ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿಯಲ್ಲಿ ಪಾರ್ಕಿಂಗ್‌ ನಿಷೇಧ; ಈಡೇರದ ಉದ್ದೇಶ–ವರ್ತಕರ ವಿರೋಧ

ವೃತ್ತ, ಚೌಕ, ರಸ್ತೆಗಳಲ್ಲಿ ಪಾರ್ಕಿಂಗ್‌ ನಿಷೇಧ, ಬ್ಯಾರಿಕೇಡ್‌ ಇಟ್ಟು ರಿಬ್ಬನ್‌ ಕಟ್ಟಿದ ಕ್ರಮಕ್ಕೆ ವರ್ತಕರ ವಿರೋಧ
Last Updated 7 ಡಿಸೆಂಬರ್ 2021, 2:44 IST
ಅಕ್ಷರ ಗಾತ್ರ

ಕಲಬುರಗಿ: ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಎಲ್ಲ ವೃತ್ತ ಹಾಗೂ ಚೌಕಗಳಲ್ಲಿ ವಾಹನಗಳ ಪಾರ್ಕಿಂಗ್‌ ನಿಷೇಧಿಸಿ, ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಇದು ಜಾರಿಯಾಗಿ ತಿಂಗಳು ಕಳೆದರೂ ಪರಿಣಾಮಕಾರಿ ಅನುಷ್ಠಾನವಾಗಿಲ್ಲ. ನಿಷೇಧಿತ ಪ್ರದೇಶದಲ್ಲೇ ಪಾರ್ಕಿಂಗ್‌ ಯಥಾಪ್ರಕಾರ ಮುಂದುವರಿದಿದೆ.

ದೊಡ್ಡ ವೃತ್ತಗಳ ಸುತ್ತ 50 ಮೀಟರ್‌ ವ್ಯಾಪ್ತಿಯಲ್ಲಿ ಹಾಗೂ ಚಿಕ್ಕ ವೃತ್ತಗಳಲ್ಲಿ (ಫ್ರೀ ಲೆಫ್ಟ್‌) 25 ಮೀಟರ್‌ ವ್ಯಾಪ್ತಿಯ ಒಳಗೆ ಯಾವುದೇ ವಾಹನ ನಿಲುಗಡೆ ಮಾಡುವಂತಿಲ್ಲ. ನಿಷೇಧಿತ ಸ್ಥಳಗಳನ್ನು ಹೊರತುಪಡಿಸಿ ಗುರುತಿಸಿದ ಜಾಗದಲ್ಲೇ ಪಾರ್ಕಿಂಗ್‌ ಮಾಡುವುದು ಕಡ್ಡಾಯ ಎಂದು ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾಕರ ಲೋಖಂಡೆ ಆಗಸ್ಟ್‌ 14ರಂದು ಆದೇಶ ಹೊರಡಿಸಿದ್ದಾರೆ. ಇದರ ಅನುಷ್ಠಾನಕ್ಕಾಗಿ ಪೊಲೀಸರು ಬ್ಯಾರಿಕೇಡ್‌ ಇಟ್ಟು, ರಿಬ್ಬನ್‌ ಕಟ್ಟಿದ್ದಾರೆ.

ಪೊಲೀಸರು ಅತ್ತ ತೆರಳುತ್ತಿದ್ದಂತೆಯೇ ಇತ್ತ ವಾಹನ ಸವಾರರು, ಅಂಗಡಿಯವರು ರಿಬ್ಬನ್‌ ಕತ್ತರಿಸುತ್ತಾರೆ. ಬ್ಯಾರಿಕೇಡ್‌ ಪಕ್ಕದಲ್ಲೇ ನುಗ್ಗಿ ಪಾರ್ಕಿಂಗ್‌ ಮಾಡುವುದು ಮುಂದುವರಿದಿದೆ. ಇದರಿಂದಾಗಿ ಸಂಚಾರ ಇನ್ನಷ್ಟು ಗೊಂದಲವಾಗಿದೆ ಎನ್ನುವುದು ವೃತ್ತಗಳಲ್ಲಿರುವ ವರ್ತಕರ ದೂರು.

‘ಪಾರ್ಕಿಂಗ್‌ ನಿಷೇಧ ಆದೇಶದ ಬಗ್ಗೆ ತಕರಾರು ಇಲ್ಲ. ಆದರೆ ಅದರ ಅನುಷ್ಠಾನದ ರೀತಿ ಸರಿಯಾಗಿಲ್ಲ. ದಂಡ ಹಾಕವುದು, ವಾಹನ ಸೀಜ್‌ ಮಾಡುವುದು ಅಥವಾ ಪ್ರಕರಣ ದಾಖಲಸುವುದು ಹೀಗೆ ಸಾಕಷ್ಟು ದಾರಿಗಳಿವೆ. ಎಲ್ಲವನ್ನೂ ಬಿಟ್ಟು ವೃತ್ತ, ರಸ್ತೆಗಳಲ್ಲಿ ಬ್ಯಾರಿಕೇಡ್‌ ಇಟ್ಟು, ಪಟ್ಟಿ ಕಟ್ಟಿದ್ದಾರೆ. ಇದರಿಂದ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೂ ಜಾಗ ಕಡಿಮೆಯಾಗಿದೆ’ ಎನ್ನುವುದು ಬಹುಪಾಲು ಮಂದಿಯ ದೂರು.

ಸಮಸ್ಯೆ ಆಗುತ್ತಿರುವುದೆಲ್ಲಿ?: ಬಸ್‌ ನಿಲ್ದಾಣ, ರಾಷ್ಟ್ರಪತಿ ಚೌಕ, ಎಸ್‌ವಿಪಿ ಸರ್ಕಲ್‌, ಸೂಪರ್‌ ಮಾರ್ಕೆಟ್, ಕೋರ್ಟ್‌ ರಸ್ತೆ, ಜಗತ್‌ ವೃತ್ತ, ಖರ್ಗೆ ಸರ್ಕಲ್‌, ಆಳಂದ ಚೌಕ, ದರ್ಗಾ ರಸ್ತೆ, ಮುಸ್ಲಿಂ ಚೌಕ, ಎಪಿಎಂಸಿ, ಕೆಎಂಎಫ್‌ ರಸ್ತೆ ಹಾಗೂ ವಿವಿಧೆಡೆ ಇರುವ 11 ಮಾಲ್‌ಗಳ ಪ್ರದೇಶದಲ್ಲಿ ಈ ಸಮಸ್ಯೆ ತಲೆದೋರಿದೆ.

‘ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ 30 ವರ್ಷಗಳಿಂದ ತಿನಿಸುಗಳ ವ್ಯಾಪಾರ ಮಾಡಿಕೊಂಡಿದ್ದೇನೆ. ಈಗ ಪೊಲೀಸರು ಬ್ಯಾರಿಕೇಡ್‌ ಹಾಕಿದ್ದರಿಂದ ಅಂಗಡಿಗೆ ಯಾರೂ ಬರದಂತಾಗಿದೆ. ರಿಬ್ಬನ್‌ ಕಟ್ಟುವುದನ್ನು ಬಿಟ್ಟು ಬೇರೆ ಕ್ರಮ ಕೈಗೊಂಡರೆ ಅನುಕೂಲ’ ಎನ್ನುವುದು ಚಂದ್ರಶೇಖರ ಅವರ ಕೋರಿಕೆ.

‘ವೃತ್ತಗಳಲ್ಲೂ ಹೋಟೆಲ್‌, ಖಾನಾವಳಿ, ಪಾನ್‌ಶಾಪ್, ಮೆಕ್ಯಾನಿಕ್‌ ಶಾಪ್, ಬಾರ್, ಬೇಕರಿ... ಹೀಗೆ ಎಲ್ಲ ತರದ ಮಳಿಗೆಗಳೂ ಇವೆ. ಇವುಗಳ ಮುಂದೆ ರಿಬ್ಬನ್‌ ಕಟ್ಟಿ ಜನರು ಅಂಗಡಿಗಳಿಗೆ ಹೋಗದಂತೆ ಮಾಡಿದ್ದಾರೆ. ಮಾಲ್‌ಗಳಲ್ಲಿ ಪಾರ್ಕಿಂಗ್‌ ಇರುವುದರಿಂದ ಸಮಸ್ಯೆ ಆಗಲಿಕ್ಕಿಲ್ಲ. ಆದರೆ, ಸಣ್ಣ ಹೋಟೆಲ್‌ ನಡೆಸುವ ನಾವು ಯಾರಿಗೆ ಹೇಳಬೇಕು? ಹಾಗಾಗಿ, ಬ್ಯಾರಿಕೇಡ್‌ ತೆಗೆದು ದಂಡ ಹಾಕುವುದು ಉತ್ತಮ’ ಎನ್ನುವುದು ಹೋಟೆಲ್‌ ವ್ಯಾಪಾರಿಗಳ ಮನವಿ.

ಆಟೊ, ಬಸ್‌ ನಿಲ್ದಾಣಗಳ ಸಮಸ್ಯೆ

ವಲಯ 1ರಲ್ಲಿ 22 ವೃತ್ತ ಹಾಗೂ ರಸ್ತೆ, ವಲಯ 2ರಲ್ಲಿ 55 ವೃತ್ತ, ರಸ್ತೆ ಹಾಗೂ ಚೌಕಗಳು, ವಲಯ 3ರಲ್ಲಿ 17 ಸರ್ಕಲ್‌ಗಳನ್ನು ಗುರುತಿಸಲಾಗಿದ್ದು, ಅಲ್ಲಿ ವಾಹನ ನಿಲುಗಡೆ ನಿಷೇಧವಿದೆ. ಆದರೆ, ಬಹುಪಾಲು ಎಲ್ಲ ಕಡೆಯೂ ವೃತ್ತಗಳಲ್ಲೇ ಆಟೊ, ಬಸ್‌ಗಳನ್ನು ನಿಲ್ಲಿಸಲಾಗುತ್ತಿದೆ. ಕೆಲವು ಕಡೆ 50 ಮೀಟರ್‌ ಒಳಗಡೆಯೇ ಆಟೊ ನಿಲ್ದಾಣ, ಬಸ್‌ ನಿಲ್ದಾಣಗಳಿವೆ. ಆದೇಶ ಅನುಷ್ಠಾನಕ್ಕೆ ಇದು ತಲೆನೋವಾಗಿದೆ ಎನ್ನುವುದು ಚಾಲಕರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT