ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ‘ಸಂಸತ್ ಚಲೊ ಚಳವಳಿ: ಮನೆ–ಮನೆ ಪ್ರಚಾರ’

ವಿವಿಧ ಸಂಘಟನೆಗಳ ಜಂಟಿ ಸಮಾವೇಶ: ಜನವಿರೋಧಿ ನೀತಿಗಳ ಖಂಡನೆ
Last Updated 19 ಮಾರ್ಚ್ 2023, 5:38 IST
ಅಕ್ಷರ ಗಾತ್ರ

ಕಲಬುರಗಿ: ಕನಿಷ್ಠ ₹ 10 ಸಾವಿರ ಪಿಂಚಣಿ, ₹ 35 ಸಾವಿರ ಕನಿಷ್ಠ ವೇತನ ಜಾರಿ, ಗುತ್ತಿಗೆ ಕಾರ್ಮಿಕ ಪದ್ಧತಿ ನಿಷೇಧ, ಅಗ್ನಿಪಥ ಯೋಜನೆ ರದ್ದತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಸತ್ ಚಲೊ ಚಳವಳಿ ನಡೆಸಲಾಗುತ್ತಿದೆ. ಜಿಲ್ಲೆಯಿಂದ 200 ಜನರು ಹೋರಾಟದಲ್ಲಿ ಪಾಲ್ಗೊಂಡು, ಸ್ಥಳೀಯ ಸಮಸ್ಯೆಗಳನ್ನು ದೆಹಲಿ ಮಟ್ಟಕ್ಕೆ ತಲುಪಿಸುವ ನಿರ್ಣಯ ತೆಗೆದುಕೊಳ್ಳಲಾಯಿತು.

ನಗರದಲ್ಲಿ ಶನಿವಾರ ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜಂಟಿ ಸಮಾವೇಶದಲ್ಲಿ ನಿರ್ಧರಿಸಲಾಯಿತು.

‘ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳು ಹೀಗೆ ಮುಂದುವರಿದರೆ ಮುಂದಿನ 5 ವರ್ಷಗಳಲ್ಲಿ ಶೇ 75ರಷ್ಟು ಜನರು ಅನ್ನಕ್ಕಾಗಿ ಪರಿತಪಿಸಬೇಕಾಗುತ್ತದೆ. ಈ ಬಗ್ಗೆ ಜನಜಾಗೃತಿ ಮೂಡಿಸಲು ಹಾಗೂ ಜನವಿರೋಧಿ ನೀತಿಗಳಿಗೆ ಕಡಿವಾಣ ಹಾಕಲು ಏಪ್ರಿಲ್ 5ರಂದು ದೆಹಲಿಯಲ್ಲಿ ಸಂಸತ್ ಚಲೊ ಚಳವಳಿ ಹಮ್ಮಿಕೊಳ್ಳಲಾಗಿದೆ. ರೈತರು, ಕಾರ್ಮಿಕರು, ಕೃಷಿ ಕೂಲಿಕಾರರು ಇದರಲ್ಲಿ ಭಾಗವಹಿಸುವರು’ ಎಂದು ಸಂಘಟನೆಗಳ ಮುಖಂಡರು ಹೇಳಿದರು.

‘ರಾಜ್ಯದಾದ್ಯಂತ ಮನೆ–ಮನೆ, ಬೀದಿಗಳಲ್ಲಿ ವ್ಯಾಪಕ ಪ್ರಚಾರ ನಡೆಸಿ, ಚಳವಳಿಯ ಸಂದೇಶಗಳನ್ನು ಕನಿಷ್ಠ 10 ಲಕ್ಷ ಜನರಿಗೆ ತಲುಪಿಸಬೇಕು. ಪ್ರಚಾರ ತಂಡಗಳನ್ನು ಸ್ಥಳೀಯ ಮಟ್ಟದಲ್ಲಿ ಜಂಟಿಯಾಗಿ ರಚಿಸಲಾಗುವುದು. ವಲಯ, ಜಿಲ್ಲಾ, ತಾಲ್ಲೂಕು ಹಾಗೂ ಸ್ಥಳೀಯ ಮಟ್ಟದಲ್ಲಿ ಸಮಾವೇಶ ಸಹ ನಡೆಸಲಾಗುವುದು’ ಎಂದರು.

‘ಶಾಸನಬದ್ಧ ಕನಿಷ್ಠ ಬೆಂಬಲ ಬೆಲೆ ಖರೀದಿಯ ಭರವಸೆ, ರೈತರ ಮತ್ತು ಕೃಷಿ ಕೂಲಿಕಾರರ ಸಾಲ ಮನ್ನಾ, 60 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ನೀಡಬೇಕು. ನಾಲ್ಕು ಕಾರ್ಮಿಕ ಸಂಹಿತೆಗಳು ಹಾಗೂ ವಿದ್ಯುತ್ ತಿದ್ದುಪಡಿ ಮಸೂದೆ–2022 ರದ್ದುಪಡಿಸಬೇಕು. ರಾಜ್ಯ ಕೃಷಿ ಹಾಗೂ ಭೂಸ್ವಾಧೀನ ಕಾಯ್ದೆಗಳನ್ನು ರದ್ದು ಮಾಡಬೇಕು. ರಾಷ್ಟ್ರೀಯ ಋಣಮುಕ್ತ ಕಾನೂನು ಜಾರಿಗೆ ತರಬೇಕು. 200 ದಿನಗಳಿಗೆ ನರೇಗಾ ಕೆಲಸದ ದಿನಗಳನ್ನು ನಿಗದಿ ಮಾಡಿ, ₹ 600 ಕನಿಷ್ಠ ಕೂಲಿ ಕೊಡಬೇಕು. ನಗರ ಉದ್ಯೋಗ ಖಾತ್ರಿ ಶಾಸನವೂ ರೂಪಿಸಬೇಕು’ ಎಂಬ ಬೇಡಿಕೆ ಇಟ್ಟುಕೊಂಡು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

‘ಸಾರ್ವಜನಿಕ ಉದ್ದಿಮೆ ಮತ್ತು ಸೇವೆಗಳ ಖಾಸಗೀಕರಣ ನಿಲ್ಲಿಸಿ, ರಾಷ್ಟ್ರೀಯ ನಗದೀಕೃತ ಕೊಳವೆ ಮಾರ್ಗವನ್ನು ರದ್ದುಪಡಿಸಬೇಕು. ಬೆಲೆ ಏರಿಕ ತಡೆಗಟ್ಟಿ ಆಹಾರ ಮತ್ತು ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಹಿಂಪಡೆಯಬೇಕು. ಇಂಧನ ಉತ್ಪನ್ನಗಳ ಮೇಲಿನ ಕೇಂದ್ರ ಅಬಕಾರಿ ಸುಂಕ ತಗ್ಗಿಸಬೇಕು. ಸಾರ್ವಜನಿಕ ವಿತರಣೆ ವ್ಯವಸ್ಥೆಯನ್ನು 14 ಅಗತ್ಯ ವಸ್ತುಗಳನ್ನು ಒಳಗೊಂಡು ವಿಸ್ತರಿಸಬೇಕು’ ಎಂದರು.

ಸಿಐಟಿಯು ಸಂಘಟನೆಯ ಜಿಲ್ಲಾ ಸಮಿತಿ ಅಧ್ಯಕ್ಷೆ ಶಾಂತಾ ಘಂಟಿ ಮಾತನಾಡಿ, ‘ಅಧಿಕಾರದ ಉದ್ದಕ್ಕೂ ಜನವಿರೋಧಿ ನೀತಿ ಪಾಲಿಸಿಕೊಂಡು ಬಂದ ಬಿಜೆಪಿ ಸರ್ಕಾರವು ಚುನಾವಣೆಯಲ್ಲಿ ಮತದಾರರಿಗೆ ಆಮಿಷಗಳ ಸರಮಾಲೆ ಒಡ್ಡಲಿದೆ. ಈ ಮೂಲಕ ಜನರನ್ನು ಮೂಲ ಸಮಸ್ಯೆಗಳಿಂದ ಬೇರೆಡೆ ಸೆಳೆಯಲಿದೆ. ಈ ಬಗ್ಗೆ ಕಿವಿಗೊಡದೆ ಸರ್ಕಾರದ ವೈಫಲ್ಯಗಳ ಬಗ್ಗೆ ಜನರಿಗೆ ತಿಳಿಸಬೇಕಿದೆ’ ಎಂದರು.

ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಬಿ. ಸಜ್ಜನ್, ಕೆಪಿಆರ್‌ಎಸ್‌ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸಾಯಬಣ್ಣ ಗುಡುಬಾ, ಮಲ್ಲಿಕಾರ್ಜುನ ಸಜ್ಜನ್, ಭೀಮಶೆಟ್ಟಿ ಯಂಪಳ್ಳಿ, ನಾಗಯ್ಯ ಸ್ವಾಮಿ, ಗೌರಮ್ಮ ಪಾಟೀಲ, ಸುಭಾಷ ಹೊಸಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT