ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ | ನಿರ್ಗತಿಕರ ನೆರವಿಗೆ ನಿಂತ ಅಮಿನರೆಡ್ಡಿ ಯಾಳಗಿ

ಶಹಾಪುರ ವಿಧಾನಸಭಾ ಮತ ಕ್ಷೇತ್ರದಲ್ಲಿ ನಿರ್ಗತಿಕರಿಗೆ ಅಕ್ಕಿ, ಗೋಧಿ, ಜೋಳ ಪೂರೈಕೆ; ಹಲವು ದಿನಗಳಿಂದ ವಾಹನಗಳ ಮೂಲಕ ನಿರಂತರ ಸೇವೆ
Last Updated 25 ಏಪ್ರಿಲ್ 2020, 17:24 IST
ಅಕ್ಷರ ಗಾತ್ರ

‘ಪ್ರಜಾವಾಣಿ’ಯ ಕಲಬುರ್ಗಿ ಕಚೇರಿಯಲ್ಲಿ ಶನಿವಾರ ನಡೆದ ‘ಫೋನ್‌ ಇನ್ ನೇರ ಕಾರ್ಯಕ್ರಮ’ದಲ್ಲಿ ಜೆಡಿಎಸ್‌ ಮುಖಂಡ ಅಮಿನರೆಡ್ಡಿ ಯಾಳಗಿ ಅವರೊಂದಿಗೆ ಮಾತನಾಡಿದ ಶಹಾಪುರ ವಿಧಾನಸಭಾ ಕ್ಷೇತ್ರದ ಹಲವರು, ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಅವರು ನೀಡಿದ ಆಹಾರ ಸಾಮಗ್ರಿಯ ಅನುಕೂಲ ಪಡೆದ ಹಲವರು ಕರೆ ಮಾಡಿ ಕೃತಜ್ಞತೆ ಸಲ್ಲಿಸಿದರು. ಕೆಲವರು ಇವರ ಕಾರ್ಯವನ್ನು ಶ್ಲಾಘಿಸಿದರು.

ಬೆಳೆದ ಹಣ್ಣು, ಹತ್ತಿ ಮಾರಲಾರದೇ ಸಂಕಷ್ಟ ಪಡುತ್ತಿರುವ ರೈತರೂ ಕರೆ ಮಾಡಿ ಸಮಸ್ಯೆ ಹೇಳಿಕೊಂಡರು. ಅದಕ್ಕೆ ಸ್ಪಂದಿಸಿದ ಯುವ ಮುಖಂಡ ಅಮಿನರೆಡ್ಡಿ, ಸಂಬಂಧಿಸಿದ ಅಧಿಕಾರಿಗಳ ಜತೆಗೆ ಮಾತನಾಡಿ ವ್ಯಾ‍ಪಾರಕ್ಕೆ ದಾರಿ ಮಾಡಿಕೊಡುವುದಾಗಿ ಉತ್ತರಿಸಿದರು. ತುರ್ತು ಸಹಾಯ ಬೇಕಾದ ಕೆಲವರ ಮೊಬೈಲ್‌ ಸಂಖ್ಯೆಗಳನ್ನು ಬರೆದುಕೊಂಡು ಭಾನುವಾರವೇ ನೆರವು ತಲುಪಿಸುವುದಾಗಿಯೂ ತಿಳಿಸಿದರು. ಯಾಳಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಜೆಡಿಎಸ್ ಮುಖಂಡ ಸಾಯಿಬಣ್ಣ ದೊಡ್ಡಮನಿ ಜತೆಗೆ ಇದ್ದರು.

ಆಯ್ದ ಕರೆಗಳ ಮಾಹಿತಿ ಇಲ್ಲಿದೆ.

* ಮುನಾವರ (ಗಂಗಾನಗರ), ಚಂದ್ರಶೇಖರ ಗೋಗಿ (ಬುದ್ಧನಗರ), ಲಕ್ಷ್ಮಿ (ಶಹಾಪುರ): ನಮ್ಮ ಭಾಗಕ್ಕೆ ಇನ್ನೂ ಆಹಾರ ಧಾನ್ಯತಲುಪಿಲ್ಲ, ಯಾವಾಗ ತಲುಪಿಸುತ್ತೀರಿ?

– ನಾಲ್ಕು ದಿನಗಳಿಂದ ನಿರಂತರವಾಗಿ ಆಹಾರ ಧಾನ್ಯದ ಕಿಟ್‌ಗಳನ್ನು ತಲುಪಿಸಲಾಗುತ್ತಿದೆ. ನಗರದಲ್ಲಿ ಹೆಚ್ಚಿನ ಜನರಿಗೆ ಅವಶ್ಯಕತೆ ಇರುವುದರಿಂದ ಒಂದೊಂದು ಕಡೆ ಒಂದೊಂದು ದಿನ ತಲುಪಿಸುತ್ತಿದ್ದೇವೆ. ಭಾನುವಾರವೇ ಗಂಗಾನಗರದಲ್ಲಿ ವಿತರಣೆ ಮಾಡಲಾಗುವುದು.

* ಬಸಮ್ಮ (ಹಳ್ಳಿಸಗರ), ಸಂಗಮೇಶ (ಫಕಿರೇಶ್ವರ ಮಠ), ಉಮೇರಾ ಬೇಗಂ (ಶಹಾಪುರ): ವಾರ್ಡ್‌ ಸಂಖ್ಯೆ 10 ಹಾಗೂ 20ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರು ಇದ್ದಾರೆ. ಅವರಿಗೆ ಧಾನ್ಯ ತಲುಪಿಸಲು ಸಾಧ್ಯವೇ?

–ಈಗಾಗಲೇ ಈ ವಾರ್ಡ್‌ಗಳಲ್ಲಿ ಕೆಲವು ಕಡೆ ರೇಷನ್‌ ನೀಡಿದ್ದೇವೆ. ಅಗತ್ಯವಿದ್ದವರು ನಮ್ಮ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ಸಹಾಯ ಪಡೆದುಕೊಳ್ಳಬಹುದು.

* ಮೆಹಬೂಬ್‌ (ಗೋಗಿ), ಅಶೋಕ, ಸಚಿನ್‌ (ಹದನೂರ), ಅಶೋಕ (ಹೊಸಪೇಟೆ): ವಾರ್ಡ್‌ ಸಂಖ್ಯೆ 1, 19 ಹಾಗೂ 18ರಲ್ಲಿ ಧಾನ್ಯಗಳನ್ನು ತಲುಪಿಸಿದ್ದೀರಿ. ನಿಮ್ಮ ವಾಹನಗಳು ಬಂದಾಗ ನಾವು ಮನೆಯಲ್ಲಿ ಇರದೇ, ಹೊಲಕ್ಕೆ ಹೋಗಿದ್ದೆವು. ಮತ್ತೊಮ್ಮೆ ತಲುಪಿಸಲು ಸಾಧ್ಯವೇ?

–ಖಂಡಿತವಾಗಿ ಧಾನ್ಯ ವಿತರಣೆಗೆ ಮತ್ತೊಮ್ಮೆ ವಾಹನ ಕಳುಹಿಸುತ್ತೇವೆ. ಯಾರ ಬಳಿ ಸರ್ಕಾರದ ರೇಷನ್‌ ಇದೆಯೋ ಅವರು ಮರಳಿ ಪಡೆಯುವುದು ಬೇಡ. ಯಾರಿಗೆ ತುರ್ತು ಅಗತ್ಯ, ಅನಿವಾರ್ಯ ಇದೆಯೋ ಅಂಥವರನ್ನು ಗುರುತಿಸಿ ನಮಗೆ ಕರೆ ಮಾಡಿದರೆ ಬಂದು ವಿತರಿಸುತ್ತೇವೆ.

* ಬಸಪ್ಪ ಬಾನಾಳ (ದೊಡ್ಡಸಗರ), ಹನುಮಂತ ದೂರಿ, ತಿಪ್ಪಣ್ಣ ಚಿಂಚೋಳಿ, ಶರಣಗೌಡ (ಹದನೂರು), ಕೃಷ್ಣಪ್ಪ ನಾಯಕ (ಸೈದಾಪುರ), ನಿಂಗಣ್ಣ (ಸುರಪುರ):ಪಪ್ಪಾಯ, ಹತ್ತಿ ಬೆಳೆದಿದ್ದೇವೆ. ರೈತರಿಗೆ ಗ್ರೀನ್‌ ಕಾರ್ಡ್‌ ಕೊಡಲಾಗುತ್ತಿದೆ. ಆದರೆ, ಹತ್ತಿಯನ್ನು ಎಲ್ಲಿ ಮಾರಬೇಕು ತಿಳಿಯುತ್ತಿಲ್ಲ?

–ಎಪಿಎಂಸಿ ಆವರಣದಲ್ಲಿ ವಹಿವಾಟು ಆರಂಭಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ, ಹತ್ತಿ ಬೆಳೆದ ರೈತರ ನೆರವಿಗೆ ಬರುವಂತೆ ಮನವಿ ಮಾಡುತ್ತೇನೆ. ಅಧಿಕಾರಿಗಳ ಮಾಹಿತಿಯನ್ನು ನಿಮಗೂ ತಿಳಿಸುತ್ತೇನೆ. ಹಣ್ಣು ಮಾರಲು ತೋಟಗಾರಿಕಾ ಇಲಾಖೆಯ ಏನು ಸಹಾಯ ಮಾಡಬಹುದು ಕೇಳಿ ಹೇಳುತ್ತೇವೆ.

* ಕಿರಣಕುಮಾರ (ಕುಂಬಾರ ಓಣಿ), ಕರೆಪ್ಪ (ಹದನೂರ), ಹುಸೇನ್, ಚಂದ್ರು‌ (ಕೆಂಭಾವಿ): ರೈತರು ಹೊಲಕ್ಕೆ ಹೋಗುವಾಗ, ಕೂಲಿ ಆಳುಗಳಿಗೆ ಊಟ ಕೊಡಲು ಹೋಗುವಾಗ ಪೊಲೀಸರು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಿಂದ ನಮ್ಮ ದೈನಂದಿನ ಓಡಾಟಕ್ಕೆ ತೊಂದರೆ ಆಗುತ್ತಿದೆ.

–ಹೊಲಕ್ಕೆ ಹೋಗುವವರಿಗೆ ಯಾವುದೇ ತೊಂದರೆ ಕೊಡಬಾರದು ಎಂದು ಸರ್ಕಾರ ಈಗಾಗಲೇ ಹೇಳಿದೆ. ಪಟ್ಟಣದಲ್ಲಿ ಸುಮಾರು 200ಕ್ಕೂ ಹೆಚ್ಚು ಬೈಕ್‌ಗಳನ್ನು ವಶಪಡಿಸಿಕೊಂಡ ಬಗ್ಗೆ ಮಾಹಿತಿ ಇದೆ. ಇದರಲ್ಲಿ ರೈತರ ವಾಹನಗಳು ಇದ್ದರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ಮನವಿ ಮಾಡಿ, ಮರಳಿಸುವಂತೆ ಕೋರುತ್ತೇನೆ. ವಾಹನದಲ್ಲಿ ಹೋಗುವಾಗ ರೈತರ ಸಂಚಾರ ನಿಯಮ ಪಾಲಿಸುವುದು, ದಾಖಲೆಗಳನ್ನು ಇಟ್ಟುಕೊಳ್ಳುವುದು, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಆದ್ದರಿಂದ ರೈತರು ಕೂಡ ನಿಯಮಗಳನ್ನು ಮೀರಬಾರದು.

* ಶಾಂತವೀರಯ್ಯ ಹಿರೇಮಠ, ಲಾಡ್ಲೇಸಾಬ್‌ (ಕೆಂಭಾವಿ): ವಾರ್ಡ್‌ 19ರಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಪುರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.

–ವಿದ್ಯುತ್‌ ಹಾಗೂ ನೀರಿನ ಸಮಸ್ಯೆ ಅಲ್ಲಲ್ಲಿ ಕೇಳಿಬರುತ್ತಿದೆ. ಆದರೆ, ನಿರಂತರ ನೀರು ಪೂರೈಕೆಗೆ ಯಾವುದೇ ತೊಂದರೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ವಾರ್ಡ್‌ನ ಸಮಸ್ಯೆಯ ಬಗ್ಗೆ ಅಧಿಕಾರಿಗಳ ಗಮನ ಸೆಳೆಯುತ್ತೇನೆ.

* ಭೀಮರಾಯ ಪೂಜಾರಿ (ತಿಪ್ಪಳ್ಳಿ): ಪತ್ರಿಕಾ ವಿತರಕರು ಪತ್ರಿಕೆಗಳ ಜತೆಗೆ ಕೊರಿಯರ್‌ ಸರ್ವಿಸ್‌ನಂತಹ ಕೆಲಸ ಮಾಡುತ್ತಿದ್ದೆವು. ಈಗ ಪತ್ರಿಕೆ ಬಿಟ್ಟರೆ ಎಲ್ಲ ಬಂದ್‌ ಆಗಿದೆ. ಸಹಾಯ ಮಾಡಿ.

–ಜಿಲ್ಲೆಯಲ್ಲಿರುವ ಎಲ್ಲ ಪತ್ರಿಕಾ ವಿತರಕರಿಗೂ ಆಹಾರ ಧಾನ್ಯ ತಲುಪಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಹಲವರಿಗೆ ನೀಡಿದ್ದೇವೆ. ಅಗತ್ಯವಿದ್ದವರು ನೇರವಾಗಿ ಸಂಪರ್ಕಿಸಬಹುದು.

* ಸುರೇಶ (ಶಹಾಪುರ): ಲಾಕ್‌ಡೌನ್‌ ಕಾರಣ ತರಕಾರಿಯೇ ಸಿಗುತ್ತಿಲ್ಲ.ಸಮಸ್ಯೆ ಮುಗಿಯುವುದು ಯಾವಾಗ?

–ಎಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಲಾಕ್‌ಡೌನ್ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ತರಕಾರಿ ಕೊಳ್ಳಲು ಮತ್ತು ಅಂಗಡಿಗಳಲ್ಲಿ ದಿನಸಿ ಖರೀದಿಸಲು ಸಮಸ್ಯೆ ಆಗುತ್ತಿರುವ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜೊತೆ ಚರ್ಚಿಸುವೆ. ಇಂತಿಷ್ಟು ಅವಧಿ ಅಂಗಡಿ, ಮಾರುಕಟ್ಟೆ ತೆರೆಯಲು ಅವಕಾಶ ಮಾಡಿಕೊಡಲು ಕೋರಿವೆ.

* ವೆಂಕಮ್ಮ ಮತ್ತು ಪ್ರಕಾಶ (ಹಳ್ಳಿಸಗರ): ಆಹಾರ ಸಾಮಗ್ರಿ ಸಿಗದ ಕಾರಣ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಏನು ಮಾಡಬೇಕೆಂದು ತೋಚುತ್ತಿಲ್ಲ?

‌–ಆತಂಕಗೊಳ್ಳಬೇಡಿ. ಜನರಿಗೆ ನೆರವಾಗಲೆಂದೇ ಮೇ 3ರವರೆಗೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ನಾಲ್ಕು ವಾಹನಗಳಲ್ಲಿ ಆಹಾರ ಸಾಮಗ್ರಿ ಪೂರೈಸುತ್ತಿದ್ದೇನೆ. ನಿಮ್ಮೂರಿಗೆ ವಾಹನ ಬರಲಿದೆ. ಅವಸರ ಮಾಡದೇ ನಿಧಾನವಾಗಿ ಅಂತರ ಕಾಯ್ದುಕೊಂಡು ಅವುಗಳನ್ನು ತೆಗೆದುಕೊಳ್ಳಿ.

* ಶಾಂತವೀರ ಹಿರೇಮಠ, ಕೆಂಭಾವಿ: ನೀರಿನ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಎಷ್ಟೇ ಕೋರಿದರೂ ಪ್ರಯೋಜನವಾಗುತ್ತಿಲ್ಲ. ನೀವಾದರೂ ಗಮನ ಹರಿಸಿ.

–ಇದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ನೀರಿನ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಳ್ಳುವಂತೆ ಕೋರುವೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ.

ಕೆಂಭಾವಿಯ ರಂಗಣ್ಣ, ಶೆಟ್ಟಿಗೆರೆಯ ಶಂಕರ, ಶಹಾಪುರದ ಸಚಿನ್, ಗೋಗಿ (ಕೆ) ಗ್ರಾಮದ ಮಹಾದೇವಪ್ಪ, ಶಹಾಪುರದ ರಾಮಪುರೆ, ಪರಶು ರಾಮ, ಕಿರಣ, ಅಂಬರೀಶ್, ಸುರಪುರದ ಮಾಲಹಳ್ಳಿಯ ಸಿದ್ದನಗೌಡ, ಚಂದ್ರಪ್ಪ ಯಾಳಗಿ ಅವರು ಸಕಾಲಕ್ಕೆ ಅಕ್ಕಿ, ಗೋಧಿ ಮತ್ತು ಜೋಳ ಒದಗಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.

110 ಹಳ್ಳಿಗಳಿಗೂ ಸಂಚಾರ
ಲಾಕ್‌ಡೌನ್‌ನಿಂದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಬಡವರು ಮತ್ತು ನಿರ್ಗತಿಕರು ಸಂಕಷ್ಟದಲ್ಲಿ ಇರುವುದನ್ನು ಅರಿತ ಅಮಿನರೆಡ್ಡಿ ಅವರು ತಮ್ಮಿಂದ ಕೈಲಾದಷ್ಟು ಸಹಾಯ ಮಾಡಬೇಕು ಎಂದು ನಿರ್ಧರಿಸಿದರು. ಯಾರೂ ಕೂಡ ಹಸಿವಿನಿಂದ ಬಳಲಬಾರದು ಎಂಬುದರ ಬಗ್ಗೆ ಕಾಳಜಿ ವಹಿಸಿದ ಅವರು ಅಗತ್ಯವಿರುವವರ ಮನೆ ಮನೆಗೆ ಅಕ್ಕಿ, ಗೋಧಿ ಮತ್ತು ಜೋಳ ತಲುಪಿಸಲು ವಾಹನ ವ್ಯವಸ್ಥೆ ಮಾಡಿದ್ದಾರೆ.

‘ಮೂರು ದಿನಗಳಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಿಗ್ಗೆ 7 ರಿಂದ ಮಧ್ಯಾಹ್ನ 12ರವರೆಗೆ ವಾಹನಗಳು ಸಂಚರಿಸುತ್ತವೆ. ಶಹಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 110 ಹಳ್ಳಿಗಳು, ತಾಂಡಾಗಳಿವೆ. ನಗರ ಮತ್ತು ಗ್ರಾಮೀಣ ಪ್ರದೇಶದಿಂದ ಯಾರೇ ನನ್ನ ದೂರವಾಣಿ ಕರೆ ಮಾಡಿ ಕೇಳಿದರೂ ಆಯಾ ಪ್ರದೇಶಕ್ಕೆ ಆಹಾರ ಸಾಮಗ್ರಿ ಪೂರೈಸಲಾಗುವುದು’ ಎಂದು ಅಮಿನರೆಡ್ಡಿ ತಿಳಿಸಿದರು.

‘ಪ್ರತಿ ದಿನ 40 ಕ್ವಿಂಟಲ್‌ನಷ್ಟು ಆಹಾರ ಸಾಮಗ್ರಿ ಪೂರೈಸಲಾಗುತ್ತಿದೆ. ಜನರು ಅಕ್ಕಿ, ಗೋಧಿ ಮತ್ತು ಜೋಳದ ಪೈಕಿ ಏನನ್ನು ಕೇಳುವರೋ ಅದನ್ನು 10 ಕೆಜಿಯಷ್ಟು ಪೂರೈಸಲಾಗುವುದು. ಆಯಾ ಮನೆಯವರಿಗೆ 10 ಕೆಜಿಯ ಆಹಾರ ಸಾಮಗ್ರಿ ತಲುಪಿದೆ ಎಂಬುದಕ್ಕೆ ಚಿತ್ರ ಕ್ಲಿಕ್ಕಿಸಿಕೊಂಡು ಖಾತ್ರಿಪಡಿಸಿಕೊಳ್ಳಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

‘ವಾಹನದಲ್ಲಿ ಒಬ್ಬ ಚಾಲಕ ಮತ್ತು ಇಬ್ಬರು ಸಹಾಯಕರು ಇರುತ್ತಾರೆ. ನೂಕುನುಗ್ಗಾಟಕ್ಕೆ ಆಸ್ಪದ ನೀಡದ ಇಬ್ಬರು ಸಹಾಯಕರು ಆಯಾ ಮನೆಗಳ ಎದುರು ಆಹಾರ ಸಾಮಗ್ರಿ ಚೀಲವನ್ನು ಇಳಿಸುವರು ಮತ್ತು ಚಿತ್ರವನ್ನು ಕ್ಲಿಕ್ಕಿಸುವರು. ಚೀಲದ ಮೇಲೆ ನನ್ನ ದೂರವಾಣಿ ಸಂಖ್ಯೆಯಿದ್ದು, ಆಹಾರ ಸಾಮಗ್ರಿ ಖಾಲಿಯಾದಲ್ಲಿ ನನ್ನನ್ನು ನೇರವಾಗಿ ಸಂಪರ್ಕಿಸಬಹುದು. ಅವರಿಗೆ ಸಾಧ್ಯವಾದಷ್ಟು ಬೇಗ ಆಹಾರ ಸಾಮಗ್ರಿ ಪುನಃ ತಲುಪಿಸಲಾಗುವುದು’ ಎಂದು ಅವರು ತಿಳಿಸಿದರು.

**

ಆಹಾರ ಸಾಮಗ್ರಿ ವಿತರಣೆ ಮತ್ತು ಪಡೆಯುವ ವೇಳೆ ಜಾಗರೂಕತೆ ವಹಿಸಬೇಕು. ಕೊರೊನಾ ಸೋಂಕು ಹರಡುವ ಸಾಧ್ಯತೆ ಇರುವ ಕಾರಣ ಪ್ರತಿಯೊಬ್ಬರು ಅಂತರ ಕಾಯ್ದುಕೊಳ್ಳಬೇಕು ಎಂದು ಅಮಿನರೆಡ್ಡಿ ಮನವಿ ಮಾಡಿದರು.

‘ಆಹಾರ ಸಾಮಗ್ರಿ ವಿತರಣೆ ವೇಳೆ ಯಾವುದೇ ಕಾರಣಕ್ಕೂ ಕೊರತೆ ಉಂಟಾಗುವುದಿಲ್ಲ. ಆದರೆ, ತಮಗೆ ಸಿಗುವುದೋ ಅಥವಾ ಇಲ್ವೊ ಎಂಬ ಆತಂಕದಿಂದ ಜನರು ಗುಂಪುಗೂಡಿ ನಿಲ್ಲಬಾರದು. ನೂಕುನುಗ್ಗಾಟ ಮಾಡಬಾರದು. ಎಲ್ಲರೂ ಸಾವಧಾನದಿಂದ ಸಾಮಗ್ರಿಗಳನ್ನು ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು’ ಎಂದು ಅವರು ತಿಳಿಸಿದರು.

‘ಮನೆಯಿಂದ ಯಾರೂ ಸಹ ಹೊರಗಡೆ ಬರುವ ಅಗತ್ಯವಿಲ್ಲ. ಮನೆಬಾಗಿಲಲ್ಲೇ ಆಹಾರ ಸಾಮಗ್ರಿಯ ಮೂಟೆ ಇಳಿಸುವುದರಿಂದ ನಿಶ್ಚಿಂತವಾಗಿ ಮನೆಯೊಳಗೆ ತೆಗೆದುಕೊಳ್ಳಬಹುದು. ಆಹಾರದ ಸಮಸ್ಯೆ ತಲೆದೋರಿ ಜನರು ಮನೆಯಿಂದ ಹೊರಗಡೆ ಬರುವಂತಾಗಬಾರದು ಮತ್ತು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶ ನಮ್ಮದು’ ಎಂದು ಮಹಿಳೆಯೊಬ್ಬರಿಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT