ಶುಕ್ರವಾರ, ಫೆಬ್ರವರಿ 28, 2020
19 °C
ಚಿಂಚೋಳಿ: ತಹಶೀಲ್ದಾರ್‌ ಅಧ್ಯಕ್ಷತೆಯ ಸಭೆಯಲ್ಲಿ ನಾಗರಿಕರ ಬೇಡಿಕೆ

ಅನಧಿಕೃತ ಧಾರ್ಮಿಕ ಕಟ್ಟಡ ತೆರವು ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ಸಾರ್ವಜನಿಕ ಸ್ಥಳದಲ್ಲಿ ಇರುವ ಅನಧಿಕೃತ ಧಾರ್ಮಿಕ ಕಟ್ಟಡಗಳಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಿಲ್ಲ. ಆದ್ದರಿಂದ ಇವುಗಳನ್ನು ತೆರವುಗೊಳಿಸದೆ ಈಗಿರುವ ಸ್ಥಿತಿಯಲ್ಲಿಯೇ ಮುಂದುವರಿಸಬೇಕು ಎಂದು ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ ಅಧ್ಯಕ್ಷತೆಯಲ್ಲಿ ಮಂಗಳವಾರ ಇಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.

ತಾಲ್ಲೂಕಿನಲ್ಲಿ 11 ಅನಧಿಕೃತ ಧಾರ್ಮಿಕ ಕಟ್ಟಡ ಗುರುತಿಸಲಾಗಿದ್ದು ಅವುಗಳನ್ನು ತೆರವುಗೊಳಿಸುವ ಸಂಬಂಧ ಅಭಿಪ್ರಾಯ ಪಡೆಯಲು ಸಭೆ ಕರೆಯಲಾಗಿದೆ ಎಂದು ಅರುಣಕುಮಾರ ಕುಲಕರ್ಣಿ ಅವರು ಹೇಳಿ  ಒಂದೊಂದು ಕಟ್ಟಡದ ಬಗ್ಗೆ ಚರ್ಚೆ ನಡೆಸಿ ಅಭಿಪ್ರಾಯ ಪಡೆದರು.

10 ಕಟ್ಟಡಗಳ ಬಗ್ಗೆ ತೆರವು ಬೇಡ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಆದರೆ ಮಿರಿಯಾಣ ಕೆರೆಯ ದಂಡೆಯ ಮೇಲೆ ಚಿಂಚೋಳಿ– ತಾಂಡೂರು ಅಂತರ ರಾಜ್ಯ ರಸ್ತೆಯ ಮಧ್ಯೆ ಇರುವ ಮಂದಿರವನ್ನು ತೆರವುಗೊಳಿಸಬಹುದಾಗಿದೆ. ಆದರೆ ಈ ಕಟ್ಟಡ ತೆರವುಗೊಳಿಸುವಾಗ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆ ಸಭೆಯಲ್ಲಿ ಕೇಳಿ ಬಂದಿತು.

‘ಶನಿವಾರದ ಒಳಗೆ ನಿಮ್ಮ ಅಭಿಪ್ರಾಯ ಒಳಗೊಂಡ ಲಿಖಿತ ಮನವಿ ಸಲ್ಲಿಸಬೇಕು. ಅಲ್ಲಿಯವರೆಗೆ ಕಾದು ನಂತರ ಮೇಲಧಿಕಾರಿಗಳಿಗೆ ನಿಮ್ಮ ಅಭಿಪ್ರಾಯ ಒಳಗೊಂಡ ವರದಿ ಸಲ್ಲಿಸುತ್ತೇನೆ. ನಂತರ ಅವರ ನಿರ್ದೇಶನದಂತೆ ಕ್ರಮ ವಹಿಸಲಾಗುವುದು’ ಎಂದು ಅರುಣಕುಮಾರ ಕುಲಕರ್ಣಿ ತಿಳಿಸಿದರು.

ಹಿರಿಯರಾದ ಮಾಣಿಕರಾವ್‌ ಭಗವಂತಿ ದಾಖಲೆ ಸಮೇತ ಮಾಹಿತಿ ನೀಡಿ, ‘ಧಾರ್ಮಿಕ ಕಟ್ಟಡಗಳಿಂದ ಯಾರಿಗೂ ತೊಂದರೆ ಇಲ್ಲ. ವಿನಾಕಾರಣ ಅವುಗಳನ್ನು ತೆರವುಗೊಳಿಸಿದರೆ ಅಶಾಂತಿಗೆ ಕಾರಣ ಆಗಬಹುದಾಗಿದೆ. 1961ಕ್ಕಿಂತ ಪೂರ್ವದಲ್ಲಿ ಚಂದಾಪುರದಲ್ಲಿ ಬೆರಳೆಣಿಕೆಯಷ್ಟು ಮನೆಗಳಿದ್ದವು. ಕಾಲರಾ, ಪ್ಲೇಗ್‌ ಬಂದು ಜನ ಊರು ತೊರೆದರು. ಈಗ ನವನಗರ ನಿರ್ಮಾಣವಾಗಿದೆ. ಧಾರ್ಮಿಕ ಸ್ಥಳಗಳು ಸರ್ಕಾರದ ಹೆಚ್ಚಿನ ಪ್ರಮಾಣ ಜಾಗ ಅತಿಕ್ರಮಿಸಿಲ್ಲ. ಜನರಿಗೆ ಓಡಾಟಕ್ಕೂ ತೊಂದರೆ ಆಗುತ್ತಿಲ್ಲ. ಎಲ್ಲಾ ಧರ್ಮೀಯರು ಸೌಹಾರ್ದದಿಂದ ಇದ್ದಾರೆ’ ಎಂದರು.

ಇದಕ್ಕೆ ಸಭೆಯಲ್ಲಿ ಹೆಚ್ಚಿನ ಜನರು ಧ್ವನಿಗೂಡಿಸಿದರು. ಹೀಗೆ ಎಲ್ಲಾ ಕಟ್ಟಡಗಳು ಉಳಿಸಿಕೊಳ್ಳಲು ಮನವಿ ಸಲ್ಲಿಸಿದರು. ಹಿರಿಯ ಮುಖಂಡ ಮಾಣಿಕಪ್ಪ ಭಗವಂತಿ, ಗೋಪಾಲರಾವ್‌ ಕಟ್ಟಿಮನಿ, ಪುರಸಭೆ ಸದಸ್ಯ ಅಬ್ದುಲ್‌ ಬಾಷೀತ್‌, ಅನ್ವರ್‌ ಖತೀಬ್‌, ಕೆ.ಎಂ. ಬಾರಿ, ಬಿಜೆಪಿ ಮುಖಂಡ ಸಯ್ಯದ್‌ ನಿಯಾಜ ಅಲಿ, ಬಿಎಸ್‌ಪಿ ಮುಖಂಡ ಗೌತಮ ಬೊಮ್ಮನಳ್ಳಿ, ಮತೀನ್‌ ಸೌದಾಗರ, ಅನಿಲ ಕಾಂಟ್ಲಿ ಸಲಹೆ ಸೂಚನೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಅಭಯಕುಮಾರ, ಲೋಕೋಪಯೋಗಿ ಎಇಇ ಗುರುರಾಜ ಜೋಷಿ, ಪಿಎಸ್‌ಐ ಸಂತೋಷ ರಾಠೋಡ್‌ ಮುಖಂಡರಾದ ಉಮಾ ಪಾಟೀಲ, ಬಸವಣ್ಣ ಪಾಟೀಲ, ಆಕಾಶ ಕೊಳ್ಳೂರು, ಗಿರಿರಾಜ ನಾಟಿಕಾರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು