ಕಲಬುರಗಿ: ‘ವಿಶ್ವಕರ್ಮ ಸಮಾಜದ ಮುಖಂಡರು ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡು ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಿದ್ದಾರೆ. ಅದೇ ರೀತಿ ಸಮುದಾಯದವರು ಸಹ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಿ, ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಬೇಕು’ ಎಂದು ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ಕೆ.ಪತ್ತಾರ ಹೇಳಿದರು.
ಇಲ್ಲಿನ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಭಾನುವಾರ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ, ವಿಶ್ವಕರ್ಮ ನೌಕರರ ವಿವಿಧೋದ್ದೇಶ ಸಹಕಾರ ಸಂಘ ಹಾಗೂ ಗಾಯತ್ರಿ ವಿಶ್ವಕರ್ಮ ಮಹಿಳಾ ಸಹಕಾರ ಸಂಘದ ವತಿಯಿಂದ ಆಯೋಜಿಸಿದ್ದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
‘ವಿಶ್ವಕರ್ಮ ಸಮುದಾಯದವರಲ್ಲಿ ಸಂಘಟನೆಯ ಕೊರತೆ ಎದ್ದು ಕಾಣುತ್ತಿದೆ. ರಾಜಕೀಯ ಸವಲತ್ತುಗಳು ಪಡೆಯಲು ಎಲ್ಲರೂ ಒಂದಾಗಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮಾರ್ಗವನ್ನು ಅನುಸರಿಸಬೇಕಿದೆ’ ಎಂದರು.
‘ಈ ವರ್ಷ ಕಲಬುರಗಿಯಲ್ಲಿ ನಿವೇಶನ ಪಡೆಯಲು ಎಲ್ಲ ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಮುದಾಯ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಮತ್ತು ಉಚಿತ ಪ್ರಸಾದದ ವ್ಯವಸ್ಥೆಯನ್ನು ಮಾಡುತ್ತೇವೆ. ಅದಕ್ಕಾಗಿ ಸಮುದಾಯದ ಹಿರಿಯರ ಮಾರ್ಗದರ್ಶನ ಪಡೆಯುತ್ತೇವೆ’ ಎಂದು ಹೇಳಿದರು.
‘ಮಹಿಳಾ ಸಂಘದ ಸದಸ್ಯತ್ವಕ್ಕೆ ನಾಲ್ಕು ತಿಂಗಳಲ್ಲಿ 400ಕ್ಕೂ ಹೆಚ್ಚು ಸದಸ್ಯರು ಹೆಸರು ಕೊಟ್ಟಿದ್ದಾರೆ. ಮಹಿಳೆಯರ ಸ್ವಯಂ ಉದ್ಯೋಗಕ್ಕೆ ಆದ್ಯತೆ ನೀಡಿ, ಆದಾಯ ಸೃಷ್ಟಿಯ ಮೂಲಗಳನ್ನು ಕಂಡುಕೊಳ್ಳಲಾಗುವುದು’ ಎಂದರು.
ಖ್ಯಾತ ಮನೋವೈದ್ಯ ಡಾ. ಸಿ.ಆರ್.ಚಂದ್ರಶೇಖರ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ರಾಜಣ್ಣ ಅವರು ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಯಾದಗಿರಿ ವಿಶ್ವಕರ್ಮ ಏಕದಂಡಿಗಿ ಮಠದ ಸುರೇಂದ್ರ ಸ್ವಾಮೀಜಿ, ಮಹಿಳಾ ಸಂಘದ ಅಧ್ಯಕ್ಷೆ ಗೀತಾ ದೇವಿ, ಮುಖಂಡರಾದ ಕೆ.ಮೋನಪ್ಪ, ಗಂಗಾಧರ ಬೆಣ್ಣೆಸಿರೂರ್, ಶ್ರೀದೇವಿ, ಶಶಿಕಲಾ, ಪ್ರಾಣೇಶ ಬಡಿಗೇರ, ಜನಾರ್ಧನ ಹೇಮನೂರ, ಅಶೋಕ ಪತ್ತಾರ, ಚಿತ್ರಲೇಖಾ ಟೆಂಗಳಿಕರ್ ಉಪಸ್ಥಿತರಿದ್ದರು.