ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯ: ಹಾಸ್ಟೆಲ್‌ನಲ್ಲಿ ಅಕ್ರಮ ನಿವಾಸಿಗಳು!

Last Updated 29 ಆಗಸ್ಟ್ 2022, 4:54 IST
ಅಕ್ಷರ ಗಾತ್ರ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನ ಗಂಗಾ ಆವರಣದ ನೃಪತುಂಗ ಸಂಶೋಧನಾ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಕಾನೂನುಬಾಹಿರವಾಗಿ ವಿದ್ಯಾರ್ಥಿ ಅಲ್ಲದ ಕೆಲವರು ಉಳಿದುಕೊಂಡಿದ್ದು ತಿಳಿದುಬಂದಿದೆ.

ಹಳೆಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳನ್ನು ದಬಾಯಿಸಿ ಅಕ್ರಮ ವಾಗಿ ವಾಸವಾಗಿದ್ದಾರೆ. ಹಾಸ್ಟೆಲ್‌ನ ಅರ್ಹ ವಿದ್ಯಾರ್ಥಿಗಳು ಅಕ್ರಮ ವಾಸಿಗಳಿಗೆ ಹೊರ ಹೋಗುವಂತೆ ಹೇಳಲೂ ಆಗದೆ ಮುಜುಗರ ಪಟ್ಟುಕೊಳ್ಳುತ್ತಿದ್ದಾರೆ. ಗಲಾಟೆ ಮಾಡಬಹುದು ಎಂಬ ಭಯದಿಂದ ವಾರ್ಡನ್‌ ಗಮನಕ್ಕೂ ತರಲು ಆಗುತ್ತಿಲ್ಲ.

ಇಲ್ಲಿನ ಬಹುತೇಕ ವಿದ್ಯಾರ್ಥಿಗಳು ಕಲಬುರಗಿ ಗ್ರಾಮೀಣ ಭಾಗ ಸೇರಿದಂತೆ ನೆರೆಯ ಬೀದರ್, ಯಾದಗಿರಿ, ವಿಜಯಪುರ, ರಾಯಚೂರು, ಬಳ್ಳಾರಿ, ಕೊಪ್ಪಳ ಸೇರಿದಂತೆ ಇತರೆ ಜಿಲ್ಲೆಗಳಿಂದ ಬಂದಿದ್ದಾರೆ. ಹೀಗಾಗಿ, ಹಳೆಯ ವಿದ್ಯಾರ್ಥಿಗಳನ್ನು ಎದುರು ಹಾಕಿಕೊಂಡು ಅವರು ವಿರುದ್ಧ ದೂರು ನೀಡಲು ಮುಂದಾಗುತ್ತಿಲ್ಲ.

‘ಪಿಎಚ್‌.ಡಿ ಮುಗಿದು ಎರಡು ವರ್ಷ ಕಳೆದರೂ ಇನ್ನೂ ವಸತಿ ನಿಲಯದಲ್ಲಿ ಉಳಿದುಕೊಂಡಿದ್ದಾರೆ. ಪಿಎಚ್‌.ಡಿ ಪೂರ್ಣಗೊಂಡು ಹೊರಗೆ ಹೋಗಿ ವಾಪಸ್ ಬಂದ ಕೆಲವರು ಹೆದರಿಸಿ, ಬೆದರಿಸಿ ತಾವು ಈ ಹಿಂದೆ ಇದ್ದ ಕೋಣೆ ಯಲ್ಲೇ ಉಳಿದುಕೊಂಡಿದ್ದಾರೆ’ ಎಂದು ವಿದ್ಯಾರ್ಥಿಯೊಬ್ಬರು ಆರೋಪಿಸಿದರು.

‘ಹಾಸ್ಟೆಲ್‌ನಲ್ಲಿ ಕೋಣೆ ಪಡೆದ ಕೆಲವು ಸ್ಥಳೀಯ ವಿದ್ಯಾರ್ಥಿಗಳು ತಾವು ಮನೆಯಲ್ಲೇ ಇದ್ದು, ಇಲ್ಲಿನ ಕೋಣೆಗಳನ್ನು ತಮ್ಮ ಸ್ನೇಹಿತರಿಗೆ ಬಿಟ್ಟುಕೊಟ್ಟಿದ್ದಾರೆ.

‘ನಾವು ಹಾಸ್ಟೆಲ್‌ನ ಸೀನಿಯರ್‌ಗಳು. ನಿಮಗಿಂತ ಮುಂಚೆ ಇದ್ದವರು’ ಎಂದು ದಬಾಯಿಸುತ್ತಿದ್ದಾರೆ. ವಾರ್ಡನ್‌ಗಳ ಗಮನಕ್ಕೆ ತಂದರೆ ತೊಂದರೆ ನೀಡಬಹುದು ಎಂಬ ಭಯದಿಂದ ಎಲ್ಲವನ್ನೂ ಸಹಿಸಿ ಕೊಂಡು ಸುಮ್ಮನಿದ್ದೇವೆ’ ಎಂದು ಅಲವತ್ತುಕೊಂಡರು.

‘ನಾವೆಲ್ಲರೂ ಊಟ ಮುಗಿಸಿ ಕೊಂಡು ಕೋಣೆಗೆ ಹೋದ ಬಳಿಕ ಹಾಸ್ಟೆಲ್‌ನ ಕೆಲ ಸಿಬ್ಬಂದಿಗೆ ಹಣ ಕೊಟ್ಟು, ತಮ್ಮ ಕೋಣೆಗೆ ಊಟ ತರಿಸಿಕೊಂಡು ತಿನ್ನುತ್ತಾರೆ. ಅತಿಥಿ ಉಪನ್ಯಾಸಕರು, ಹೊರಗಡೆ ಕೆಲಸ ಮಾಡುವವರು ಸೇರಿ ಸುಮಾರು 25 ಜನ ನಿಯಮಬಾಹಿರವಾಗಿ ವಾಸವಾಗಿದ್ದಾರೆ’ ಎಂದರು.

ಅಕ್ರಮವಾಸಿಗಳನ್ನು ಪತ್ತೆ ಹಚ್ಚು ವುದು ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೂ ಸಮಸ್ಯೆಯಾಗಿದೆ. ವಿದ್ಯಾರ್ಥಿಗಳಿಗೆ ಗ್ರಂಥಾಲಯ ಮತ್ತು ವಿಭಾಗದ ವತಿಯಿಂದ ಭಾವಚಿತ್ರವುಳ್ಳ ಗುರುತಿನ ಚೀಟಿ ನೀಡಲಾಗುತ್ತದೆ. ಆದರೆ, ಹಾಸ್ಟೆಲ್‌ಗೆ ಪ್ರವೇಶ ಪಡೆದು ಕೊಂಡಿರುವ ವಿದ್ಯಾರ್ಥಿಗಳಿಗೆ ಯಾವುದೇ ಗುರುತಿನ ಚೀಟಿ ಇರುವುದಿಲ್ಲ. ಹೀಗಾಗಿ, ಅವರನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ.

‘ಹಾಸ್ಟೆಲ್‌ಗೆ ಭೇಟಿ, ಪರಿಶೀಲನೆ’
‘ಕಾನೂನು ಬಾಹಿರವಾಗಿ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಇರುವುದು ನನ್ನ ಗಮನಕ್ಕೆ ಬಂದಿಲ್ಲ. ತಕ್ಷಣವೇ ಹಾಸ್ಟೆಲ್‌ಗೆ ತೆರಳಿ, ವಾರ್ಡನ್‌ ಅವರಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗುವುದು. ಈ ಬಗ್ಗೆ ತಕ್ಷಣವೇ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವಿ.ಟಿ ಕಾಂಬಳೆ ‘ಪ್ರಜಾವಾಣಿ’ಗೆ ತಿಳಿಸಿದರು.

*

ವಸತಿ ನಿಲಯದ ವಿದ್ಯಾರ್ಥಿಗಳು ಇದುವರೆಗೂ ನನ್ನ ಬಳಿ ಬಂದು ಅಕ್ರಮ ನಿವಾಸಿಗಳ ಬಗ್ಗೆ ಪ್ರಸ್ತಾಪಿಸಿಲ್ಲ. ಅಂತಹದ್ದು ಕಂಡುಬಂದ ತಕ್ಷಣವೇ ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು.
-ನಿಂಗಣ್ಣ ಟಿ., ನೃಪತುಂಗ ಸಂಶೋಧನಾ ವಿದ್ಯಾರ್ಥಿನಿಲಯದ ವಾರ್ಡನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT