ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ತೆರಿಗೆ ಪರಿಷ್ಕರಣೆ; ಮಿಶ್ರ ಪ್ರತಿಕ್ರಿಯೆ

ತೆರಿಗೆ ಹೆಚ್ಚಳದಿಂದ ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕ ಬಲ: ಆಶಯ * ಕೋವಿಡ್‌ ಸಂಕಷ್ಟದ ಮಧ್ಯೆ ಮತ್ತೊಂದು ಬರೆ: ಬೇಸರ
Last Updated 15 ಜನವರಿ 2021, 4:21 IST
ಅಕ್ಷರ ಗಾತ್ರ

ಕಲಬುರ್ಗಿ: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರ, ಸ್ಥಳೀಯ ಸಂಸ್ಥೆಗಳು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಹೊರಟಿವೆ. ಜನಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಇದಕ್ಕೆ ತಕ್ಕಂತೆ ಅವಶ್ಯಕತೆಗಳನ್ನು ಪೂರೈಸಲು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಆರ್ಥಿಕ ಸಾಮರ್ಥ್ಯ ಬೇಕು. ಹಾಗಾಗಿ, ತೆರಿಗೆ ಹೆಚ್ಚಳ ಮಾಡಿದ್ದು ಸಮಸ್ಯಾತ್ಮಕವೇನೂ ಅಲ್ಲ ಎಂದು ಕೆಲವು ಅರ್ಥಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇದಕ್ಕೆ ವಿರುದ್ಧ ಅನಿಸಿಕೆ ವ್ಯಕ್ತಪಡಿಸಿದ ಕೆಲವು ಜನ, ಸದ್ಯ ಕೋವಿಡ್‌ನಿಂದಾಗಿ ಜನರು ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ. ಸಾವಿರಾರು ಜನ ಕೆಲಸ ಕಳೆದುಕೊಂಡು ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಅದರಲ್ಲೂ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹೆಚ್ಚು ಪೆಟ್ಟುಬಿದ್ದಿದೆ. ರಿಯಲ್‌ ಎಸ್ಟೇಟ್‌ ಉದ್ಯಮ ನೆಲ ಕಚ್ಚಿದೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿಯೂ ತೆರಿಗೆ ಹೆಚ್ಚಳ ಮಾಡುವ ನಿರ್ಧಾರ ಸಮಂಜಸವಲ್ಲ ಎಂಬದು ಅವರ ವಾದ.

ಈ ಬಗ್ಗೆ ಜನರು ‘ಪ್ರಜಾವಾಣಿ’ ಜತೆಗೆ ಹಂಚಿಕೊಂಡ ಅಭಿಪ್ರಾಯಗಳಲ್ಲಿ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.

ತೆರಿಗೆ ಹೊರೆ ಬೇಡ

ನಗರ ಪ್ರದೇಶದಲ್ಲಿ ಆಸ್ತಿ ತೆರಿಗೆ ಹೆಚ್ಚಳಕ್ಕೆ ಮುಂದಾಗಿರುವುದಕ್ಕೆ ಇದು ಸಕಾಲವಲ್ಲ. ಖಾಲಿ ಜಾಗಕ್ಕೂ ತೆರಿಗೆ ವಿಧಿಸುವ ಬದಲು ಆ ಜಾಗವನ್ನು ಹಸಿರು ವಲಯವಾಗಿ ಅಭಿವೃದ್ಧಿ ಪಡಿಸಿದವರಿಗೆ ವಿನಾಯಿತಿ ನೀಡಿದರೆ ನಗರಗಳಲ್ಲಿ ಉತ್ತಮ ಪರಿಸರ ಕಾಣಲು ಸಾಧ್ಯ.

-ಅಶೋಕ ಪಾಟೀಲ, ಕೃಷಿಕ, ಚಿಂಚೋಳಿ

ಪಕ್ಕದ ರಾಜ್ಯಗಳಲ್ಲಿ ಈಗಾಗಲೇ ಜಾರಿ

ಈಗಾಗಲೇ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಲ್ಲಿ ಇದೇ ಮಾದರಿಯ ತೆರಿಗೆ ಆಕರಿಸಲಾಗುತ್ತಿದೆ. ಗರಿಷ್ಠ ಮಟ್ಟದಲ್ಲಿ ಹೆಚ್ಚಳ ಹಾಗೂ ಕನಿಷ್ಠ ಮಟ್ಟದಲ್ಲಿ ಕಡಮೆ ಮಾಡಿದ್ದು ಒಳ್ಳೆಯ ಬೆಳವಣಿಗೆ. ಇದರಿಂದ ಸಾಮಾನ್ಯ ಜನರ ಸಣ್ಣ ಆಸ್ತಿಗಳ ತೆರಿಗೆ ಕಡಿಮೆ ಆಗಲಿದೆ. ಉದ್ಯಮಿಗಳ ದೊಡ್ಡ ಆಸ್ತಿಗಳಿಗೆ ಹೆಚ್ಚಲಿದೆ. ಇದರ ಪೂರ್ಣ ಸ್ವರೂಪ ಗೊತ್ತಾದ ಮೇಲೆ ಪರಿಷ್ಕರಣೆಯ ಸ್ಪಷ್ಟ ಮಾಹಿತಿ ಸಿಗಲಿದೆ. ಮುಂದಿನ ಬಜೆಟ್‌ಗೆ ಇದನ್ನು ಅನುಷ್ಠಾನ ಮಾಡುವುದು ಸೂಕ್ತ.

–ಪ್ರೊ.ಸಂಗೀತಾ ಕಟ್ಟಿಮನಿ, ಅರ್ಥಶಾಸ್ತ್ರಜ್ಞೆ, ಕಲಬುರ್ಗಿ

ಉದ್ಯಮ ವಲಯಕ್ಕೆ ಹೊರೆ

ಮಧ್ಯಮ ಹಾಗೂ ಬೃಹತ್‌ ಉದ್ಯಮಗಳೇ ನೆಲ ಕಚ್ಚಿದ ಸಂದರ್ಭದಲ್ಲಿ ತೆರಿಗೆ ಪರಿಷ್ಕರಣೆ ಭಾರವಾಗಲಿದೆ. ಹಲವರು ಗೃಹಸಾಲ, ನಿವೇಶನ ಸಾಲ ಹಾಗೂ ಅದರ ಬಡ್ಡಿ ಕೂಡ ಕಟ್ಟುತ್ತಿದ್ದಾರೆ. ಇದರೊಂದಿಗೆ ತೆರಿಗೆ ಹೆಚ್ಚಳ ಬರೆಯಾಗುವ ಸಾಧ್ಯತೆ ಹೆಚ್ಚು. ದುಡಿಮೆಗಾಗಿ ವಲಸೆ ಹೋದವರು, ಆರ್ಥಿಕ ಚೇತರಿಕೆ ಇಲ್ಲದೇ ಜಾಗ ಖಾಲಿ ಬಿಟ್ಟವರೆಲ್ಲ ವಿನಾಕಾರಣ ತೆರಿಗೆ ಕಟ್ಟಬೇಕಾಗುತ್ತದೆ. ಇದು ಜನಪರವಾದ ನಿಲುವು ಅನ್ನಿಸುವುದಿಲ್ಲ.

–ಶಿವರಾಜ ವಿ. ಇಂಗಿನ‌ಶೆಟ್ಟಿ, ಆಡಳಿತ ಮಂಡಳಿ ಸದಸ್ಯ, ಎಚ್‌ಕೆಸಿಸಿಐ

ಖಾಲಿ ಸೈಟ್‌ಗಳ ಮಾರಾಟ ಹೆಚ್ಚಬಹುದು

ಕಲಬುರ್ಗಿ ನಗರದಲ್ಲಿ ಅರ್ಧದಷ್ಟು ನಿವೇಶನಗಳು ಇನ್ನೂ ಖಾಲಿ ಇವೆ. ಬೇರೆ ಬೇರೆ ನಗರದವರು ಕೂಡ ಇಲ್ಲಿ 20 ವರ್ಷಗಳ ಹಿಂದೆ ಸೈಟ್‌ ಖರೀದಿಸಿ ಹಾಗೇ ಬಿಟ್ಟಿದ್ದಾರೆ. ಅವುಗಳಿಗೆ ಮೂರು– ನಾಲ್ಕು ಪಟ್ಟು ದರ ಹೆಚ್ಚಳವಾಗುವವರೆಗೂ ಮಾರುವುದಿಲ್ಲ. ಇದರಿಂದ ಸಾಮಾನ್ಯರಿಗೆ ನಗರದಲ್ಲಿ ಸೈಟ್‌ ಸಿಗುವುದಿಲ್ಲ. ಇಂಥ ಖಾಲಿ ನಿವೇಶನಗಳಿಗೂ ತೆರಿಗೆ ಬಿದ್ದರೆ ಸಹಜವಾಗಿಯೇ ಮಾರಾಟ ಪ್ರಕ್ರಿಯೆ ಹೆಚ್ಚಬಹುದು.

–ಯಶವಂತರಾಯ ಅಷ್ಟಗಿ, ಉದ್ಯಮಿ

ತೆರಿಗೆ ಹೆಚ್ಚಿದರೆ ಆಶಾದಾಯಕ

ಕಲಬುರ್ಗಿ ಮಹಾನಗರ ಪಾಲಿಕೆಗೆ ಹೆಚ್ಚೂ–ಕಡಿಮೆ ₹ 30 ಕೋಟಿ ಆಸ್ತಿ ತೆರಿಗೆ ಬರುತ್ತದೆ. ನಗರಗಳು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇವೆ. ಸದ್ಯ ಇರುವ ತೆರಿಗೆ ವಿಧಾನ ದಶಕದ ಹಿಂದಿನದು. ಹಾಗಾಗಿ, ಪರಿಷ್ಕರಣೆ ಅಗತ್ಯವಾಗಿತ್ತು. ಸದ್ಯ ಸರ್ಕಾರ ಪರಿಷ್ಕರಣೆ ಮಾಡುವ ತೆರಿಗೆ ಪ್ರಮಾಣ ಎಷ್ಟು ಎಂದು ಇನ್ನೂ ಮಾಹಿತಿ ಬಂದಿಲ್ಲ. ಬಂದ ನಂತರ ಪಾಲಿಕೆ ಎಷ್ಟು ಪ್ರಮಾಣದ ತೆರಿಗೆ ಬರಲಿದೆ ಎಂಬುದು ಸ್ಪಷ್ಟವಾಗಲಿದೆ.

–ಆರ್‌.ಪಿ.ಜಾಧವ, ಉಪ ಆಯುಕ್ತ, (ಅಭಿವೃದ್ಧಿ) ಮಹಾನಗರ ಪಾಲಿಕೆ, ಕಲಬುರ್ಗಿ

ಹೊರೆಯಾಗುವಷ್ಟು ಹೆಚ್ಚಳ ಮಾಡಿಲ್ಲ

ನಗರ ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕ ಶಕ್ತಿ ಬಂದಷ್ಟು ಅಭಿವೃದ್ಧಿ ಕೆಲಸ ಮಾಡಲು ಸಹಕಾರಿ ಆಗುತ್ತದೆ. ಸದ್ಯ ಆಸ್ತಿ ತೆರಿಗೆ ಪರಿಷ್ಕರಣೆಯು ‘ಹೊರೆ’ ಎನ್ನುವಷ್ಟು ಹೆಚ್ಚಳ ಆಗಿಲ್ಲ. 1000 ಚದರ ಅಡಿ ಜಾಗದ ಮಾಲೀಕರು ತೆರಿಗೆಯಿಂದ ಹೊರಗೆ ಉಳಿಯಲಿದ್ದಾರೆ. ಅದಕ್ಕಿಂತ ಹೆಚ್ಚು ಖರೀದಿಸುವವರು ಸ್ಥಿತಿವಂತರಾಗಿರುತ್ತಾರೆ. ₹ 30 ಲಕ್ಷದ ಆಸ್ತಿ ಖರೀದಿಸುವವರು ಕನಿಷ್ಠ ₹ 500 ತೆರಿಗೆ ಕಟ್ಟುವುದು ಭಾರವಾಗುವುದಿಲ್ಲ.

–ಸಂಜೀವಕುಮಾರ, ನೌಕರ, ಕಲಬುರ್ಗಿ

ಪರಿಷ್ಕರಣೆ ಸದ್ಯಕ್ಕೆ ಬೇಡ

ನಗರ ಮತ್ತು ಗ್ರಾಮೀಣ ಪ್ರದೇಶದ ಜನರು ಕೊರೊನಾದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರಿಗೆ ತೆರಿಗೆ ಪರಿಷ್ಕರಣೆ ಮಾಡಿ ಖಾಲಿ ಜಾಗಕ್ಕೂ ತೆರಿಗೆ ವಿಧಿಸಲು ಮುಂದಾಗಿರುವ ಸರ್ಕಾರದ ಕ್ರಮ ಸರಿಯಲ್ಲ ಇದನ್ನು ಪುನರ್ ಪರಿಶೀಲನೆ ನಡೆಸುವ ಅಗತ್ಯವಿದೆ.

–ರಮೇಶ ಯಾಕಾಪುರ, ಸಂಚಾಲಕ, ಕಲ್ಯಾಣ ಕರ್ನಾಟಕ ಸಮಾಜ ಜಾಗರಣ ಮಂಚ್

ಸರಿಯಾದ ಕ್ರಮವಲ್ಲ

ಸರ್ಕಾರ ಸೆಸ್‌ ರೂಪದಲ್ಲಿ ಈಗಾಗಲೇ ತೆರಿಗೆ ಹೊರೆ ಜನರ ಮೇಲೆ ಹೇರಿದೆ. ಖಾಲಿ ನಿವೇಶನಗಳಿಗೂ ಸ್ಥಳೀಯ ಸಂಸ್ಥೆಗಳು ತೆರಿಗೆ ಆಕರಿಸುತ್ತಿವೆ. ಇಂಥ ಜಾಗಗಳಿಗೆ ಫಾರ್ಮ್‌ ನಂಬರ್–3 ನೀಡುವುದನ್ನು ತಡೆಹಿಡಿದಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಖಾಲಿ ಜಾಗಕ್ಕೆ ತೆರಿಗೆ ಹಾಕುವುದು ಸರಿಯಾದ ಕ್ರಮವಲ್ಲ.

–ನೀಲಕಂಠ ರಾಠೋಡ, ವಕೀಲ, ಚಿಂಚೋಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT