ಶನಿವಾರ, ಡಿಸೆಂಬರ್ 7, 2019
24 °C
‘ನಿಮ್ಜ್‌’ ಕಾರ್ಯಗತಕ್ಕೆ ಹೆಚ್ಚಿದ ಬಲ, ಪರೋಕ್ಷ ಉದ್ಯೋಗ ಸೃಷ್ಟಿಗೆ ರಹದಾರಿ

ರಿಯಲ್‌ ಎಸ್ಟೇಟ್‌, ಪ್ರವಾಸೋದ್ಯಮಕ್ಕೆ ಆನೆಬಲ

ಸಂತೋಷ ಈ. ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ವಿಮಾನ ನಿಲ್ದಾಣದ ಒಳಗೆ ಒಂದು ಉದ್ಯೋಗ ಸೃಷ್ಟಿಯಾದರೆ, ಹೊರಗೆ ನಾಲ್ಕೂವರೆ ಸೃಷ್ಟಿಯಾಗುತ್ತವೆ’ ಎಂಬ ಅರ್ಥಶಾಸ್ತ್ರಜ್ಞ ಜಾನ್ ಬ್ರೂಕ್‌ನರ್ ವ್ಯಾಖ್ಯಾನ ಈಗ ಕಲಬುರ್ಗಿ ಜನರನ್ನೂ ಕನಸಿನಲ್ಲಿ ತೇಲುವಂತೆ ಮಾಡಿದೆ.

ಏರ್‌ಪೋರ್ಟ್‌ ಸುತ್ತಲಿನ ಗ್ರಾಮಗಳ ಜನರಲ್ಲಿ ಪರೋಕ್ಷ ಉದ್ಯೋಗಗಳಿಗೆ ರಹದಾರಿ ಸಿಕ್ಕಂತಾಗಿದೆ. ದಶಕದಿಂದ ಖಾಲಿ ಬಿದ್ದಿದ್ದ ಜಾಗದಲ್ಲಿ ಈಗ ನಾಲ್ಕಾರು ಹೋಟೆಲ್‌, ಪಟ್ಟಿ ಅಂಗಡಿ, ಎಳನೀರು, ಜೂಸ್‌ ಅಂಗಡಿಗಳು ಬಾಗಿಲು ತೆರೆದಿವೆ. ನಿಲ್ದಾಣದ ಮಾರ್ಗದುದ್ದಕ್ಕೂ ಇರುವ ಜಮೀನಿಗೆ ಬಂಗಾರದ ಬೆಲೆ ಬಂದಂತಾಗಿದ್ದು, ರೈತರೂ ಹರ್ಷವಾಗಿದ್ದಾರೆ.

‘ಹೈಕೋರ್ಟ್‌ ಕಲಬುರ್ಗಿ ಪೀಠಕ್ಕೆ ಜಾಗ ಗುರುತಿಸಿದಾಗ ಮಾರನೇ ದಿನದಿಂದಲೇ ಸುತ್ತಲಿನ ಜಾಗ ಖರೀದಿಗೆ ಪೈಪೋಟಿ ಏರ್ಪಟ್ಟಿತ್ತು. ಕೆಲವು ಹೈದರಾಬಾದ್‌ ಮೂಲದ ಉದ್ಯಮಿಗಳೂ ಇಲ್ಲಿ ಬಂದು ಜಾಗ ಖರೀದಿಸಿದ್ದರು. ಸಹಜವಾಗಿಯೇ ಜಿಲ್ಲೆಯಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮ ಚೇತರಿಸಿಕೊಂಡಿತ್ತು. ಈಗ ಅಂಥದ್ದೇ ಸುಸಂಧಿ ಒದಗಿಬಂದಿದೆ. ವಿಮಾನ ನಿಲ್ದಾಣದ ಸುತ್ತಲಿನ ಹಳ್ಳಿಗಳಲ್ಲೂ ಜಾಗಕ್ಕೆ ಹೆಚ್ಚು ಬೆಲೆ ಬಂದಿದೆ. ನೇರವಾಗಿ ಇದು ರಿಯಲ್‌ ಎಸ್ಟೇಟ್‌ ಹಾಗೂ ಇ-ಕಾಮರ್ಸ್‌ಗೆ ರಾಜಮಾರ್ಗ ತೆರೆಯಲಿದೆ’ ಎಂಬುದು ರಿಯಲ್‌ ಎಸ್ಟೇಟ್‌ ಉದ್ಯಮಿ ಗೋಪಾಲ ರೆಡ್ಡಿ ಅವರ ಹೇಳಿಕೆ.

‘ನಿಮ್ಜ್’ಗೆ ಮೂಡಿದ ರೆಕ್ಕೆಪುಕ್ಕ: ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ (ನಿಮ್ಜ್‌) ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿ ಎಂಟು ವರ್ಷವಾಗಿದೆ. ಆದರೂ ಯೋಜನೆಗೆ ರಾಜ್ಯ ಸರ್ಕಾರ ತನ್ನ ಪಾಲಿನ ಕೆಲಸ ಮಾಡಿಲ್ಲ. 2.6 ಲಕ್ಷ ಉದ್ಯೋಗ ಸೃಷ್ಟಿಸಬಲ್ಲ ಬೃಹತ್‌ ಯೋಜನೆ ಇದು.

ಜಿಲ್ಲೆಯಿಂದ ಹೊರ ರಾಜ್ಯ ಹಾಗೂ ಹೊರದೇಶಗಳಿಗೆ ಉತ್ಪನ್ನಗಳನ್ನು ಸಾಗಿಸಲು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲ ಹಾಗೂ ಜಿಲ್ಲೆಯಲ್ಲೂ ಬೃಹತ್‌ ಉದ್ಯಮದ ಮಾರುಕಟ್ಟೆ ಇಲ್ಲ ಎಂಬ ಕಾರಣಕ್ಕೆ ಇಷ್ಟು ವರ್ಷಗಳಿಂದಲೂ ಇದು ಪೆಂಡಿಂಗ್‌ ಬಿದ್ದಿದೆ. ಅತಿಶೀಘ್ರದಲ್ಲೇ ಎರಡು ವಿಮಾನಗಳು ಬೆಂಗಳೂರಿನೊಂದಿಗೆ ನೇರ ಸಂಪರ್ಕ ಕಲ್ಪಿಸಲಿವೆ. ಇದರಿಂದ ಸಹಜವಾಗಿಯೇ ಬೆಂಗಳೂರಿನ ಕೈಗಾರಿಕೋದ್ಯಮಿಗಳ ಚಿತ್ತ ಇತ್ತ ಹರಿದಿದೆ.

‘ಯಾವುದೇ ಕೈಗಾರಿಕೆ ತಲೆ ಎತ್ತಬೇಕೆಂದರೆ ಮಾರುಕಟ್ಟೆ ಹಾಗೂ ಸಂಚಾರ ವ್ಯವಸ್ಥೆಯನ್ನು ಮುಖ್ಯ ಅವಶ್ಯಕತೆಗಳಾಗಿ ಪರಿಗಣಿಸಲಾಗುತ್ತದೆ. ಕಲಬುರ್ಗಿಯಿಂದ ವಿಮಾನ ಸಂಚಾರ ಆರಂಭವಾದ ಕಾರಣ ಸಣ್ಣ, ಮಧ್ಯಮ ಹಾಗೂ ಬೃಹತ್‌ ಕೈಗಾರಿಕೆಗಳಲ್ಲಿ ಹೆಚ್ಚಿನ ಉತ್ಪಾದನೆಗೆ ಸಹಕಾರಿ ಆಗಲಿದೆ. ಇದು ಪರೋಕ್ಷ ಉದ್ಯೋಗಗಳ ಸೃಷ್ಟಿಗೂ ನಾಂದಿ’ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆರ್‌.ರಾಜು ಅಭಿಪ್ರಾಯ ಪಟ್ಟಿದ್ದಾರೆ.

ಪ್ರವಾಸೋದ್ಯಮ ಚೇತರಿಕೆ: ಕಲ್ಯಾಣ ಕರ್ನಾಟಕ ಭಾಗದ ಆರೂ ಜಿಲ್ಲೆಗಳು ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸಿರಿವಂತಿಕೆ ಪಡೆದಿವೆ. ಒಂದಕ್ಕಿಂತ ಒಂದು ವಿಭಿನ್ನ. ಪ್ರವಾಸೋದ್ಯಮ, ಹೋಟೆಲ್‌ ಉದ್ಯಮ, ವಾಹನ ಸಾರಿಗೆ ಕ್ಷೇತ್ರಗಳಲ್ಲಿಯೂ ಉಕ್ಕಿನ ಹಕ್ಕಿ ಹೊಸ ಕನಸು ಮೂಡಿಸಿದೆ.

‘ಉತ್ತರ ಕರ್ನಾಟಕದ ಅನಿವಾಸಿ ಭಾರತೀಯರಿಗೆ ಹುಬ್ಬಳ್ಳಿ ಹಾಗೂ ಕಲಬುರ್ಗಿ ವಿಮಾನ ನಿಲ್ದಾಣಗಳಿಂದ ಹರ್ಷ ಉಂಟಾಗಿದೆ. ಈ ಎರಡೂ ಏರ್‌ಪೋರ್ಟ್‌ಗಳನ್ನು ಅಂತರರಾಷ್ಟ್ರೀಯ ವಿಮಾನಯಾನಕ್ಕೆ ಬಳಸಿಕೊಂಡು, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಸಬಹುದು’ ಎಂದು ನಿವೃತ್ತ ಪೊಲೀಸ್‌ ಅಧಿಕಾರಿ ಶಂಕರ ಬಿದರಿ ಟ್ವೀಟ್‌ ಮಾಡಿದ್ದು ಕೂಡ ಇದಕ್ಕೆ ಒತ್ತುನೀಡಿದೆ.

‘ಕಲಬುರ್ಗಿ ವಿಮಾನ ನಿಲ್ದಾಣ ಉದ್ಘಾಟನೆಗೊಂಡ ಬಳಿಕವೇ ಹೆಚ್ಚು ಅವಕಾಶಗಳು ಲಭಿಸಲಿವೆ. ಜಿಲ್ಲೆಯಲ್ಲಿ ಸಣ್ಣ, ಮಧ್ಯಮ ಹಾಗೂ ಬೃಹತ್‌ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಅವಕಾಶಗಳು ಸಿಗಲಿವೆ. ರಾಜ್ಯ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಿದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಅವರೇ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರತಿಕ್ರಿಯಿಸಿ (+)