ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ಸೇವೆ ನನಗೆ ತೃಪ್ತಿ ತಂದಿದೆ: ವಿ.ವಿ. ಜ್ಯೋತ್ಸ್ನಾ

ನಿರ್ಗಮಿತ ಜಿಲ್ಲಾಧಿಕಾರಿಗೆ ಬೀಳ್ಕೊಡುಗೆ
Last Updated 26 ಜನವರಿ 2022, 2:49 IST
ಅಕ್ಷರ ಗಾತ್ರ

ಕಲಬುರಗಿ: ‘ಕೋವಿಡ್ ಎರಡನೇ ಅಲೆ ಹಾಗೂ ಶತಮಾನ ಕಂಡರಿಯದ ನೆರೆ ಹಾವಳಿಯಂತಹ ಸಂಕಷ್ಟದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅಧಿಕಾರಿಗಳ ಸಹಕಾರದಿಂದ ಕಳೆದ ಒಂದು ವರ್ಷ ಐದು ತಿಂಗಳ ಸೇವೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಕ್ಕೆ ತೃಪ್ತಿ ಇದೆ’ ಎಂದು ನಿರ್ಗಮಿತ ಜಿಲ್ಲಾಧಿಕಾರಿ‌ ವಿ.ವಿ.ಜ್ಯೋತ್ಸ್ನಾ ತಿಳಿಸಿದರು.

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿ ವರ್ಗಾವಣೆಯಾದ ಪ್ರಯುಕ್ತ ಜಿಲ್ಲಾಡಳಿತದಿಂದ ಮಂಗಳವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಸೇಡಂ ಉಪ ವಿಭಾಗಾಧಿಕಾರಿಯಾಗಿ ನನ್ನ ಸಾರ್ವಜನಿಕ ಸೇವೆ ಕಲಬುರಗಿ ನೆಲದಿಂದಲೇ ಆರಂಭವಾಗಿದೆ. ಇದೀಗ ಜಿಲ್ಲೆಯಲ್ಲಿ ಒಂದೂವರೆ ವರ್ಷ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ನನಗೆ ವಿಶೇಷ ಅನುಭವ ನೀಡಿದೆ’ ಎಂದರು.

‘ಕೋವಿಡ್ ಸಂದರ್ಭದಲ್ಲಿ ಹಗಲು, ರಾತ್ರಿ ಎನ್ನದೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಾಂಘಿಕವಾಗಿ ಕಾರ್ಯ ನಿರ್ವಹಿದ್ದರಿಂದಲೇ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಯಿತು. ಈ ಅವಧಿಯಲ್ಲಿ ಹಿಂದಿನ ಜಿಲ್ಲಾ ಪಂಚಾಯಿತಿ ಸಿಇಒ ಡಾ.ರಾಜಾ ಪಿ, ಇಂದಿನ ಸಿಇಒ ಡಾ.ದಿಲೀಷ್ ಶಶಿ ಅವರ ಸಹಕಾರವೂ ಸಿಕ್ಕಿತ್ತು’ ಎಂದು ಹೇಳಿದರು.

‘ವಿಭಾಗೀಯ ಸ್ಥಾನವಾದ ಕಲಬುರಗಿಯಲ್ಲಿ ಅನೇಕ ಹಿರಿಯ ಐಎಎಸ್, ಐಪಿ‌ಎಸ್ ಅಧಿಕಾರಿಗಳಿದ್ದಾರೆ. ನೆರೆ ಹಾವಳಿ, ಕೋವಿಡ್ ನಿರ್ವಹಣೆಯಲ್ಲಿ ಜಿಲ್ಲಾಡಳಿತದೊಂದಿಗೆ ಸೇರಿ ಇವರೆಲ್ಲರೂ ಜನರ ಸಂಕಷ್ಟಕ್ಕೆ ಮಿಡಿದಿದ್ದಾರೆ. ಇದು ಅವರ ವೃತ್ತಿಪರ ಬದ್ಧತೆಗೆ ಸಾಕ್ಷಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ನಾನು ಅಧಿಕಾರ ವಹಿಸಿಕೊಂಡಾಗ ವಿವಿಧ ಕ್ಷೇತ್ರದಲ್ಲಿ ಜಿಲ್ಲೆ ಕೊನೆಯ ಐದು ಸ್ಥಾನದಲ್ಲಿತ್ತು. ಇದೀಗ ಅಗ್ರ 5ರಲ್ಲಿದ್ದು, ಇದಕ್ಕೆ ಜಿಲ್ಲೆಯ ಅಧಿಕಾರಿ, ಸಿಬ್ಬಂದಿ ತಂಡದ ರೂಪದಲ್ಲಿ ಕಾರ್ಯನಿರ್ವಹಿಸುವ ಗುಣವೇ ಕಾರಣ. ನೂತನ ಜಿಲ್ಲಾಧಿಕಾರಿಗಳಿಗೂ ಇದೇ ರೀತಿಯ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಮಾತನಾಡಿ, ಜ್ಯೋತ್ಸ್ನಾ ಅವರು ನಮಗೆ ಶಿಕ್ಷಕಿ ಇದ್ದಂತೆ. ಮಕ್ಕಳಿಗೆ ಟೀಚರ್ ಎಷ್ಟೇ ಕಠಿಣ ಅನಿಸಿದ್ದರೂ ಅವರಿಗೆ ಶಿಕ್ಷಕರೇ ಸ್ಫೂರ್ತಿಯಾಗಿರುತ್ತಾರೆ. ಹಾಗೆಯೇ ಕ್ಲಿಷ್ಟಕರ ಸಮಯದಲ್ಲಿ ಶೀಘ್ರ ಪರಿಹಾರ ಕಂಡುಕೊಳ್ಳುತ್ತಿದ್ದ ಜ್ಯೋತ್ಸ್ನಾ ಅವರು ನಮಗೆ ಮಾದರಿಯಾಗಿದ್ದಾರೆ’ ಎಂದರು.

ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ಮಾತನಾಡಿ, ಪ್ರವಾಹ ಸಂದರ್ಭದಲ್ಲಿ ಬೆಳಿಗ್ಗೆ 6ಕ್ಕೆ ಅಫಜಲಪೂರಕ್ಕೆ ತೆರಳುತ್ತಿದ್ದೆವು. ಹಗಲು ರಾತ್ರಿ ಎನ್ನದೇ ಗ್ರಾಮಗಳಿಗೆ ಭೇಟಿ, ಕಾಳಜಿ ಕೇಂದ್ರಕ್ಕೆ ಭೇಟಿ ಹೀಗೆ ಜ್ಯೋತ್ಸ್ನಾ ಅವರು ದಣಿವರಿಯದೆ ಕೆಲಸ ನಿರ್ವಹಿಸಿದ್ದಾರೆ. ಕೋವಿಡ್ ಪರಿಸ್ಥಿತಿ ಸಮರ್ಥವಾಗಿ ಎದುರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ, ಸಹಾಯಕ ಆಯುಕ್ತೆ ಮೋನಾ ರೋತ್,ಜಿಲ್ಲಾ ಬಿಸಿಎಂ ಅಧಿಕಾರಿ ರಮೇಶ
ಸಂಗಾ, ತಹಶೀಲ್ದಾರ್‌ಗಳಾದ ಪ್ರಕಾಶ ಕುದರೆ, ಸುರೇಶ ಶರ್ಮಾ, ಅಂಜುಮ್ ತಬಸ್ಸುಮ್ ಮಾತನಾಡಿದರು.

ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿ, ಸಿಬ್ಬಂದಿ ಜ್ಯೋತ್ಸ್ನಾ ಅವರಿಗೆ ಬುದ್ಧನ ವಿಗ್ರಹ ನೀಡಿ ಸತ್ಕರಿಸಿದರು. ನೂತನ ಜಿಲ್ಲಾಧಿಕಾರಿ ಯಶವಂತ‌ ವಿ. ಗುರುಕರ್ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT