ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಧನೆಗೆ ಪರಿಶ್ರಮ, ತ್ಯಾಗ ಅತ್ಯಗತ್ಯ: ಕವಿತಾ ಮನ್ನಿಕೇರಿ

ಜಿಲ್ಲಾ ಗಾಣಿಗ ನೌಕರರ ಕಲ್ಯಾಣ ಸಂಘದ ಪ್ರತಿಭಾ ಪುರಸ್ಕಾರ ಸಮಾರಂಭ
Published : 16 ಸೆಪ್ಟೆಂಬರ್ 2024, 3:25 IST
Last Updated : 16 ಸೆಪ್ಟೆಂಬರ್ 2024, 3:25 IST
ಫಾಲೋ ಮಾಡಿ
Comments

ಕಲಬುರಗಿ: ‘ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಓದಿದರೆ, ಬದುಕಿನುದ್ದಕ್ಕೂ ಸುಖವಾಗಿ ಇರಬಹುದು. ಸಮಾಜಕ್ಕೆ ಕೊಡುಗೆಯನ್ನೂ ನೀಡಬಹುದು. ವಿದ್ಯಾರ್ಥಿ ಜೀವನದ 24 ವರ್ಷಗಳ ವಯಸ್ಸಿನ ಅವಧಿಯಲ್ಲಿ ಸುಖಕ್ಕೆ ಶರಣಾದರೆ, ಬದುಕಿನುದ್ದಕ್ಕೂ ಕಷ್ಟಪಡಬೇಕಾಗುತ್ತದೆ. ಆಯ್ಕೆ ವಿದ್ಯಾರ್ಥಿಗಳಿಗೇ ಬಿಟ್ಟಿದ್ದು’ ಎಂದು ಕರ್ನಾಟಕ ಗೃಹ ಮಂಡಳಿ ಆಯುಕ್ತೆ, ಐಎಎಸ್‌ ಅಧಿಕಾರಿ ಕವಿತಾ ಮನ್ನಿಕೇರಿ ಹೇಳಿದರು.

ಇಲ್ಲಿನ ಕರುಣೇಶ್ವರ ನಗರದ ಕೆಇಬಿ ಸಭಾಭವನದಲ್ಲಿ ಗುಲಬರ್ಗಾ ಜಿಲ್ಲಾ ಗಾಣಿಗ ನೌಕರರ ಕಲ್ಯಾಣ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಾನು ಕೆಎಎಸ್‌ ಪರೀಕ್ಷೆ ಬರೆಯುವ ಹೊತ್ತಿಗೆ ಮದುವೆಯಾಗಿತ್ತು. ಮುಖ್ಯ ಪರೀಕ್ಷೆಗೆ ಮೂರು ತಿಂಗಳಲು ಬಾಡಿಗೆ ಮನೆಯಲ್ಲಿದ್ದು ಸಿದ್ಧತೆ ಮಾಡಿದ್ದೆ. ಊಟಕ್ಕೆ ಸಾಂಬಾರ್‌ ಮಾಡಲು ಸಮಯ ಹಿಡಿಯುತ್ತೆ ಎಂದು ಬರೀ ಅನ್ನ–ಮೊಸರು ತಿಂದು ಅಧ್ಯಯನ ಮಾಡುತ್ತಿದ್ದೆ. ಸಾಧನೆ ಸುಲಭವಾಗಿ ದಕ್ಕಲ್ಲ, ಅದಕ್ಕೆ ತ್ಯಾಗ ಅಗತ್ಯ’ ಎಂದರು.

‘ಇತರ ಸಮುದಾಯಗಳು ಸಾಧನೆಯ ಶಿಖರಗಳನ್ನು ಏರುತ್ತಿವೆ. ನಮ್ಮ ಸಮುದಾಯದ ಬಹುತೇಕರು ಬಾವಿಯ ಕಪ್ಪೆಗಳಂತಾಗಿದ್ದೇವೆ. ಪೊಲೀಸ್‌, ಶಿಕ್ಷಕರು, ವೈದ್ಯರು, ಎಂಜಿನಿಯರ್‌ಗಳ ಹುದ್ದೆಗಳಿಗೆ ತೃಪ್ತರಾಗುತ್ತಿದ್ದೇವೆ. ಅದನ್ನು ಬಿಟ್ಟು, ದೊಡ್ಡ ಕನಸು ಕಾಣಬೇಕು. ದೊಡ್ಡ ಹುದ್ದೆಗೇರುವ ಅರ್ಹತೆ ಪಡೆಯಲು ಕಠಿಣ ಪರಿಶ್ರಮ ಪಡಬೇಕು’ ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿಯ 24 ಹಾಗೂ ಪಿಯುಸಿಯ 47 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಪುರಸ್ಕಾರವು ಶಾಲು, ಪುಷ್ಪ, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಹಾಗೂ ತಲಾ ₹1,100 ನಗದು ಒಳಗೊಂಡಿತ್ತು.

ಇದಕ್ಕೂ ಮುನ್ನ ಸೇವೆಯಿಂದ ನಿವೃತ್ತರಾದ ಸಂಘದ ಸದಸ್ಯರನ್ನು ಸತ್ಕರಿಸಲಾಯಿತು. ಜಿಲ್ಲಾ ಗಾಣಿಗ ಸಮಾಜದ ಶರಣಕುಮಾರ ಬಿಲ್ಲಾಡ ಸ್ವಾಗತಿಸಿದರು. ಶಂಕರಲಿಂಗ ಕಲಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಸುನೀಲ ಎಸ್.ಭಾವಿಕಟ್ಟಿ, ಗಾಣಸಿರಿ ಪತ್ತಿನ ಸಹಕಾರ ಸಂಘ ಕಲಬುರಗಿಯ ಅಧ್ಯಕ್ಷ ದೇವೇಂದ್ರ ಎಸ್.ಬಿರಾದಾರ, ಸಮಾಜದ ಹಿರಿಯರಾದ ಅಪ್ಪಾರಾವ ಪಾಟೀಲ ಅತನೂರ, ಮಲ್ಲಿನಾಥಗೌಡ ಪಾಟೀಲ ಯಲಗೋಡ, ಕೆ.ಜಿ.ಬಿರಾದಾರ, ಶಿವಶರಣಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಳೂರು ಸಿದ್ಧಾರೂಢ ಮಠದ ಸದ್ಗುರು ಶಂಕರಾನಂದ ಸ್ವಾಮೀಜಿ ಸಾನ್ನಿಧ್ಯ‌ ವಹಿಸಿದ್ದರು.

‘ಅಭಿವೃದ್ಧಿಗೆ ಪಂಚಸೂತ್ರ ಪಾಲಿಸಿ’

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಆರ್‌.ಆರ್‌.ಬಿರಾದಾರ ಮಾತನಾಡಿ ‘ವಿದ್ಯಾರ್ಥಿ ಜೀವನದಲ್ಲಿ ಗುರಿ ಕಠಿಣ ಪರಿಶ್ರಮ ಧನಾತ್ಮಕ ವಿಚಾರ ಆತ್ಮವಿಶ್ವಾಸ ಮನಸ್ಸಿನ ಮೇಲೆ ನಿಯಂತ್ರಣ ಅದಮ್ಯ ಛಲ ಇದ್ದರೆ ಸಾಧನೆಯ ಹಾದಿ ಸುಲಭವಾಗಿ ಕ್ರಮಿಸಬಹುದು’ ಎಂದರು. ‘ಗಾಣಿಗ ಸಮಾಜವು ಆರ್ಥಿಕ ಸಾಮಾಜಿಕ ಶೈಕ್ಷಣಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿಯಾಗಬೇಕಿದೆ. ಅದಕ್ಕಾಗಿ ಐದು ಸೂತ್ರಗಳನ್ನು ಪಾಲಿಸಬೇಕಿದೆ’ ಎಂದು ಸಲಹೆ ನೀಡಿದರು. ಪಂಚ ಸೂತ್ರಗಳು ಇಂತಿವೆ. *ಸಮಾಜದ ಸಂಘಟನೆಗಾಗಿ ಪ್ರತಿ ಜಿಲ್ಲೆ ತಾಲ್ಲೂಕುಮಟ್ಟದಲ್ಲಿ ಗಾಣಶ್ರೀ ಸಭಾಭವನ ಸ್ಥಾಪನೆ *ಶಿಕ್ಷಣಕ್ಕೆ ಒತ್ತು ನೀಡಲು ಪ್ರತಿ ಜಿಲ್ಲೆ ತಾಲ್ಲೂಕುಮಟ್ಟದಲ್ಲಿ ಗಾಣಶ್ರೀ ವಿದ್ಯಾರ್ಥಿ ವಸತಿ ನಿಲಯ ನಿರ್ಮಾಣ *ಯುಪಿಎಸ್‌ಸಿ ಕೆಪಿಎಸ್‌ಸಿ ಪರೀಕ್ಷೆಗಳ ಸಿದ್ಧತೆಗಾಗಿ ಗಾಣಶ್ರೀ ವಿದ್ಯಾರತ್ನ ತರಬೇತಿ ಕೇಂದ್ರ *ಸಮಾಜದಲ್ಲಿ ಬಡವರಿಗೆ ಆರ್ಥಿಕ ನೆರವು ನೀಡಲು ಜ್ಯೋತಿ ಸಹಕಾರ ಪತ್ತಿನ ಸಂಸ್ಥೆ *ಗ್ರಾಮೀಣ ಪ್ರದೇಶದಲ್ಲಿ ಗಾಣಶ್ರೀ ಸ್ವ–ಸಹಾಯ ಸಂಘಗಳ ಸ್ಥಾಪನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT