ಪಂಚಾಂಗದ ಅನ್ವಯ ಆಡಳಿತ ನಡೆಸುತ್ತೀರಾ?: ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್

7
‘ನಮ್ಮ ನಡೆ ಸಂವಿಧಾನದೆಡೆ’ ಕಾರ್ಯಾಗಾರ; ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ

ಪಂಚಾಂಗದ ಅನ್ವಯ ಆಡಳಿತ ನಡೆಸುತ್ತೀರಾ?: ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್

Published:
Updated:
Deccan Herald

 ಕಲಬುರ್ಗಿ: ‘ಸಂವಿಧಾನ ವಿರೋಧಿಸಿದರೆ ದೇಶದ ಐಕ್ಯತೆ, ಸಮಗ್ರತೆ, ಬಹುತ್ವ, ಜಾತ್ಯತೀತತೆ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯವನ್ನು ವಿರೋಧಿಸಿದಂತೆ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅಭಿಪ್ರಾಯಪಟ್ಟರು.

ನಗರದ ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆಸಿಸಿಐ) ಸಭಾಂಗಣದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶ, ಹೈದರಾಬಾದ್ ಕರ್ನಾಟಕ ಕಾಲೇಜು ಅಧ್ಯಾಪಕರ ಸಂಘ ಮತ್ತು ಪ್ರಜ್ಞಾ ಕಾನೂನು ಸಲಹಾ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ನಮ್ಮ ನಡೆ ಸಂವಿಧಾನದೆಡೆ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಈಗಿರುವ ಸಂವಿಧಾನಕ್ಕಿಂತ ಉತ್ತಮವಾದ ಪರ್ಯಾಯವನ್ನು ನೀಡದೆ, ಜನರೊಂದಿಗೆ ಚರ್ಚೆ ಮಾಡದೆ, ಸಂವಾದ ನಡೆಸದೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳಿಕೆ ನೀಡುತ್ತಾರೆ. ಹಾಗಾದರೆ ಪಂಚಾಂಗದ ಅನ್ವಯ ದೇಶ ಆಳುತ್ತೀರಾ, ಸರ್ಕಾರ ನಡೆಸುತ್ತೀರಾ’ ಎಂದು ಪ್ರಶ್ನಿಸಿದರು.

‘ಸಂವಿಧಾನವನ್ನು ಓದದೆ, ಅರ್ಥಮಾಡಿಕೊಳ್ಳದೆ ಅದರ ಪ್ರತಿಯನ್ನು ಸುಡುವುದು ನಾಗರಿಕ ಸಮಾಜದ ಪ್ರವೃತ್ತಿಯಲ್ಲ. ನನಗೂ ಭಗವದ್ಗೀತೆ, ಕುರಾನ್‌ನಲ್ಲಿರುವ ಕೆಲವು ಅಂಶಗಳು ಇಷ್ಟವಾಗಿಲ್ಲ. ಆದರೆ, ಎಂದೂ ಅದನ್ನು ಸುಡುವ ಹೀನ ಕೃತ್ಯಕ್ಕೆ ಇಳಿದಿಲ್ಲ’ ಎಂದರು.

‘ಆರ್ಥಿಕ ಭಯೋತ್ಪಾದನೆ, ಸಾಮಾಜಿಕ ಭಯೋತ್ಪಾದನೆ, ಅಘೋಷಿತ ತುರ್ತು ಪರಿಸ್ಥಿತಿ ಇವು ದೇಶದ ಪ್ರಮುಖ ಸಮಸ್ಯೆಗಳು. ನಾವು ಏನು ತಿನ್ನಬೇಕು, ಯಾವ ಬಟ್ಟೆ ಹಾಕಿಕೊಳ್ಳಬೇಕು, ಏನು ಮಾತನಾಡಬೇಕು ಎಂಬುದನ್ನು ಬೇರೆಯವರು ನಿರ್ಧರಿಸುತ್ತಿದ್ದಾರೆ. ಅವರಾರೂ ಚರ್ಚೆ, ಸಂವಾದಗಳಿಗೆ ಬರುತ್ತಿಲ್ಲ. ಹೀಗಾಗಿಯೇ, ಗೌರಿ ಲಂಕೇಶ್, ಎಂ.ಎಂ.ಕಲಬುರ್ಗಿ, ಗೋವಿಂದ ಪಾನ್ಸರೆ, ನರೇಂದ್ರ ದಾಭೋಲ್ಕರ್‌ ಅವರನ್ನು ಕಳೆದುಕೊಳ್ಳಬೇಕಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.

‘ಸರ್ಕಾರಗಳು ಸ್ವಾರ್ಥ, ಪಕ್ಷಪಾತ, ನಿರಂಕುಶವಾದ ಬಿಟ್ಟು ಕೆಲಸ ಮಾಡಲು ಸಂವಿಧಾನದ ಅವಶ್ಯಕತೆ ಇದೆ’ ಎಂದರು.

‘ವಿಶ್ವದ 194 ರಾಷ್ಟ್ರಗಳು ತಮ್ಮದೇ ಆದ ಪ್ರತ್ಯೇಕ ಸಂವಿಧಾನವನ್ನು ಹೊಂದಿವೆ. ಅದರಲ್ಲಿ ದೊಡ್ಡ ಲಿಖಿತ ಸಂವಿದಾನ ನಮ್ಮ ದೇಶದ್ದು. ದೇಶ ಗಣರಾಜ್ಯವಾದ ನಂತರ ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕಾ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದೇವೆ. ಆದರೂ ಕೆಲವು ಸಮಸ್ಯೆಗಳು ಪರಿಹಾರವಾಗದೆ ಉಳಿದಿವೆ’ ಎಂದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಎಂ.ಮಹೇಶ್ವರಯ್ಯ ಮಾತನಾಡಿ, ‘ನಮ್ಮ ಘನತೆ, ಆತ್ಮಗೌರವವನ್ನು ಎತ್ತಿ ಹಿಡಿಯುವುದು ಸಂವಿಧಾನ. ಅದರ ಬಗ್ಗೆ ಎಲ್ಲರೂ ತಿಳಿದುಕೊಳ್ಳುವುದು ಅಗತ್ಯ’ ಎಂದರು.

ಪ್ರಜ್ಞಾ ಕಾನೂನು ಸಲಹಾ ಸಮಿತಿ ಅಧ್ಯಕ್ಷೆ ಡಾ.ಮೀನಾಕ್ಷಿ ಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಮಹಿಳೆಯರು, ಅಲ್ಪಸಂಖ್ಯಾತರು, ಕೂಲಿಕಾರ್ಮಿಕರು ಮುಕ್ತವಾಗಿ ಮಾತನಾಡುವ ಸ್ವಾತಂತ್ರ್ಯ ಸಿಕ್ಕಿದೆ ಎಂದರೆ ಅದು ಸಂವಿಧಾನದಿಂದ’ ಎಂದರು.

‘ಸಂವಿಧಾನದ ಕುರಿತು ತಪ್ಪು ತಿಳಿವಳಿಕೆ ಮೂಡಿಸುವ ಷಡ್ಯಂತ್ರ ನಡೆದಿದೆ. ಜನರಲ್ಲಿ ಅರಿವು ಮೂಡಿದಾಗ ಮಾತ್ರ ದೇಶ ವಿರೋಧಿ ಶಕ್ತಿಗಳ ವಿರುದ್ಧ ಹೋರಾಟ ನಡೆಸಲು ಸಾಧ್ಯ’ ಎಂದು ಹೇಳಿದರು.

ಎಚ್‌ಕೆಸಿಸಿಐ ಅಧ್ಯಕ್ಷ ಅಮರಾಥ ಪಾಟೀಲ ಮಾತನಾಡಿದರು. ಪ್ರಜ್ಞಾ ಕಾನೂನು ಸಲಹಾ ಸಮಿತಿ ಕಾರ್ಯದರ್ಶಿ ನೀಲಾ ಕೆ., ಸಂಪನ್ಮೂಲ ವ್ಯಕ್ತಿ ಡಾ.ವಿಠ್ಠಲ ಭಂಡಾರಿ, ಗುಲಬರ್ಗಾ ವಿಶ್ವವಿದ್ಯಾಲಯದ ಎನ್ಎಸ್‌ಎಸ್ ಸಂಯೋಜನಾಧಿಕಾರಿ ಡಾ.ರಮೇಶ ಲಂಡನಕರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !