ಸಭೆ-ಸಮಾರಂಭಗಳಿಗೆ ಅನುಮತಿ ಕಡ್ಡಾಯ

ಸೋಮವಾರ, ಏಪ್ರಿಲ್ 22, 2019
32 °C
ಅಭ್ಯರ್ಥಿಗಳಿಗೆ ನೀತಿ ಸಂಹಿತೆ ಕೈಪಿಡಿ, ಸೂಚನಾ ಪತ್ರಗಳ ವಿತರಣೆ

ಸಭೆ-ಸಮಾರಂಭಗಳಿಗೆ ಅನುಮತಿ ಕಡ್ಡಾಯ

Published:
Updated:
Prajavani

ಕಲಬುರ್ಗಿ: ‘ಲೋಕಸಭಾ ಚುನಾವಣೆಯಲ್ಲಿ ಅನುಮತಿಯಿಲ್ಲದೇ ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳು ಬಹಿರಂಗ ಸಭೆ-ಸಮಾರಂಭ, ಕಾರ್ಯಕ್ರಮ, ಮೆರವಣಿಗೆಗಳನ್ನು ಮಾಡುವಂತಿಲ್ಲ’ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಆರ್.ವೆಂಕಟೇಶಕುಮಾರ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಅಭ್ಯರ್ಥಿಗಳು ಆಯಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿಗಳಿಂದ ಬಹಿರಂಗ ಸಭೆ-ಸಮಾರಂಭ, ಮೆರವಣಿಗೆ ಕುರಿತು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಕಾರ್ಯಕ್ರಮ ನಡೆಯುವ ದಿನದಂದು ಸ್ಥಳಕ್ಕೆ ಭೇಟಿ ನೀಡಲಿರುವ ವಿಡಿಯೊ ಕಣ್ಗಾವಲು ತಂಡವು ಎಲ್ಲವನ್ನೂ ಚಿತ್ರೀಕರಿಸಿ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಲಿದೆ’ ಎಂದು ತಿಳಿಸಿದರು.

‘ಅನುಮತಿ ಪಡೆಯದೇ ಸಭೆ-ಸಮಾರಂಭಗಳನ್ನು ಮಾಡುವ ಅಭ್ಯರ್ಥಿಗಳ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗುವುದು. ಪ್ರಚಾರಕ್ಕೆ ಬಳಸುವ ವಾಹನಗಳಿಗೆ ಜಿಲ್ಲಾ ಚುನಾವಣಾ ಅಧಿಕಾರಿಯಿಂದ ಅನುಮತಿ ಪಡೆಯಬೇಕು. ಅಂದಾಗ ಮಾತ್ರ ಇಡೀ ಕ್ಷೇತ್ರದಲ್ಲಿ ಆ ವಾಹನದಲ್ಲಿ ಸಂಚರಿಸಬಹುದು. ಒಂದು ವೇಳೆ ಸಹಾಯಕ ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆದಿದ್ದರೆ ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾತ್ರ ಸಂಚರಿಸಬಹುದಾಗಿದೆ’ ಎಂದು ಸ್ಪಷ್ಟಪಡಿಸಿದರು.

ಪೊಲೀಸ್ ವೀಕ್ಷಕ ಡಾ.ರಾಜಶ್ರೀ ಸಿಂಗ್ ಮಾತನಾಡಿ, ‘ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ. ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು’ ಎಂದರು.

ನಮೂನೆ-7 (ಪ್ರತಿನಿಧಿಸುವ ಅಭ್ಯರ್ಥಿಗಳ ಪಟ್ಟಿ), ಅಭ್ಯರ್ಥಿಗಳ ಕೈಪಿಡಿ, ಚುನಾವಣಾ ವೆಚ್ಚ ಮೇಲ್ವಿಚಾರಣಾ ಕೈಪಿಡಿ, ಪೋಲಿಂಗ್ ಏಜೆಂಟರ ಕೈಪಿಡಿ, ಕೌಟಿಂಗ್ ಏಜೆಂಟರ ಕೈಪಿಡಿ, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಅನುಸರಿಸಬೇಕಾದ ಮಾದರಿ ನೀತಿ ಸಂಹಿತೆ ಮಾರ್ಗಸೂಚಿ, ಖರ್ಚಿನ ದರಪಟ್ಟಿ, ಸ್ಟ್ರಾಂಗ್ ರೂಂ ಮತ್ತು ಕೌಟಿಂಗ್ ಕೇಂದ್ರಗಳ ಮಾಹಿತಿ ಕುರಿತ ಕೈಪಿಡಿಗಳನ್ನು ರಾಜಕೀಯ ಪಕ್ಷಗಳ ಮುಖಂಡರಿಗೆ ವಿತರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ, ಪ್ರೊಬೇಷನರಿ ಐಎಎಸ್ ಅಧಿಕಾರಿ ಸ್ನೇಹಲ್ ಸುಧಾಕರ ಲೋಖಂಡೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !