ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಸಮಸ್ತ ಭಾರತೀಯರ ಸೂರ್ಯ

ವಿದ್ಯಾರ್ಥಿ ಬಂಧುತ್ವ ವೇದಿಕೆಯಿಂದ ಸ್ಮಶಾನದಲ್ಲಿ ಮೌಢ್ಯ ವಿರೋಧಿ ಸಂಕಲ್ಪ ದಿನ
Last Updated 6 ಡಿಸೆಂಬರ್ 2019, 12:12 IST
ಅಕ್ಷರ ಗಾತ್ರ

ಕಲಬುರ್ಗಿ: ಸಂವಿಧಾನದ ಮೂಲಕ ಹೊಸ ಬೆಳಕನ್ನು, ದಿಕ್ಕನ್ನು ನೀಡಿದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಬರೀ ದಲಿತರಿಗಷ್ಟೇ ಸೂರ್ಯನಲ್ಲ. ಬದಲಾಗಿ ಸಮಸ್ತ ಭಾರತೀಯರಿಗೂ‍ಪ್ರಖರ ಸೂರ್ಯ ಎಂದು ಶ್ರೀಶೈಲ–ಸುಲಫಲ ಮಠದ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಡಾ.ಬಿ.ಆರ್‌.ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಅಂಗವಾಗಿ ನಗರದ ಸಿದ್ಧಾರ್ಥ ನಗರ ಸ್ಮಶಾನದಲ್ಲಿ ವಿದ್ಯಾರ್ಥಿ ಬಂಧುತ್ವ ವೇದಿಕೆಯು ಆಯೋಜಿಸಿದ್ದ ಮೌಢ್ಯ ವಿರೋಧಿ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಂಬೇಡ್ಕರ್ ಅವರು ತೀರಿಕೊಂಡಿಲ್ಲ. ದೇಶದ ಧರ್ಮಗ್ರಂಥವಾಗಿರುವ ಸಂವಿಧಾನದ ಮೂಲಕ ದೇಶದ ನೂರಾರು ಕೋಟಿ ಮನಸ್ಸಿನಲ್ಲಿ ಇನ್ನೂ ಜೀವಂತವಾಗಿದ್ದಾರೆ. ತಮ್ಮ ಜೀವಮಾನದಲ್ಲಿ ಲಕ್ಷಾಂತರ ಕೃತಿಗಳನ್ನು ಓದಿದ್ದ ಅಂಬೇಡ್ಕರ್‌ ಅವರು ಜ್ಞಾನದ ಕಣಜವೇ ಆಗಿದ್ದರು. ಅಪಾರ ಅಧ್ಯಯನಶೀಲರಾಗಿದ್ದ ಅಂಬೇಡ್ಕರರು ತಮ್ಮ ಜನಗಳನ್ನು ಮೇಲೆತ್ತುವುದಕ್ಕಾಗಿ ಜೀವನವನ್ನು ಮೀಸಲಿರಿಸಿದ್ದರು’ ಎಂದರು.

‘ಜ್ಯೋತಿಷ್ಯ ಹೇಳುವವರು, ತಾಯತ ಕಟ್ಟುವವರನ್ನೇ ಸ್ವಾಮಿಗಳೆಂದು ಪರಿಗಣಿಸುವ ಮೌಢ್ಯ ನಮ್ಮ ಸಮಾಜದಲ್ಲಿ ಬೇರೂರಿದೆ. ಜನರಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸುವ ಕೆಲಸವನ್ನು ಮಾಡಲು ಇಂತಹ ಕಾರ್ಯಕ್ರಮಗಳ ಅಗತ್ಯವಿದೆ’ ಎಂದು ತಿಳಿಸಿದರು.

ಬೀದರ್‌ನ ಲಿಂಗಾಯತ ಮಹಾಮಠದ ಪೀಠಾಧ್ಯಕ್ಷರಾದ ಅಕ್ಕ ಅನ್ನಪೂರ್ಣತಾಯಿ ಮಾತನಾಡಿ, ‘ಪ್ರಾಚೀನ ಕಾಲದಲ್ಲಿ ವೈದಿಕ ಧರ್ಮದ ಹೆಸರಿನಲ್ಲಿ ಜನರಿಗೆ ಭಯ ಹುಟ್ಟಿಸುತ್ತಿತ್ತು. ಭಯ ಹುಟ್ಟಿಸುವುದು ಧರ್ಮ ಹೇಗಾಗುತ್ತದೆ. ಹೀಗಾಗಿ, ಸಾಕಷ್ಟು ಜನರು ಧರ್ಮದಿಂದ ದೂರವೇ ಉಳಿದಿದ್ದರು. ಇದನ್ನು ಅರಿತ ಬಸವಣ್ಣನವರು 12ನೇ ಶತಮಾನದಲ್ಲಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಶೋಷಿತರಿಗಾಗಿ ಸ್ಥಾಪನೆಯಾದ ಧರ್ಮವೇ ಲಿಂಗಾಯತ ಧರ್ಮವಾಗಿದೆ’ ಎಂದು ಹೇಳಿದರು.

‘ದಲಿತರು ಕೆರೆ ನೀರನ್ನು ಬಳಸಿಕೊಳ್ಳಲು ಸಾಕಷ್ಟು ನಿರ್ಬಂಧಗಳಿದ್ದವು. ಮೇಲ್ಜಾತಿಯವರನ್ನು ದಲಿತರು ಸ್ಪರ್ಶಿಸುವಂತಿರಲಿಲ್ಲ. ಇದನ್ನು ನೆನೆಸಿಕೊಂಡು ಡಾ.ಅಂಬೇಡ್ಕರ್‌ ಅವರು ಹಲವು ಬಾರಿ ಕಣ್ಣೀರು ಹಾಕಿದ್ದರು. ಮೀಸಲಾತಿಯ ಮೂಲಕ ಸಮಾನತೆಯನ್ನು ಪಡೆಯುವುದು ಸಾಧ್ಯವಾಗಿದೆ. ಆದರೆ, ಯಾರ ಒತ್ತಡವೂ ಇಲ್ಲದೇ ಸಾಮಾಜಿಕ ಸಮಾನತೆ ಸಾಧ್ಯವಾದ ದಿನವೇ ನಿಜವಾದ ಸಮಾನತೆಯನ್ನು ಸಾಧಿಸಿದಂತೆ ಎಂಬುದನ್ನು ಅಂಬೇಡ್ಕರ್‌ ನಂಬಿದ್ದರು’ ಎಂದರು.

ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಜಗದೀಶ ಚೌರ ಮಾತನಾಡಿ, ‘ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೆ ಪ್ರಬಲ ಅಸ್ತ್ರ ಎಂಬುದನ್ನು ಡಾ.ಬಿ.ಆರ್.ಅಂಬೇಡ್ಕರ್‌ ಅವರು ಬಲವಾಗಿ ಪ್ರತಿಪಾದಿಸಿದ್ದರು. ಆ ಶಿಕ್ಷಣವನ್ನು ಪಡೆದು ಎಲ್ಲರೂ ಸುಶಿಕ್ಷಿತರಾದಾಗ ಮಾತ್ರ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಮೌಢ್ಯಾಚಾರಣೆಗೆ ಬಲಿಯಾಗಿ ರೋಗಗಳು ವಾಸಿಯಾಗಲು ವೈದ್ಯರ ಬದಲು ಮಾಟ ಮಂತ್ರ ಮಾಡುವವರ ಬಳಿ ಹೋಗಬೇಕಾಗುತ್ತದೆ’ ಎಂದು ಹೇಳಿದರು.

ಕಲಬುರ್ಗಿ ಬುದ್ಧ ವಿಹಾರದ ಭಂತೆ ಸಂಘಾನಂದ, ಹಿರಿಯ ದಲಿತ ನಾಯಕ ಡಾ.ವಿಠ್ಠಲ ದೊಡ್ಡಮನಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿರಸಗಿ, ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಯಂಕಂಚಿ, ವಿಶ್ವಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಮುಖಂಡ ಶ್ಯಾಮ ನಾಟೀಕರ, ಸಿದ್ಧಾರ್ಥ ಚಿಮ್ಮಾ ಇದಲಾಯಿ, ವಿದ್ಯಾರ್ಥಿ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕ ದಿನೇಶ ದೊಡ್ಡಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT