ಬುಧವಾರ, ಮಾರ್ಚ್ 29, 2023
25 °C

ನೃಪತುಂಗನ ನೆಲದಲ್ಲಿ ಪ್ರಧಾನಿ ಮೋದಿ ಮೋಡಿ

ಮಲ್ಲಿಕಾರ್ಜುನ ನಾಲವಾರ Updated:

ಅಕ್ಷರ ಗಾತ್ರ : | |

Prajavani

ಮಳಖೇಡ(ಕಲಬುರಗಿ ಜಿಲ್ಲೆ): ಮುಂಜಾನೆಯ ಚಳಿ ಕರಗಿ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದ್ದಂತೆ ಕಾಗಿಣಾ ದಡದ ಮಳಖೇಡದಲ್ಲಿ ಜನ
ಸ್ತೋಮವೂ ವಿಸ್ತರಿಸುತ್ತಲೇ ಸಾಗಿತು. ಸಾಂಪ್ರದಾಯಿಕ ಪೋಷಾಕು ತೊಟ್ಟ ಲಂಬಾಣಿಗರು ‘ಹಾಂಸಲೋ ದೇಯಾ ನಾಚೇನಾ ಜಾಂವುಚು...’ ಹಾಡು ಹಾಡುತ್ತಾ ಬರುತ್ತಿದ್ದರು. ಮಧ್ಯಾಹ್ನ ಬಾನಿನಲ್ಲಿ ಹೆಲಿಕಾಪ್ಟರ್ ಬರುತ್ತಿರುವುದನ್ನು ನೋಡಿ ಪುಳಕಿತರಾದ ಜನಸಮೂಹ, ಒಮ್ಮೆಗೆ ‘ಮೋದಿ,... ಮೋದಿ’ ಎಂದು ಉದ್ಗರಿಸಿದರು.

ಮಳಖೇಡನಲ್ಲಿ ಹಬ್ಬದ ವಾತಾವರಣ ಇತ್ತು. ಇಲ್ಲಿನ ರಾಜ್ಯ ಹೆದ್ದಾರಿಯು ಬಿಜೆಪಿ ಧ್ವಜ, ಪ್ರಧಾನಿ ನರೇಂದ್ರ ಮೋದಿ, ಸಚಿವ ಆರ್.ಅಶೋಕ, ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರ ಭಾವಚಿತ್ರಗಳಿಂದ ತುಂಬಿದ್ದವು.

ಲಂಬಾಣಿ ಮಹಿಳೆಯರು ತಮಟೆಯ ನಾದಕ್ಕೆ ಸಾಂಪ್ರದಾಯಿಕ ಹೆಜ್ಜೆ ಹಾಕಿದರೆ, ಪುರುಷರು ಸೇವಾಲಾಲ್ ಮಹಾರಾಜರ, ಭವಾನಿ ಮಾತೆಯ ಧ್ವಜ ಹಿಡಿದುಕೊಂಡಿದ್ದರು. ಸಾವಿರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಬಿಜೆಪಿ, ಮೋದಿಗೆ ಜೈಕಾರ ಕೂಗುತ್ತಾ ಸಭಿಕರ ಗ್ಯಾಲರಿಯತ್ತ ಬಂದರು.

ಇವು ಪ್ರಧಾನಿ ನರೇಂದ್ರ ಮೋದಿ ಅವರು ಸೇಡಂ ತಾಲ್ಲೂಕಿನ ಮಳಖೇಡನಲ್ಲಿ ನಡೆದ ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಗಳು.

ಕಲಬುರಗಿ, ವಿಜಯಪುರ, ಬೀದರ್, ಯಾದಗಿರಿ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಲಕ್ಷಾಂತರ ಜನರು ಬೆಳಿಗ್ಗೆಯಿಂದಲೇ ಮಳಖೇಡನತ್ತ ಪ್ರಯಾಣಿಸಿದರು. ವೇದಿಕೆ ಮುಂಭಾಗದ ಐದು ಸಭಿಕರ ಗ್ಯಾಲರಿಗಳು ಭರ್ತಿಯಾಗಿದ್ದರೂ ಜನರು ತಂಡೋಪತಂಡವಾಗಿ ಸೇಡಂ ಮತ್ತು ಕಲಬುರಗಿ ಮಾರ್ಗದ ರಸ್ತೆಗಳಿಂದ ಹರಿದು ಬರುತ್ತಿದ್ದರು.

ಊಟ ಬಡಿಸುವ ಮೈದಾನ, ವೇದಿಕೆ ಬಲಬದಿಯ ಖಾಲಿ ಆವರಣ ಸಹ ಜನರಿಂದ ತುಂಬಿತ್ತು. ಸಾವಿರಾರು ವಾಹನಗಳು ದೂರದಲ್ಲಿ ನಿಲ್ಲಿಸಿದ್ದರಿಂದ ಜನರು ನಡೆದುಕೊಂಡು ಬರುತ್ತಿದ್ದು, ಪೊಲೀಸರು ಅವರಿಗೆ ಹೊರಡಬೇಕಾದ ಮಾರ್ಗ, ಗ್ಯಾಲರಿಯ ಹಾದಿ ತೋರಿಸುತ್ತಿದ್ದರು. ವೇದಿಕೆಯ ಪ್ರವೇಶದ್ವಾರದಲ್ಲಿ ಭದ್ರತಾ ಸಿಬ್ಬಂದಿ ಜನರನ್ನು ತಪಾಸಣೆ ಮಾಡಿ, ಒಳಬಿಡುತ್ತಿದ್ದರು. ಕಪ್ಪು ಬಣ್ಣದ ಯಾವುದೇ ತರಹದ ಬಟ್ಟೆ ಒಯ್ಯದಂತೆ ನಿರ್ಬಂಧಿಸಿದ್ದರು. ಮೋದಿ ಆಗಮನಕ್ಕೂ ಮುನ್ನ ನಡೆದ ಗೀತೆಗಳ ಗಾಯನವು ನೆರೆದವರನ್ನು ರಂಜಿಸಿತು.

ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಸಾಂಕೇತಿಕವಾಗಿ ವಿತರಿಸಿ ಭಾಷಣ ಆರಂಭಿಸುತ್ತಿದ್ದಂತೆ ವೇದಿಕೆ ಮುಂಭಾಗದಲ್ಲಿ ಕುಳಿತ್ತಿದ್ದ ಸಭಿಕರು ಎದ್ದು ಹೊರಬರುತ್ತಿದ್ದರು. ಮೋದಿ ಆಗಮನದಲ್ಲಿ ಇದ್ದ ಉತ್ಸಾಹ ಭಾಷಣದ ವೇಳೆ ಇಲ್ಲದಂತೆ ಆಯಿತು. ಸ್ವಗ್ರಾಮ, ತಾಂಡಾಗಳಿಗೆ ತೆರಳಲು ವಾಹನಗಳತ್ತ ನಡೆದರು.

ನಗಾರಿ ಬಾರಿಸಿದ ಮೋದಿ: ಬಂಜಾರ ಸಮುದಾಯವನ್ನು ಪ್ರತಿನಿಧಿಸುವ ನಗಾರಿಯನ್ನು ಪ್ರಧಾನಿ ಮೋದಿ ಅವರು ಪರಿಣಿತರಂತೆ ಬಾರಿಸಿ, ನೆರೆದವರನ್ನು ರಂಜಿಸಿದರು. ವೇದಿಕೆ ಮೇಲಿದ್ದ ಗಣ್ಯರು ಚಪ್ಪಾಳೆ ತಟ್ಟಿದರು.

ರಸ್ತೆಯುದಕ್ಕೂ ಪೊಲೀಸ್ ಪಡೆ: ಕಲಬುರಗಿ ನಗರದಿಂದ ಮಳಖೇಡವರೆಗೆ ರಸ್ತೆ ಬದಿಯ ಎರಡೂ ಕಡೆ ಅಲ್ಲಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪ್ರಧಾನಿಯ ಭದ್ರತೆ ದೃಷ್ಟಿಯಿಂದ ಅಂಗಡಿ ಮುಗಟ್ಟು ಬಂದ್ ಮಾಡಲಾಗಿತ್ತು. ವರ್ತಕರ ವ್ಯಾಪಾರ ವಹಿವಾಟು ಸ್ಥಗಿತವಾಗಿ, ನಷ್ಟ ಕಂಡರು.

ಊಟ ಖಾಲಿ; ಅನ್ನಕ್ಕಾಗಿ ನೂಕಾಟ: ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಜನರು ಬಂದಿದ್ದರಿಂದ ಮಧ್ಯಾಹ್ನ 2 ಗಂಟೆಗೆ ಊಟ ಖಾಲಿ ಆಗಿತ್ತು. ವಿವಿಧ ಜಿಲ್ಲೆ, ತಾಲ್ಲೂಕು, ಗ್ರಾಮಗಳಿಂದ ಬಂದಿದ್ದ ಸಾವಿರಾರು ಜನ ಹಸಿದಿದ್ದರು. ಸರಿಯಾಗಿ ಊಟ ಸಿಗದ ಕಾರಣ ಪಾತ್ರೆಯಲ್ಲಿ ಸೀದು ಹೋಗಿದ್ದ ಅನ್ನಕ್ಕಾಗಿ ಜನರ ನಡುವೆ ನೂಕಾಟ ಜೋರಾಯಿತು. ಕೆಲ ಹೊತ್ತು ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು. ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ತಾವೇ ಮುಂದೆ ನಿಂತು ಹಸಿದವರಿಗೆ ನೀರಿನ ಬಾಟಲ್‌ ಕೊಟ್ಟರು.

ಮೋದಿ ನೋಡಲು ಮರ ಏರಿದ ಯುವಕರು

ಪ್ರಧಾನಿ ನರೇಂದ್ರ ಮೋದಿ ಅವರಿದ್ದ ಹೆಲಿಕಾಪ್ಟರ್ ವೇದಿಕೆ ಹಿಂಭಾಗದ ಹೆಲಿಪ್ಯಾಡ್‌ನಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ರಸ್ತೆಯಲ್ಲಿ ಸಾಗುತ್ತಿದ್ದ ಹತ್ತಾರು ಯುವಕರು ಮರ ಏರಿ ಮೋದಿ ನೋಡಲು ಯತ್ನಿಸಿದರು.

ಮರ ಹತ್ತುವ ಭರದಲ್ಲಿ ಯುವಕನೊಬ್ಬ ಜಾರಿ ಬಿದ್ದು ಮತ್ತೆ ಏರಿದ. ಕೆಲಹೊತ್ತು ಮರದಲ್ಲಿ ನಿಂತು ಬಳಿಕ ಕೆಳಗೆ ಇಳಿದರು.

ಫಲಾನುಭವಿಗಳಿಗಾಗಿ ಹುಡುಕಾಟ

ಕಾರ್ಯಕ್ರಮದಲ್ಲಿ ಹಕ್ಕುಪತ್ರಗಳನ್ನು ನೀಡುವುದಾಗಿ ಹೇಳಿ ಕರೆತಂದಿದ್ದ ಫಲಾನುಭವಿಗಳಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಕಂದಾಯ ಇಲಾಖೆಗಳ ಸಿಬ್ಬಂದಿ ಹುಡುಕಾಟ ನಡೆಸಿದರು.

ಬಸ್‌ನಿಂದ ಇಳಿದ ಫಲಾನುಭವಿಗಳು ವೇದಿಕೆಯತ್ತ ಬರುವ ಮಾರ್ಗದ ಗದ್ದಲದಲ್ಲಿ ತಪ್ಪಿಸಿಕೊಂಡು ಉಸ್ತುವಾರಿ ಹೊತ್ತಿದ್ದ ಸಿಬ್ಬಂದಿಗೆ ಕಾಣಿಸಲಿಲ್ಲ. ಕೈಯಲ್ಲಿ ಹಕ್ಕುಪತ್ರಗಳನ್ನು ಹಿಡಿದು, ಸುಮ್ಮನೆ ನಿಂತಿದ್ದರು. ಮತ್ತೊಂದು ಕಡೆ ಫಲಾನುಭವಿಗಳು ಹಕ್ಕುಪತ್ರ ಪಡೆಯಲು ಸಿಬ್ಬಂದಿಗಾಗಿ ಪರದಾಡಿದರು.

ಊಟ ಖಾಲಿ; ಅನ್ನಕ್ಕಾಗಿ ನೂಕಾಟ

ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಜನರು ಬಂದಿದ್ದರಿಂದ ಮಧ್ಯಾಹ್ನ 2 ಗಂಟೆಗೆ ಊಟ ಖಾಲಿ ಆಗಿತ್ತು. ವಿವಿಧ ಜಿಲ್ಲೆ, ತಾಲ್ಲೂಕು, ಗ್ರಾಮಗಳಿಂದ ಬಂದಿದ್ದ ಸಾವಿರಾರು ಜನ ಹಸಿದಿದ್ದರು. ಸರಿಯಾಗಿ ಊಟ ಸಿಗದ ಕಾರಣ ಪಾತ್ರೆಯಲ್ಲಿ ಸೀದು ಹೋಗಿದ್ದ ಅನ್ನಕ್ಕಾಗಿ ಜನರ ನಡುವೆ ನೂಕಾಟ ಜೋರಾಯಿತು. ಕೆಲ ಹೊತ್ತು ಗೊಂದಲದ ಪರಿಸ್ಥಿತಿ ನಿರ್ಮಾಣವಾಯಿತು. ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ತಾವೇ ಮುಂದೆ ನಿಂತು ಹಸಿದವರಿಗೆ ನೀರಿನ ಬಾಟಲ್‌ ಕೊಟ್ಟರು.

ಮಜ್ಜಿಗೆಗಾಗಿ ನೂಕುನುಗ್ಗಲು: ಲಾಠಿ ಏಟು

ಅಡುಗೆ ತಯಾರಿಕೆಯ ಸಮೀಪದ ಮಜ್ಜಿಗೆ ತುಂಬಿದ್ದ ಲಾರಿ ನಿಲ್ಲಿಸಲಾಗಿತ್ತು. ಊಟ ಸಿಗದೆ ಪರದಾಡುತ್ತಿದ್ದ ಕೆಲವರು ವಾಹನದತ್ತ ಓಡಿ ಬಂದು ಮಜ್ಜಿಗೆಗಾಗಿ ಕೈಚಾಚಿದರು. ಈ ವೇಳೆ ನುಕುನುಗ್ಗಲು ಉಂಟಾಯಿತು.

ಪರಿಸ್ಥಿತಿ ನಿಯಂತ್ರಿಸಲು ಪೊಲೀಸ್ ಕಾನ್‌ಸ್ಟೆಬಲ್‌ ಒಬ್ಬ ಲಾಠಿ ಬೀಸಿ, ನೆರೆದವರನ್ನು ತಳ್ಳಿದರು. ಈ ವೇಳೆ ಇಬ್ಬರು ನೆಲಕ್ಕೆ ಉರುಳಿ ಬಿದ್ದು, ತರುಚಿದ ಗಾಯಗಳಾದವು.

267 ಜನರಿಗೆ ಆರ್‌ಟಿಪಿಸಿಆರ್‌ ಪರೀಕ್ಷೆ

ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಕಳೆದು ಮೂರು ದಿನಗಳಲ್ಲಿ ಕಂದಾಯ ಸಚಿವ ಆರ್.ಅಶೋಕ್, ಜಿಲ್ಲಾಧಿಕಾರಿ ಯಶವಂತ್ ಗುರುಕರ್, ಎಸ್‌ಪಿ ಇಶಾ ಪಂತ್, ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಸೇರಿ 267 ಜನರಿಗೆ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಯಿತು’ ಎಂದು ಡಾ.ಸಂಗೀತಾ ಚವ್ಹಾಣ್ ತಿಳಿಸಿದರು.

‘ಪರೀಕ್ಷೆಯಲ್ಲಿ ಯಾವುದೇ ಪಾಸಿಟಿವ್ ಫಲಿತಾಂಶ ಕಂಡುಬಂದಿಲ್ಲ. ತಲೆ ನೋವು, ಕೆಮ್ಮು, ಮೈಕೈನೋವು, ನೆಗಡಿ, ಶೀತವೆಂದು ಬಂದ ಸಾರ್ವಜನಿಕರಿಗೂ ಔಷಧಿ ನೀಡಲಾಗಿದೆ’ ಎಂದರು.

ಬಾಬುರಾವ್ ಚಿಂಚನಸೂರಗೆ ಸಿಗದ ಅವಕಾಶ

ಕಾರ್ಯಕ್ರಮದ ವೇದಿಕೆಗೆ ತೆರಳುತ್ತಿದ್ದ ವಿಧಾನ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ ಅವರನ್ನು ಪ್ರಧಾನಿಯ ಭದ್ರತಾ ಸಿಬ್ಬಂದಿ ತಡೆದು, ‘ಶಿಷ್ಟಾಚಾರ ಅನ್ವಯ ಪಟ್ಟಿಯಲ್ಲಿ ಹೆಸರು ಇದ್ದವರಿಗೆ ಮಾತ್ರ ವೇದಿಕೆಯತ್ತ ಬಿಡಲಾಗುವುದು’ ಎಂದು ಅವರನ್ನು ವಾಪಸ್ ಕಳುಹಿಸಿದರು.

‘ನಾನು ಐದು ಬಾರಿ ಶಾಸಕನಾಗಿ, ಹಲವು ಖಾತೆಗಳನ್ನು ನಿರ್ವಹಿಸಿದ್ದೇನೆ. ದೊಡ್ಡ ಸಮುದಾಯದ ಹಿರಿಯ ಮುಖಂಡ. ನನಗೆ ಏಕೆ ಅನುಮತಿಸುವುದಿಲ್ಲ’ ಎಂದು ಪ್ರಶ್ನಿಸಿದರು. ‘ಮೋದಿ ಬಂದ ಕೆಲಹೊತ್ತಿನ ಬಳಿಕ ನಿಮಗೂ ಸೇರಿದಂತೆ ಇತರೆ ಸಚಿವರನ್ನು ಅನುಮತಿಸಲಾಗುವುದು’ ಎಂದು ಕಳುಹಿಸಿದರು.

500 ಜನರಿಂದ ಅಡುಗೆ ತಯಾರಿ

ಬೆಂಗಳೂರಿನ ಅನ್ನಪೂರ್ಣೇಶ್ವರಿ ಕ್ಯಾಟರಿಂಗ್ ತಂಡದ 500 ಅಡುಗೆ ಭಟ್ಟರು ಕಳೆದ ಎರಡು ದಿನಗಳಿಂದ ಆಹಾರ ತಯಾರಿಕೆಯಲ್ಲಿ ನಿರತವಾಗಿದ್ದರು. 300 ಕ್ವಿಂಟಲ್ ಅಕ್ಕಿ, 50 ಕ್ವಿಂಟಲ್ ತೊಗರಿ ಬೇಳೆ, 450 ಟೀನ್ ಎಣ್ಣೆ, 5 ಕ್ವಿಂಟಲ್ ಹೆಸರು ಬೇಳೆ, 2.5 ಕ್ವಿಂಟಾಲ್ ಕಡಲೆ ಬೇಳೆ, 20 ಕ್ವಿಂಟಲ್ ತರಕಾರಿ, 20 ಕ್ವಿಂಟಲ್ ಈರುಳ್ಳಿ, 5 ಕ್ವಿಂಟಲ್ ಬೆಳ್ಳೂಳ್ಳಿ ಬಳಕೆಯಾದವು. 3 ಲಕ್ಷ ಮೈಸೂರು ಪಾಕ್ ಸಹ ಸಿದ್ಧಪಡಿಸಲಾಗಿತ್ತು.

600 ಜನರು ಲಕ್ಷಾಂತರ ಜನರಿಗೆ ಅಡುಗೆ ಬಡಿಸಿದರು. ಜತೆಗೆ 600 ಸ್ವಯಂ ಸೇವಕರು ಸಾಥ್ ನೀಡಿದರು. ಸುಮಾರು 7,000 ಊಟಗಳನ್ನು ಪ್ಯಾಕಿಂಗ್ ಮೂಲಕ ಭದ್ರತೆ, ಇತರೆ ಕೆಲಸದಲ್ಲಿ ನಿರತವಾದ ಅಧಿಕಾರಿಗಳಿಗೆ ಕಳುಹಿಸಲಾಯಿತು. ಅರ್ಧ ಲೀಟರ್‌ನ ಐದು ಲಕ್ಷ ನೀರಿನ ಬಾಟಲ್‌ ವಿತರಿಸಲಾಯಿತು.

ರಾಷ್ಟ್ರಕೂಟರ ಸ್ಮರಿಸುವ ವೇದಿಕೆ

ರಾಷ್ಟ್ರಕೂಟರ ರಾಜಧಾನಿ ಮಾನ್ಯಖೇಟದ (ಈಗಿನ ಮಳಖೇಡ) ವೈಭವ ಸ್ಮರಿಸುವ ವೇದಿಕೆ ನಿರ್ಮಿಸಲಾಯಿತು. ರಾಷ್ಟ್ರಕೂಟರ ವಾಸ್ತುಶಿಲ್ಪ ವಿನ್ಯಾಸವೂ ಗಮನ ಸೆಳೆಯಿತು. ಬಸವಣ್ಣ, ಶಿವಶರಣ ಸಮಗಾರ ಹರಳಯ್ಯ, ನಿಜಶರಣ ಅಂಬಿಗರ ಚೌಡಯ್ಯ, ಸಂತ ಸೇವಾಲಾಲ್, ಭಕ್ತ ಕನಕದಾಸ, ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿತ್ರಗಳನ್ನು ಅಳವಡಿಸಲಾಗಿತ್ತು.

ಸ್ವಚ್ಛತೆಗೆ ಪಾಲಿಕೆ, ಗ್ರಾ.ಪಂ ಸಿಬ್ಬಂದಿ ಬಳಿಕೆ

ಊಟದ ಸ್ಥಳ, ವೇದಿಕೆ ಸುತ್ತಲಿನ ಪ್ರದೇಶದ ಸ್ವಚ್ಛತೆಗೆ ಮಹಾನಗರ ಪಾಲಿಕೆಯ 400 ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಯ ಸ್ವಚ್ಛತಾ ಸಿಬ್ಬಂದಿ ನಿಯೋಜನೆಗೊಂಡಿದ್ದರು.

ಐದು ಟ್ರ್ಯಾಕ್ಟರ್, 8 ಬುಲೆರೊ ವಾಹನ, ಎರಡು ಗ್ರಾ.ಪಂ ವಾಹನಗಳು ತ್ಯಾಜ್ಯ ತೆರವಿಗೆ ಬಳಕೆಯಾದವು. ಊಟದ ತಟ್ಟೆ, ನೀರಿನ ಬಾಟಲ್‌ಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ಮೈಕ್‌ನಲ್ಲಿ ಎಚ್ಚರಿಸಲಾಗುತ್ತಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು