ಗುರುವಾರ , ನವೆಂಬರ್ 21, 2019
27 °C

ಕಲಬುರ್ಗಿ: ಕನ್ಹಯ್ಯಕುಮಾರ್ ಉಪನ್ಯಾಸಕ್ಕೆ ಅನುಮತಿ

Published:
Updated:

ಕಲಬುರ್ಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆಯಲ್ಲಿ ಇದೇ 15ರಂದು ಕನ್ಹಯ್ಯ ಕುಮಾರ್ ಉಪನ್ಯಾಸ ನೀಡಲು ಸಿಂಡಿಕೇಟ್ ಸಭೆ ಒಪ್ಪಿಗೆ ನೀಡಿತು.

ಹಂಗಾಮಿ ಕುಲಪತಿ ಪ್ರೊ.ಪರಿಮಳಾ ಅಂಬೇಕರ್ ಈ ವಿಷಯವನ್ನು ಪ್ರತಿಭಟನಾ ‌ನಿರತ ವಿದ್ಯಾರ್ಥಿಗಳ ಎದುರು ಪ್ರಕಟಿಸಿದರು.

ಸಿಪಿಐ ಪಕ್ಷದ ಮುಖಂಡ, ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಮಾಜಿ ಅಧ್ಯಕ್ಷ ಕನ್ಹಯ್ಯಕುಮಾರ್‌ ಉಪನ್ಯಾಸಕ್ಕೆ ನೀಡಿದ್ದ ಅನುಮತಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮೇಲೆ ಕೆಲವರು ತೀವ್ರ ಒತ್ತಡ ಹೇರಿದ್ದರು.

ಇದರಿಂದ ಪೇಚಿಗೆ ಸಿಲುಕಿದ್ದ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ.ಪರಿಮಳಾ ಅಂಬೇಕರ್‌ ಸೋಮವಾರ ನಡೆದ ಸಿಂಡಿಕೇಟ್‌ ಸಭೆಯಲ್ಲಿ ಈ ಕುರಿತು ಚರ್ಚಿಸಿದ್ದರು.

ಕನ್ಹಯ್ಯಕುಮಾರ್‌ ಅವರಿಗೆ ವಿಶ್ವವಿದ್ಯಾಲಯದ ಅಂಬೇಡ್ಕರ್‌ ಅಧ್ಯಯನ ವಿಭಾಗವೇ ಆಹ್ವಾನಿಸಿದೆ. ಈ ಸಂಬಂಧ ಆಹ್ವಾನ ಪುಸ್ತಕ ಮುದ್ರಣವಾಗಿದೆ. ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಹಂತದಲ್ಲಿ ಪ್ರಭಾವಿ ಮುಖಂಡರ ಮಾತು ಕೇಳಿ ಕಾರ್ಯಕ್ರಮಕ್ಕೆ ಅಡ್ಡಿ ಮಾಡುತ್ತಿರುವುದು ಸರಿಯಲ್ಲ ಎಂಬ ಮಾತುಗಳು ಕೇಳಿಬಂದಿದ್ದವು.

ಇನ್ನೊಂದೆಡೆ ಈ ಭಾಗದ ಪ್ರಭಾವಿ ಸಂಸದರೊಬ್ಬರು ಹಾಗೂ ಶ್ರೀರಾಮಸೇನೆಯೂ ಕನ್ಹಯ್ಯ ಅವರಿಗೆ ಆಹ್ವಾನ ನೀಡಿದ್ದನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿತ್ತು. ಕಾರ್ಯಕ್ರಮ ಸಂಘಟಿಸಿದ ಮೇಲೆ ಅದನ್ನು ನಡೆಸಲೇಬೇಕು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದರು. 

ಇದೀಗ ಸಿಂಡಿಕೇಟ್ ಸಭೆಯ ತೀರ್ಮಾನದಂತೆ ಕನ್ಹಯ್ಯ ಕುಮಾರ್ ಅವರು ವಿವಿಯಲ್ಲಿ ಉಪನ್ಯಾಸ ನೀಡುವುದು ಇದೀಗ ಖಚಿತವಾಗಿದೆ.

 

ಪ್ರತಿಕ್ರಿಯಿಸಿ (+)