ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕಗಳ ಹೋರಾಟಕ್ಕೆ ಸಿಕ್ಕ ಸ್ಪಂದನೆ: ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ

Last Updated 19 ಜನವರಿ 2023, 5:59 IST
ಅಕ್ಷರ ಗಾತ್ರ

ಕಲಬುರಗಿ: ತಾಂಡಾಗಳಿಗೆ ಮತ್ತು ಹಟ್ಟಿಗಳ ಜನರ ನೆಲೆಗಳಿಗೆ ಹಕ್ಕುಪತ್ರದ ಮೂಲಕ ಭದ್ರತೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಮುನ್ನುಡಿ ಬರೆಯಲಿದ್ದಾರೆ.

ನಾಲ್ಕು ವರ್ಷದ ಹಿಂದೆ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಕಲಬುರಗಿಗೆ ಬಂದಿದ್ದ ಅವರು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಗುರುವಾರ (ಜನವರಿ 19) ಮತ್ತೆ ಜಿಲ್ಲೆಗೆ ಬಂದು, ವಿಜಯಪುರ ಮತ್ತು ಕಲ್ಯಾಣ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳ 52,072 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವರು.

ಕರ್ನಾಟಕ ರಾಜ್ಯವು ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಇದ್ದು, ಪ್ರಧಾನಿ ಮೋದಿ ಅವರು ಕಳೆದ ವಾರ (ಜ.12) ಹುಬ್ಬಳ್ಳಿಗೆ ಬಂದಿದ್ದರು. ಒಂದು ವಾರದ ಅವಧಿಯಲ್ಲಿ ಮತ್ತೆ ರಾಜ್ಯಕ್ಕೆ ಬರುತ್ತಿದ್ದಾರೆ. ಅವರ ಈ ಭೇಟಿ ರಾಜಕೀಯವಾಗಿಯೂ ಮಹತ್ವ ಪಡೆದುಕೊಂಡಿದೆ.

ಗುರುವಾರ ಕಲಬುರಗಿಯ ಸೇಡಂ ತಾಲ್ಲೂಕಿನ ಮಳಖೇಡನಲ್ಲಿ ಲಂಬಾಣಿ ತಾಂಡಾ, ಗೊಲ್ಲರಹಟ್ಟಿ ಸಮುದಾಯದವರಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಕಲಬುರಗಿ-27,267, ಬೀದರ್-7,500, ರಾಯಚೂರು-3,500, ಯಾದಗಿರಿ-11,200 ಹಾಗೂ ವಿಜಯಪುರ-2,605 ಸೇರಿದಂತೆ ಒಟ್ಟು 52,072 ಫಲಾನುಭವಿಗಳಿಗೆ ಹಕ್ಕುಪತ್ರ ಭಾಗ್ಯ ಸಿಗಲಿದೆ. ಕಂದಾಯ ಗ್ರಾಮ ಮಾನ್ಯತೆಗಾಗಿ ತಾಂಡಾ ನಿವಾಸಿಗಳು ದಶಕಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದವು. ಈಗ ಕಾಲ ಕೂಡಿಬಂದಿದೆ.

ಮೋದಿ ಆಗಮನದ ದಿನಾಂಕ, ಸ್ಥಳ ನಿಗದಿ ಆಗುತ್ತಿದ್ದಂತೆ ಕಾರ್ಯಕ್ರಮದ ಯಶಸ್ಸಿಗಾಗಿ ಜಿಲ್ಲಾಡಳಿತ, ರಾಜ್ಯ ಸರ್ಕಾರವು ಸರಣಿ ಸಭೆಗಳನ್ನು ನಡೆಸಿತ್ತು. ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸುವಂತೆ ಕಂದಾಯ ಇಲಾಖೆಯ ಕಾರ್ಯದರ್ಶಿ ಎನ್. ಜಯರಾಂ ಅವರು ಸಹ ಕಲಬುರಗಿ, ಬೀದರ್, ರಾಯಚೂರು ಹಾಗೂ ವಿಜಯಪುರ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ.

ಐದು ಜಿಲ್ಲೆಗಳಿಂದ ಫಲಾನುಭವಿಗಳನ್ನು ಕರೆತರಲು 2,500 ಬಸ್ ವ್ಯವಸ್ಥೆ ಮಾಡಲಾಗಿದೆ. ಅವರಿಗಾಗಿ ಉಪಾಹಾರ, ಊಟ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ.

ವರ್ಣಚಿತ್ರ ಸ್ಮರಣಿಕೆ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಲಾವಿದ ಜೆ.ಎಸ್ ಖಂಡೇರಾವ್‌ ಅವರು ಚಿತ್ರಿಸಿದ ಅನುಭವ ಮಂಟಪದ ವರ್ಣ ಚಿತ್ರವನ್ನು ಸ್ಮರಣಿಕೆಯಾಗಿ ನೀಡಿ, ಲಂಬಾಣಿ ಸಂಪ್ರದಾಯದ ಕವಡೆ ಹಾರ ಹಾಕಿ ಸ್ವಾಗತಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕನ್ನಡದಲ್ಲಿ ಪ್ರಧಾನಿ ಟ್ವೀಟ್: ‘ಕರ್ನಾಟಕದ ಜನರ ನಡುವೆ ಇರಲು ನಾನು ಉತ್ಸುಕನಾಗಿದ್ದೇನೆ. ಸುಮಾರು ₹ 10,000 ಕೋಟಿ ಮೌಲ್ಯದ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಅಥವಾ ಶಂಕುಸ್ಥಾಪನೆ ನೆರವೇರಿಸಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.

‘ಚಾಲನೆ ನೀಡಲಿರುವ ಕಾಮಗಾರಿಗಳು ಜಲ ಶಕ್ತಿ, ರಸ್ತೆಗಳು ಒಳಗೊಂಡಿವೆ. ಹೊಸದಾಗಿ ಘೋಷಿಸಲಾದ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗುವುದು’ ಎಂದು ತಿಳಿಸಿದ್ದಾರೆ.

ವೇದಿಕೆ ಮೇಲೆ 18 ಗಣ್ಯರು: ‘ವೇದಿಕೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರು ಸೇರಿ 18 ಗಣ್ಯರು ಕೂರುವರು’ ಎಂದು ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

60 ಎಕರೆ ವಿಶಾಲ ಪ್ರದೇಶದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮಕ್ಕೆ 30 ಎಕರೆ ಜಾಗ ಬಳಸಿಕೊಳ್ಳಲಾಗಿದೆ.

ಮುಖ್ಯವೇದಿಕೆಯ ಎಡ–ಬಲದಲ್ಲಿ ತಲಾ ಎರಡು ಮತ್ತು ಮಧ್ಯದಲ್ಲಿ ಒಂದು ಸೇರಿ ಐದು ಸಭಿಕರ ಗ್ಯಾಲರಿಗಳನ್ನು ನಿರ್ಮಿಸಲಾಗಿದೆ. 1 ಲಕ್ಷ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, 25ಕ್ಕೂ ಹೆಚ್ಚು ಎಲ್‌ಸಿಡಿ ಪರದೆಗಳಿವೆ. ಬಸವಣ್ಣ, ಸೇವಾಲಾಲ್, ಹರಳಯ್ಯ ಮತ್ತು ಕನಕದಾಸರ ಭಾವಚಿತ್ರಗಳು ವೇದಿಕೆ ಬದಿಯಲ್ಲಿ ಹಾಕಲಾಗಿದೆ.

ಬಿಗಿ ಬಂದೋಬಸ್ತ್‌; ಡ್ರೋನ್ ಕ್ಯಾಮೆರಾ ನಿಷೇಧ

‘ಪ್ರಧಾನಿ ಕಾರ್ಯಕ್ರಮಕ್ಕೆ ಒಬ್ಬರು ಐಜಿಪಿ, 9 ಐಪಿಎಸ್‌ ಮಟ್ಟದ ಅಧಿಕಾರಿಗಳು, 13 ಡಿಎಸ್‌ಪಿ, 30 ಇನ್ಸ್‌ಪೆಕ್ಟರ್, 100 ಕಾನ್ಸ್‌ಟೆಬಲ್, 500 ಗೃಹರಕ್ಷಕ ದಳದ ಸಿಬ್ಬಂದಿ, 108 ಪಿಎಸ್‌ಐ, 16 ಕೆಎಸ್‌ಆರ್‌ಪಿ, 6 ಸಶಸ್ತ್ರ ಮೀಸಲು ಪಡೆ ಸೇರಿ ಹಲವರನ್ನು ಭದ್ರತೆಗೆ ನಿಯೋಜಿಸಲಾಗಿದೆ’ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್ ತಿಳಿಸಿದ್ದಾರೆ.

ಕಾರ್ಯಕ್ರಮ ಸ್ಥಳದ ಭದ್ರತೆ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ‘ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ವೇದಿಕ ಕಾರ್ಯಕ್ರಮದ ಭದ್ರತೆ ಒದಗಿಸುವ ಬಗ್ಗೆ ಮತ್ತೊಂದು ಸಭೆ ನಡೆಸಿ ಸಲಹೆ, ಸೂಚನೆ ನೀಡಲಾಗುವುದು’ ಎಂದರು. ಭದ್ರತಾ ದೃಷ್ಟಿಯಿಂದ ಮಳಖೇಡ ಗ್ರಾಮ, ಕಾರ್ಯಕ್ರಮದ ಸ್ಥಳ ಹಾಗೂ ತಾತ್ಕಾಲಿಕ ನಿರ್ಮಿಸಲಾದ ಹೆಲಿಪ್ಯಾಡ್ ಸಮೀಪ ಯಾವುದೇ ಡ್ರೋನ್ ಕ್ಯಾಮೆರಾ ಹಾರಿಸದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಭಾರಿ ವಾಹನಗಳಿಗೆ ಬದಲಿ ಮಾರ್ಗ

ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಲಬುರಗಿಯಿಂದ ಮಳಖೇಡ, ಸೇಡಂ ಮೂಲಕ ಹೈದರಾಬಾದ್‌ಗೆ ತೆರಳುವ ಭಾರಿ ವಾಹನಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಹೈದರಾಬಾದ್‌ಗೆ ಸಾಗುವ ವಾಹನಗಳು ಟೆಂಗಳಿ ಕ್ರಾಸ್‌ನಿಂದ ಟೆಂಗಳಿ, ಮಂಗಲಗಿ, ರಾಯಕೋಡ್‌ ಭೂತಪೂರ, ಯಲ್ಲಮ್ಮ ಗೇಟ್, ಸೇಡಂ, ಚಿಂಚೋಳಿ ಕ್ರಾಸ್, ವಿಸಿಎಫ್‌ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ.

ಹೈದರಾಬಾದ್‌ ಕಡೆಯಿಂದ ಬರುವ ವಾಹನಗಳು ರಿಬ್ಬನಪಲ್ಲಿ ಕ್ರಾಸ್‌ನಿಂದ ಮೆದಕ, ಯಾನಾಗುಂದಿ, ಗುರಮಿಠಕಲ್, ಗಾಜರಕೋಟ, ಭೀಮಳ್ಳಿ ಕ್ರಾಸ್, ಚಿತ್ತಾಪುರ, ರಾವೂರ, ಶಹಾಬಾದ್ ಮಾರ್ಗವಾಗಿ ಕಲಬುರಗಿಗೆ ತೆರಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಸೇಡಂದಿಂದ ಕಲಬುರಗಿಗೆ ಬರುವ ವಾಹನಗಳು ಊಡಗಿ, ಹಂಗನಳ್ಳಿ, ಆರ್‌ಸಿಎಫ್, ದರ್ಗಾ ಕ್ರಾಸ್, ಚಿತ್ತಾಪುರ ರೋಡ್, ದಂಡೋತಿ ಕ್ರಾಸ್, ದಂಡೋತಿ, ಟೆಂಗಳಿ ಕ್ರಾಸ್‌ನಿಂದ ಹೊರಡಬೇಕು. ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಅವರು ತಿಳಿಸಿದ್ದಾರೆ.

ಸ್ಟಾರ್‌ಏರ್ ವಿಮಾನ ಸೇವೆ ತಾತ್ಕಾಲಿಕ ರದ್ದು

‘ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಟಿಯಿಂದ ಸ್ಟಾರ್‌ಏರ್ ವಿಮಾನ ಸೇವೆ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ’ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಡಾ.ಚಿಲಕಾ ಮಹೇಶ ತಿಳಿಸಿದರು.

‘1.30 ಬಂದು 2.30ಕ್ಕೆ ತೆರಳುವ ಅಲೈನ್ಸ್ ಏರ್ ವಿಮಾನವು ಎರಡು ಗಂಟೆ ವಿಳಂಬವಾಗಿ ಬಂದು, ನಿಲ್ದಾಣದಿಂದ ಹೊರಡಲಿದೆ. ಮರುದಿನದಿಂದ ಎಂದಿನಂತೆ ವಿಮಾನಗಳ ಹಾರಾಟ ಇರಲಿದೆ’ ಎಂದರು.

ಕಪ್ಪ ಬಟ್ಟೆ ಪ್ರದರ್ಶನ, ಪ್ರತಿಭಟನೆ ನಡೆಸದಂತೆ ಎಚ್ಚರಿಕೆ

ಮೋದಿ ಕಾರ್ಯಕ್ರಮಕ್ಕೆ ಬರುವ ಸಭಿಕರು ನೀರಿನ ಬಾಟ್ಲಿ, ಬೀಡಿ, ಸಿಗರೇಟ್, ಬೆಂಕಿ ಪೊಟ್ಟಣ, ಮಾದಕ ವಸ್ತು, ಗುಟಕಾ ಪ್ಯಾಕೆಟ್‌ನಂತಹ ವಸ್ತು ತರುವಂತಿಲ್ಲ ಎಂದು ಜಿಲ್ಲಾ ಪೊಲೀಸ್ ಅಧೀಕ್ಷರು ತಿಳಿಸಿದ್ದಾರೆ.

ಸಾರ್ವಜನಿಕರು, ಮುಖಂಡರು ನಿಗದಿಪಡಿಸಿದ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಬೇಕು. ಸಂಘ ಸಂಸ್ಥೆಗಳ ಸದಸ್ಯರು,
ಮುಖಂಡರು ಯಾವುದೇ ಬೇಡಿಕೆಗಳನ್ನು ಇರಿಸಿಕೊಂಡು ಮಾರ್ಗ ಮಧ್ಯದಲ್ಲಿ ಪ್ರತಿಭಟನೆ, ಮೆರವಣಿಗೆ ಮಾಡಿ ಘೋಷಣೆ ಕೂಗುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಭದ್ರತೆಗೆ ನಿಯೋಜನೆಗೊಂಡ ಸಿಬ್ಬಂದಿ ಮತ್ತು ಪೊಲೀಸರಿಗೆ ಸಾರ್ವಜನಿಕರು ಸಹಕರಿಸಬೇಕು. ಕಪ್ಪು ಬಣ್ಣದ ಶಾಲು, ಬಟ್ಟೆ ಧರಿಸಿಕೊಂಡು ಬರುವಂತಿಲ್ಲ. ಗಣ್ಯರ ಸನ್ಮಾನಕ್ಕೆ ಹಾರ–ತೂರಾಯಿ ಹಾಕುವಂತಿಲ್ಲ ಎಂದಿದ್ದಾರೆ.

ಮೋದಿ ಅವರ ಕಾರ್ಯಕ್ರಮ ಪಟ್ಟಿ

l ಬೆಳಿಗ್ಗೆ 9 ವಾಯುಪಡೆಯ ವಿಶೇಷ ವಿಮಾನದ ಮೂಲಕ ದೆಹಲಿಯಿಂದ ಹೊರಡುವರು

l ಬೆಳಿಗ್ಗೆ 11 ಕಲಬುರಗಿ ವಿಮಾನ ನಿಲ್ದಾಣಕ್ಕೆ ಬರುವರು

l ಬೆಳಿಗ್ಗೆ 11.05 ಹೆಲಿಕಾಪ್ಟರ್ ಮೂಲಕ ಯಾದಗಿರಿ ಜಿಲ್ಲೆಯ ಕೊಡೇಕಲ್‌ಗೆ ತೆರಳುವರು

l ಮಧ್ಯಾಹ್ನ 1.10 ಕೊಡೇಕಲ್‌ ಹೆಲಿಪ್ಯಾಡ್‌ನಿಂದ ಹೊರಡುವರು

l ಮಧ್ಯಾಹ್ನ 2.05 ಸೇಡಂ ತಾಲ್ಲೂಕಿನ ಮಳಖೇಡ ಬಳಿ ನಿರ್ಮಿಸಿರುವ ಹೆಲಿಪ್ಯಾಡ್‌ಗೆ ಆಗಮನ

l ಮಧ್ಯಾಹ್ನ 2.10 ಕಾರ್ಯಕ್ರಮದ ವೇದಿಕೆ ಆಗಮನ

l ಮಧ್ಯಾಹ್ನ 2.15 ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

l ಮಧ್ಯಾಹ್ನ 3.05 ಹೆಲಿಪ್ಯಾಡ್‌ನಿಂದ ಹೊರಡುವರು

l ಮಧ್ಯಾಹ್ನ 3.30 ಕಲಬುರಗಿ ವಿಮಾನ ನಿಲ್ದಾಣಕ್ಕೆ ಪ್ರಯಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT