್ತಾರೆ. ಪ್ರಸ್ತುತ ತಿದ್ದುಪಡಿ ಮಾಡುತ್ತಿರುವ ಎಪಿಎಂಸಿ ಕಾಯ್ದೆ ಕೇವಲ ಮಧ್ಯವರ್ತಿಗಳು, ದಲ್ಲಾಳಿಗಳು ಮತ್ತು ವ್ಯಾಪಾರಿಗಳಿಗೆ ಹಾಗೂ ಎಪಿಎಂಸಿ ಸಮಿತಿಯ ರಾಜಕೀಯ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡಲು ತರಲಾಗುತ್ತಿದೆ. ಈ ಕಾಯ್ದೆಯಿಂದ ಸಣ್ಣ, ಅತಿ ಸಣ್ಣ ರೈತರ ಸ್ವಾತಂತ್ರ‍್ಯ ಕುಸಿದುಕೊಂಡು ಅವರನ್ನು ದಲ್ಲಾಲಿಗಳ ಕಪಿಮುಷ್ಟಿಗೆ ತಳ್ಳುವ ಆತಂಕವಿದೆ. ತಿದ್ದುಪಡಿ ಕಾಯ್ದೆಯನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಡಾ. ತಳವಾರ ಸಾಬಣ್ಣಾ ಅವರು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ ಅವರನ್ನು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.