ಸಿ.ಎಂ. ವಾಸ್ತವ್ಯ: ಶಾಲಾ ಮಕ್ಕಳಿಗೆ ಬಿಸಿಲಲ್ಲಿ ಪಾಠ!

ಮಂಗಳವಾರ, ಜೂಲೈ 16, 2019
25 °C
ಸುಸಜ್ಜಿತ ಬಚ್ಚಲುಮನೆ – ಶೌಚಾಲಯ ನಿರ್ಮಾಣ

ಸಿ.ಎಂ. ವಾಸ್ತವ್ಯ: ಶಾಲಾ ಮಕ್ಕಳಿಗೆ ಬಿಸಿಲಲ್ಲಿ ಪಾಠ!

Published:
Updated:
Prajavani

ಕಲಬುರ್ಗಿ: ತಾಲ್ಲೂಕಿನ ಹೇರೂರ (ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೂನ್‌ 22ರಂದು ವಾಸ್ತವ್ಯ ಮಾಡಲಿದ್ದು, ಸಿದ್ಧತೆ ಭರದಿಂದ ಸಾಗಿರುವುದರಿಂದ ಕೆಲ ಮಕ್ಕಳು ಸುಡುವ ಬಿಸಿಲಲ್ಲೇ ಕಲಿಯಬೇಕಾಗಿದೆ!‌

ಇದನ್ನೂ ಓದಿ: ಮುಖ್ಯಮಂತ್ರಿ ಗ್ರಾಮ ವಾಸ್ತವ್ಯಕ್ಕೆ 10ರಿಂದ 15 ಸಾವಿರ ಜನರು ಭಾಗವಹಿಸುವ ನಿರೀಕ್ಷೆ

ಈ ಶಾಲೆಯ ಕೊಠಡಿಯೊಂದರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ತಾಲೀಮು ನಡೆಸಲಾಗುತ್ತಿದೆ. ಹೀಗಾಗಿ, ಈ ಕೊಠಡಿಯಲ್ಲಿ ಪಾಠ ಕೇಳಿಸಿಕೊಳ್ಳಬೇಕಿದ್ದ 20ಕ್ಕೂ ಅಧಿಕ ಮಕ್ಕಳನ್ನು ಬುಧವಾರ ಶಾಲೆಯ ಹೊರಗೆ ಬಿಸಿಲಲ್ಲಿ ಕೂರಿಸಿ ಪಾಠ ಮಾಡಲಾಯಿತು. ಇನ್ನೊಂದು ಕೊಠಡಿಯಲ್ಲಿ ಸಿಮೆಂಟ್‌ ಚೀಲಗಳನ್ನು ಇಟ್ಟಿದ್ದು, ಕೊಠಡಿಯ ತುಂಬಾ ತುಂಬಿಕೊಂಡಿದ್ದ ದೂಳಿನಲ್ಲೇ ಮಕ್ಕಳು ಶಿಕ್ಷಕರಿಂದ ಪಾಠ ಕೇಳಿಸಿಕೊಂಡರು. 

ಸಿದ್ಧತೆ ಪರಿಶೀಲಿಸಲು ಇತ್ತೀಚೆಗೆ ಗ್ರಾಮಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಕಚೇರಿ ಅಧಿಕಾರಿ ಬಿ.ಎನ್‌.ಕೃಷ್ಣಯ್ಯ,  ‘ಕುಮಾರಸ್ವಾಮಿ ಅವರು ಉಳಿದುಕೊಳ್ಳುವ ಕೊಠಡಿಗೆ ಬಣ್ಣ ಬಳಿಯದೇ ಅದು ಹೇಗಿದೆಯೋ ಹಾಗೇ ಉಳಿಸಿಕೊಳ್ಳಿ’ ಎಂದು ಸೂಚಿಸಿದ್ದರು. ಆದರೆ, ಆ ಕೊಠಡಿಗೂ ಬಣ್ಣ ಹಚ್ಚಲಾಗಿದೆ.

ಇಲ್ಲಿಯ ವಿದ್ಯಾರ್ಥಿಗಳು ಈ ವರೆಗೆ ನೆಲದ ಮೇಲೆ ಕುಳಿತೇ ಪಾಠ ಕೇಳುತ್ತಿದ್ದರು. 100 ಹೊಸ ಬೆಂಚ್‌ಗಳನ್ನು ತರಿಸಿ ಅಳವಡಿಸಲಾಗಿದೆ. ಶಾಲೆಯ ಗೋಡೆಗಳನ್ನು ನಲಿಕಲಿ ಪಠ್ಯದ ಪರಿಕರಗಳಿಂದ ಅಲಂಕರಿಸಲಾಗುತ್ತಿದ್ದು, ಆವರಣಗೋಡೆ ನಿರ್ಮಿಸಲಾಗುತ್ತಿದೆ.

ನಾಲ್ಕು ಹೊಸ ಶೌಚಾಲಯ

₹3.50 ಲಕ್ಷ ವೆಚ್ಚದಲ್ಲಿ ನಾಲ್ಕು ಶೌಚಾಲಯ ಮತ್ತು ಸ್ನಾನಗೃಹ ನಿರ್ಮಿಸಲಾಗುತ್ತಿದೆ. ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಜನಪ್ರತಿನಿಧಿಗಳ ಬಳಕೆಗೆ ಎರಡು ಶೌಚಾಲಯ ನಿರ್ಮಿಸಲಾಗುತ್ತಿದೆ. ಮುಖ್ಯಮಂತ್ರಿ ಅವರು ವಾಸ್ತವ್ಯ ಮಾಡಲಿರುವ ಮೂರನೇ ತರಗತಿಯ ಕೊಠಡಿಗೆ ಹೊಂದಿಕೊಂಡಂತೆ ಎರಡು ಶೌಚಾಲಯ ಹಾಗೂ ಸ್ನಾನಗೃಹಗಳನ್ನು ನಿರ್ಮಿಸಲಾಗುತ್ತಿದ್ದು, ಗುರುವಾರ ಕಾಮಗಾರಿ ಪೂರ್ಣಗೊಳ್ಳಲಿದೆ.

‘ಸಿಮೆಂಟ್‌ ಚೀಲಗಳನ್ನು ಕೊಠಡಿಯಲ್ಲಿ ಇಟ್ಟಿದ್ದರಿಂದ ಮಕ್ಕಳಿಗೆ ಕೊಂಚ ತೊಂದರೆಯಾಯಿತು. ಸಂಜೆಯೇ ಚೀಲಗಳನ್ನು ತೆರವುಗೊಳಿಸಲಾಯಿತು. ಶಾಲೆಗೆ ಮೂಲಸೌಲಭ್ಯ ಕಲ್ಪಿಸಲು ₹ 13.67 ಲಕ್ಷ ವೆಚ್ಚ ಮಾಡಲಾಗುತ್ತಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಹೊನ್ನಳ್ಳಿ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 12

  Happy
 • 4

  Amused
 • 2

  Sad
 • 5

  Frustrated
 • 21

  Angry

Comments:

0 comments

Write the first review for this !